Honnavar, Drinking, Water,Problem, ಕುಡಿಯುವ, ನೀರಿಗೂ, ತತ್ವಾರ,

ಕುಡಿಯುವ ನೀರಿಗೂ ತತ್ವಾರ

ಹೊನ್ನಾವರ: ಮೇ ತಿಂಗಳು ಕಳೆಯುತ್ತ ಬಂದರೂ ತಾಲೂಕಿನಾದ್ಯಂತ ಬಿರು ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚುತ್ತಿದೆ. ಹಿಂದೆಂದೂ ಕಾಣದಂಥ ನೀರಿನ ಬರ ಹೊನ್ನಾವರದ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ.

ಜಿಲ್ಲಾದ್ಯಂತ ಕಳೆದ ಸಾಲಿಗಿಂತ ಈ ಬಾರಿ ಶೇ. 35 ರಷ್ಟು ಅಂತರ್ಜಲ ಮಟ್ಟ ಕುಸಿದಿದೆ. ಹಲವೆಡೆಗಳಲ್ಲಿ ಮುಂದುವರಿದ ಅನಧಿಕೃತ ಕೊಳವೆ ಬಾವಿ ಕೊರೆಸುವಿಕೆ, ಬ್ಲಾಸ್ಟರ್ ಮಾಡುವಿಕೆ, ಇಂಗು ಹೊಂಡ ಇಲ್ಲದಿರು ವುದು ಮತ್ತು ನೀರಿನ ಮಿತವ್ಯಯ ಬಳಕೆ ಇಲ್ಲದಿರು ವುದು ನೀರಿನ ಮಟ್ಟ ಕುಸಿಯಲು ಕಾರಣವಾಗಿದೆ ಎಂಬುದು ಜಲ ತಜ್ಞರ ಅಭಿಪ್ರಾಯವಾಗಿದೆ.

ಎಲ್ಲೆಲ್ಲಿ ಎಷ್ಟು ನೀರು?: ತಾಲೂಕು ವ್ಯಾಪ್ತಿಯ 16 ಗ್ರಾಮ ಪಂಚಾಯಿತಿಗಳಿಗೆ ತಾಲೂಕಾಡಳಿತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಹೊನ್ನಾವರದ 1,892 ಕುಟುಂಬಗಳ 9,926 ಜನರಿಗೆ, 103 ಮಜರೆ ಸೇರಿ 28 ಗ್ರಾಮಗಳಿಗೆ ಕುಡಿಯುವ ನೀರು ವಿತರಣೆಯಾಗುತ್ತಿದೆ. ಒಬ್ಬ ವ್ಯಕ್ತಿಗೆ ಪ್ರತಿ ದಿನಕ್ಕೆ 40 ಲೀಟರ್ ನೀರು ಕೊಡಲಾಗುತ್ತಿದೆ. ಈ ಎಲ್ಲ ಕುಟುಂಬಗಳು ಕುಡಿಯುವ ನೀರಿನ ಭೀಕರ ಬರಗಾಲ ಎದುರಿಸುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಭಾವ ಕಂಡುಬಂದಿದೆ. ಮಂಕಿಯ ಅನಂತವಾಡಿ, ಗುಳದಕೇರಿ, ಚಂದಾವರ, ಕಡತೋಕಾ, ಹೊಸಾಕುಳಿ, ನವಿಲಗೋಣು ಗ್ರಾಪಂ ವ್ಯಾಪ್ತಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಸರಿದೂಗಿಸುವ ಸಲುವಾಗಿ ತಾಪಂ ಇಒ ಸುರೇಶ ನಾಯ್ಕ ಹಾಗೂ ತಹಸೀಲ್ದಾರ್ ಮಂಜುಳಾ ಭಜಂತ್ರಿ ಭಾನುವಾರವೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಳೆಗಳ ಆಸೆ ಬಿಟ್ಟ ರೈತರು: ಕುಡಿಯಲು ಒಂದು ತೊಟ್ಟು ನೀರಿಲ್ಲದೇ ಪರದಾಡುತ್ತಿರುವ ಅನೇಕ ರೈತರು ಕೃಷಿ ಜಮೀನಿನ ಆಗುಹೋಗುಗಳ ಬಗ್ಗೆ ಗಮನ ಕೊಡುತ್ತಿಲ್ಲ. ಕಳೆದ 2 ತಿಂಗಳಿನಿಂದ ನೀರಿಲ್ಲದೆ ಬಿಸಿಲಿಗೆ ಒಣಗಲಾರಂಭಿಸಿದ ಅಡಕೆ, ತೆಂಗು, ಬಾಳೆ ಗಿಡಗಳು ಬಿರು ಬಿಸಿಲಿಗೆ ಸಾಯಲಾರಂಭಿಸಿವೆ. ಬಾವಿಯಲ್ಲಿ ಆಗೊಮ್ಮೆ-ಈಗೊಮ್ಮೆ ಸಿಗುವ ನೀರನ್ನು ಉಣಿಸಿ ಬೆಳೆಗಳನ್ನು ರಕ್ಷಿಸಿಕೊಂಡಿದ್ದರು. ಹಸಿರು ಶೃಂಗಾರದೊಂದಿಗೆ ಕಾಣುತ್ತಿರುವ ಅಡಕೆ- ಬಾಳೆ ಗಿಡಗಳು ಇತ್ತೀಚೆಗೆ ನೀರು ಕಾಣದೇ ಸಾಯುತ್ತಿವೆ. ಹೀಗಾಗಿ ರೈತ ತನ್ನ ತೋಟದ ಕಡೆ ಬರಲು ಮನಸು ಮಾಡದಂತಾಗಿದೆ.

ನೀರು ದಾನ ಮಾಡಿದರು: ಕುಡಿಯಲು ನೀರು ಇಲ್ಲದ ಈ ಕಾಲದಲ್ಲಿ ನೀರಿಗಾಗಿ ಅಕ್ಕ-ಪಕ್ಕದ ಮನೆಯವರ ನೆರವು ಪಡೆಯುತ್ತಿದ್ದಾರೆ. ತಮ್ಮಂತೆ ಇತರರು ಎನ್ನುವ ಮನೋಭಾವ ಹೊಂದಿರುವ ತಾಲೂಕಿನ ಶಿರೂರು, ಹಡಿನಬಾಳ, ಮಂಕಿ, ಕಡ್ನೀರು, ವಂದೂರು ಭಾಗದಲ್ಲಿ ಅನೇಕ ರೈತರು ಅಕ್ಕ-ಪಕ್ಕದ ಮನೆಯವರ ತೋಟಗಳಿಗೆ ನೀರನ್ನು ಧಾರೆ ಎರೆಯುತ್ತಿರುವುದೂ ಕಂಡುಬಂದಿದೆ. ರಾತ್ರಿ 1 ರಿಂದ 2 ತಾಸು ನೀರನ್ನು ತಮ್ಮ ಆಸುಪಾಸಿನ ತೋಟಗಳಿಗೆ ನೀಡಿ ಬೆಳಗಳ ಜೀವ ಉಳಿಸುವಲ್ಲಿ ತಾವೂ ಪಾಲುದಾರರಾಗಿದ್ದಾರೆ. ನೀರು ಪಡೆದವರು ತಮ್ಮ ತೆರವೆ ಬಾವಿಗೆ ಬೀಳಿಸಿ ರಾತ್ರಿಪೂರ್ತಿ ನಿದ್ದೆಗೆಟ್ಟು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಸಾಕಷ್ಟು ನೀರು ಹೊಂದಿರುವವರು ಕುಡಿಯುವ ನೀರನ್ನು ಉಚಿತವಾಗಿ ನೀಡುತ್ತಿದ್ದಾರೆ. ಬರಗಾಲ ಆವರಿಸಿದ ಕಡೆಗಳಲ್ಲಿ ನೀರು ಹೊಂದಿರುವ ಅನೇಕರು ಒಬ್ಬರಿಗೊಬ್ಬರು ಸಹಾಯ ಪಡೆದು ಬದುಕುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಹೊನ್ನಾವರದ ಎಲ್ಲ ಗ್ರಾಪಂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡುಬಂದಲ್ಲಿ 14ನೇ ಹಣಕಾಸು ಯೋಜನೆಯಡಿ ಹಣ ಮೀಸಲಿಡಲಾಗಿದೆ. ಮಾಧ್ಯಮದವರು ತಾಲೂಕಿನಲ್ಲಿ ಕಂಡುಬರುವ ನೀರಿನ ಸಮಸ್ಯೆಯ ಬಗ್ಗೆ ವಿವರ ನೀಡಿದರೆ ಆ ಪ್ರದೇಶಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು.
| ಸುರೇಶ ನಾಯ್ಕ ತಾಪಂ ಇಒ ಹೊನ್ನಾವರ

ಹೊನ್ನಾವರದಂಥ ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬರಗಾಲ ಬಂದಿರಲಿಲ್ಲ. ಬೇಸಿಗೆ ಮುಗಿಯುವ ಹಂತದಲ್ಲಿ ಒಂದೆರಡು ಬಾರಿ ಮಳೆಯಾಗಿ ನೀರಿನ ಮಟ್ಟ ಹೆಚ್ಚುತ್ತಿತ್ತು. ನೀರಿನ ಮಟ್ಟ ಕುಸಿಯಲು ಕಾರಣವೇನೆಂಬುದನ್ನು ಕಂಡು ಹಿಡಿಯಬೇಕಿದೆ. ಅವೈಜ್ಞಾನಿಕ ಕೊಳವೆ ಬಾವಿ ಕೊರೆಸುವುದನ್ನು ತಡೆಹಿಡಿಯಬೇಕು. ರೈತರಿಗೆ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಪ್ರತಿ ಬೇಸಿಗೆಯಲ್ಲಿ ಬೆಳೆಗಳು ಸಾಯುತ್ತವೆ. ಅದರೊಟ್ಟಿಗೆ ನಾವೂ ಸಾಯಬೇಕಾಗುತ್ತದೆ.
| ದಿನೇಶ ನಾಯ್ಕ ಗುಂಡುಮನೆ ಪ್ರಗತಿಪರ ಕೃಷಿಕ