ಕುಡಿದ ಅಮಲಿನಲ್ಲಿ ಗೆಳೆಯನ ಹತ್ಯೆ ಮಾಡಿದ ರೌಡಿಗಳು: ಯಶವಂತಪುರ ಮಸೀದಿ ಬಳಿ ಕೃತ್ಯ

ಬೆಂಗಳೂರು: ಯಶವಂತಪುರದಲ್ಲಿ ರೌಡಿಗಳು ಚೂರಿಯಿಂದ ಇರಿದು ಸ್ನೇಹಿತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ತುಮಕೂರು ಮೂಲದ ಗೊರಗುಂಟೆಪಾಳ್ಯ ನಿವಾಸಿ ವಿಜಯ್ (29) ಕೊಲೆಯಾದ ಯುವಕ. ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಶಿವರಾಜ್, ಕಿರಿಕ್ ಮಂಜ, ನವೀನ್ ಆರೋಪಿಗಳು.

ವಿಜಯ್ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕುಟುಂಬ ಸಮೇತ ಗೊರಗುಂಟೆಪಾಳ್ಯದಲ್ಲಿ ನೆಲೆಸಿದ್ದ. ಕಾರು ಚಾಲಕನಾಗಿದ್ದ ವಿಜಯ್ 2012ರಲ್ಲಿ ಪೀಣ್ಯದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಕೆಲ ವರ್ಷಗಳ ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ನಂತರ ಕಾರು ಬಾಡಿಗೆಗೆ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ. ಶನಿವಾರ ರಾತ್ರಿ 11.30ರಲ್ಲಿ ಸ್ನೇಹಿತ ಶಿವರಾಜ್ ಜತೆ ಕ್ಲಬ್​ಗೆ ತೆರಳಿ ನಂತರ ಇಬ್ಬರೂ ಕ್ಲಬ್ ಸಮೀಪದಲ್ಲಿರುವ ಸ್ವರ್ಗ ಬಾರ್​ಗೆ ಹೋಗಿದ್ದು, ಬಾರ್​ನಲ್ಲಿ ಮಂಜ ಅಲಿಯಾಸ್ ಕಿರಿಕ್, ನವೀನ್ ಸಿಕ್ಕಿದ್ದರು. ಜತೆಯಾಗಿ ಎಲ್ಲರೂ ಕಂಠಮಟ್ಟ ಮದ್ಯ ಸೇವಿಸಿದ್ದರು. ನಂತರ ಎಲ್ಲರೂ ವಿಜಯ್ ಕಾರಿನಲ್ಲಿ ತಡರಾತ್ರಿ ಊಟ ಮಾಡಲು ಹೋಟೆಲ್ ಹುಡುಕಿಕೊಂಡು ಯಶವಂತಪುರದ ಕಡೆಗೆ ಹೋಗುತ್ತಿದ್ದರು. ಆದರೆ, ಆ ವೇಳೆಯಲ್ಲಿ ಯಾವುದೇ ಹೋಟೆಲ್ ತೆರೆದಿರದ ಹಿನ್ನೆಲೆಯಲ್ಲಿ ಊಟ ದೊರಕಿರಲಿಲ್ಲ.

9 ಬಾರಿ ಚೂರಿ ಇರಿತ: ತಡರಾತ್ರಿ 3.30ರಲ್ಲಿ ಕುಡಿದ ಮತ್ತಿನಲ್ಲಿದ್ದ ಆರೋಪಿಗಳು ನಾವು ನಿನಗಿಂತ ಹೆಚ್ಚು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೇವೆ ಎಂದು ವಿಜಯ್ನ್ನು ಹಂಗಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ವಿಜಯ್ ನಾನೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೆ. ನನಗೆ ನಿಮಗಿಂತ ಹೆಚ್ಚು ಗೊತ್ತು ಎಂದು ಹೇಳಿದ್ದ. ಈ ವಿಚಾರವಾಗಿ ಆರೋಪಿಗಳು ಮತ್ತು ವಿಜಯ್ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ವಿಜಯ್, ಯಶವಂತಪುರ ಮಸೀದಿ ಬಳಿ ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದ. ಆಕ್ರೋಶಗೊಂಡ ಆರೋಪಿಗಳು ತಮ್ಮ ಬಳಿಯಿದ್ದ ಚೂರಿಯಿಂದ ವಿಜಯ್ ಎಡ ಕತ್ತು, ಕಿವಿಯ ಭಾಗಕ್ಕೆ 9ಕ್ಕೂ ಅಧಿಕ ಬಾರಿ ಇರಿದಿದ್ದಾರೆ. ಅದರಿಂದಾಗಿ ತೀವ್ರ ರಕ್ತಸ್ರಾವವಾಗಿ ವಿಜಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಆರೋಪಿಗಳು ಸ್ಥಳದಿಂದ ಪರಾರಿ ಆಗಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಯಶವಂತಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ವಿಜಯ್ ವಿರುದ್ಧವೂ ರೌಡಿ ಪಟ್ಟಿ ತೆರೆಯಲಾಗಿತ್ತು ಎನ್ನಲಾಗಿದೆ. ಆರೋಪಿಗಳು ಪರಾರಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *