Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಕುಟ್ಟೋ ಒನಕೆಗೆ ಕರುಣೆ ಎಲ್ಲೈತೆ…?

Sunday, 19.11.2017, 3:01 AM       No Comments

ಒನಕೆ ಅನ್ನುವ ಶಬ್ದ ಪ್ರಾಚೀನವಾದುದು. ಋಗ್ವೇದದಲ್ಲಿಯೂ ‘ಒನಕೆವಾಡು’ ಪದದ ಉಲ್ಲೇಖವಿದೆಯಂತೆ. ಏನಾದರೂ ನಿನಗೆ ಬುದ್ಧಿ ಬರಲ್ಲ ಅನ್ನುವುದಕ್ಕೆ ನಮ್ಮ ಜನಪದರು ‘ನಿನಗೆ ಬುದ್ಧಿ ಬರೋದೂ ಒಂದೇ, ಒನಕೆ ಚಿಗುರೋದೂ ಒಂದೇ’ ಅಂತ ಹೇಳಿ ಹಾಸ್ಯಮಾಡುತ್ತಾರೆ. ‘ಕೋಪಿಷ್ಟನಿಗೆ ಕಣ್ಣಿಲ್ಲ, ಒನಕೇಗೆ ಗಿಣ್ಣಿಲ್ಲ’, ‘ಒಳಕಲ್ಲಿಗೆ ತಲೆಕೊಟ್ಟ ಮೇಲೆ ಒನಕೆ ಏಟು ತಪ್ಪಿಸಿಕೊಳ್ಳೋಕಾಯ್ತದಾ?’- ಎಂಬಿತ್ಯಾದಿಯಾದ ಒನಕೆ ಸಂಬಂಧದ ಗಾದೆಮಾತುಗಳಿವೆ.

‘ನೀನು ಒನಕೆ ನೋಡಿದ್ದೀಯೇನಮ್ಮಾ?’ ಅಂತ ಕೇಳಿದರು ಯುವರಾಜ್.

ಎರಡನೇ ವರ್ಷದ ಮೆಡಿಕಲ್ ಕೋರ್ಸಿನ ಹುಡುಗಿ, ‘ಹ್ಞೂಂ ಸರ್, ನೋಡಿದೀನಿ’ ಅಂದಳು.

‘ಎಲ್ಲಿ?’ ಅಂದರು ಯುವರಾಜ್.

‘ನಾಗರಹಾವು ಸಿನಿಮಾದಲ್ಲಿ!’ ಅಂದಳು ಹುಡುಗಿ.

ಯುವರಾಜ್ ಫಳ್ಳನೆ ನಕ್ಕುಬಿಟ್ಟರು. ನಾವೂ ನಕ್ಕೆವು. ಪಾಪದ ಹುಡುಗಿ ಪೆಚ್ಚಾಗಿ ‘ಸಾರಿ ಸರ್’ ಅಂದಳು. ನಾವು ಹಾಗೆ ನಗಬಾರದಿತ್ತು ಅಂದುಕೊಂಡೆವು.

ಸಂದರ್ಭ- ಮೊನ್ನೆ ದಿನ ನಾನು ಶಿವಮೊಗ್ಗ ಮೆಡಿಕಲ್ ಕಾಲೇಜಿನ ರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದೆ. ಆ ಕಾಲೇಜಿನ ಪ್ರೊಫೆಸರ್, ಡಾಕ್ಟರ್ ಗಂಗಾಧರ್ ಅಂಥದೊಂದು ಮುಚ್ಚಟೆಯಿಂದ ನನ್ನನ್ನು ಆಹ್ವಾನಿಸಿದ್ದರು. ಶಿವಮೊಗ್ಗೆಗೆ ಹೋದಾಗಲೆಲ್ಲ ನಾನು ತಪ್ಪದೆ ಭೇಟಿಯಾಗುವ ಗೆಳೆಯ ಯುವರಾಜ್. ಅವರು ನಿಮಗೆ ಗೊತ್ತಿರಲೇಬೇಕು. ನಮ್ಮ ನಾಡಿನ ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ. ಸಾವಿರಾರು ಜನಪದ ಗೀತೆಗಳಿಗೆ ದನಿಯಾದ ಹಾಡುಗಾರ. ‘ಹಾಡುಗಳನ್ನ ಹಾಡೋದು ಕೊರಳಿಂದ ಅಲ್ಲಣ್ಣಾ, ಕರುಳಿಂದ. ಹಾಡು ಅನ್ನೋದು ನಮ್ಮೊಳಗೆಲ್ಲ ಹರಿದಾಡಿಕೊಂಡು ಹೊರಗೆ ಬರಬೇಕು. ಅಂಥಾ ಹಾಡು ನೋಡಪಾ, ಎಂಥಾ ಸಭೆಯೊಳಗೂ ನುಗ್ಗಿಬಿಡ್ತದೆ!’ ಅಂತಿರ್ತಾರೆ ಯುವರಾಜ್. ಹಾಡುವ ಹಾಡಿಗೆ ತನ್ನನ್ನೇ ಕೊಟ್ಟುಕೊಂಡು ಹಾಡ್ತಾರೆ. ಆತ ಎಷ್ಟು ಒಳ್ಳೆಯ ಗಾಯಕನೋ ಅಷ್ಟೇ ಒಳ್ಳೆಯ ಗೆಳೆಯ. ಒಳ್ಳೆಯ ಮೇಷ್ಟ್ರು, ಒಳ್ಳೆಯ ಸಂಸಾರಿ. ಈ ಬಾರಿ ನಾನು ಅವರ ಮನೆಗೆ ಹೋಗಲಾಗಲಿಲ್ಲ. ನನ್ನನ್ನು ನೋಡಲು ಮೆಡಿಕಲ್ ಕಾಲೇಜಿನ ಸಮಾರಂಭಕ್ಕೇ ಬಂದಿದ್ದರು ಯುವರಾಜ್.

ಕಾಲೇಜಿನ ವಿದ್ಯಾರ್ಥಿಗಳು ‘ನುಡಿಮನೆ’ ಎಂಬುದೊಂದು ಪರಿಕಲ್ಪನೆಯಿಟ್ಟುಕೊಂಡು ಉತ್ಸಾಹದಿಂದ ಸಮಾರಂಭ ಏರ್ಪಾಡು ಮಾಡಿದ್ದರು. ದೇಶಾವರಿ ಭಾಷಣಗಳಿರಲಿಲ್ಲ. ಸಂಸ್ಥೆಯ ನಿರ್ದೇಶಕ ಡಾ. ಬಿ.ವಿ. ಸುಶೀಲ್ ಕುಮಾರ್, ವಿದ್ಯಾರ್ಥಿ ವೇದಿಕೆಯ ಕಾರ್ಯಾಧ್ಯಕ್ಷೆ ಡಾ. ಅನೂಷ ಎರಡೆರಡೇ ನಿಮಿಷದಲ್ಲಿ ಭಾಷಣ ಮುಗಿಸಿದರು. ನನ್ನದೊಂದೇ ಉದ್ದದ ಭಾಷಣ. ವಿದ್ಯಾರ್ಥಿಗಳು ಒಂದೆರಡು ಚಂದದ ನೃತ್ಯ ಮಾಡಿದರು. ಅದರಲ್ಲೊಂದು ‘ನಾಗರಹಾವು’ ಚಿತ್ರದ ‘ಕನ್ನಡನಾಡಿನ ವೀರರಮಣಿಯ ಗಂಡುಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ’ ಅನ್ನುವ ಪ್ರಸಿದ್ಧ ಗೀತೆಯ ನೃತ್ಯಪ್ರಸ್ತುತಿ. ಅಲ್ಲಿಯೂ ಓಬವ್ವನ ಪಾತ್ರ ಮಾಡಿದ್ದ ಹುಡುಗಿ ತುಂಬಾ ಚಂದ ಅಭಿನಯಿಸಿದಳು.

ಕಾರ್ಯಕ್ರಮ ಮುಗಿದ ಮೇಲೆ ನಾವೆಲ್ಲ ಊಟ ಮಾಡುತ್ತಿರುವಾಗ ಓಬವ್ವನ ಪಾತ್ರಧಾರಿಯಾಗಿದ್ದ ಆ ಹುಡುಗಿ ಅಲ್ಲಿಗೆ ಬಂದಳು. ಡಾ. ಗಂಗಾಧರ್ ‘ಇವಳೇ ನೋಡಿ ಈವತ್ತು ಓಬವ್ವನ ಪಾತ್ರ ಮಾಡಿದ ಹುಡುಗಿ’ ಎಂದು ಪರಿಚಯಿಸಿದರು. ಆಮೇಲೆ ಆ ಹುಡುಗಿಗೆ ‘ಅಲ್ಲಮ್ಮಾ, ನಿನ್ನ ಒನಕೆಯಿಂದ ಸೈನಿಕರಿಗೆ ಒಂದೇಟೂ ಹೊಡೀಲೇ ಇಲ್ಲವಲ್ಲಾ! ಸುಮ್ಮನೆ ಹೊಡೆದ ಹಾಗೆ ಆಕ್ಟ್ ಮಾಡಿದೆ ಅಷ್ಟೆ. ಹೊಡೆದಿದ್ದರೆ ತಾನೇ ಏನಾಗ್ತಿತ್ತು? ಅಷ್ಟಕ್ಕೂ ಅದೇನು ಒನಕೆ ಅಲ್ಲವಲ್ಲ! ಪಿವಿಸಿ ಪೈಪು ತಾನೇ?’ ಅಂತ ನಗೆಯಾಡಿದರು. ಆ ಹುಡುಗಿ ‘ಅದು ಪಿವಿಸಿ ಪೈಪ್ ಅಲ್ಲ ಸರ್, ಕಾರ್ಡ್​ಬೋರ್ಡ್ ರೋಲು’ ಅಂದಳು. ಆಗ ಯುವರಾಜ್, ‘ಕಾರ್ಡ್​ಬೋರ್ಡ್ ರೋಲೇ ಆದರೂ ಅದರ ಎರಡೂ ತುದಿಯಲ್ಲಿ ಒನಕೆ ಬಳೆ ಥರ ಪೇಂಟ್ ಮಾಡಬೇಕಿತ್ತಮ್ಮಾ, ಒನಕೆಗೆ ಆ ಕಡೆ ಈ ಕಡೆ ಒಂದೊಂದು ಕಬ್ಬಿಣದ ಬಳೆ ಹಾಕಿರ್ತಾರೆ. ಅದರ ತಳಭಾಗದಲ್ಲಿ ಕಣ್ಣಿನ ಥರಾ ಮಾಡಿರ್ತಾರೆ. ಅದನ್ನ ಒನಕೆ ಕಣ್ಣು ಅಂತಾರೆ’ ಅಂತೆಲ್ಲ ಹೇಳಿ, ‘ನೀನು ಒನಕೆ ನೋಡಿದ್ದೀಯೇನಮ್ಮಾ?’ ಅಂತ ಕೇಳಿದ್ದು.

ಯುವರಾಜ್ ಜನಪದ ಗೀತೆಗಳ ಗಾಯಕ ಮಾತ್ರವಲ್ಲ, ಜನಪದ ಬದುಕಿನ ಒಂದೊಂದಂಶವನ್ನೂ ಪ್ರೀತಿಸುವವರು. ನಾವಿಬ್ಬರೂ ಸೇರಿದಾಗ ಜನಪದ ಗೀತೆಗಳ ಬಗ್ಗೆ, ಜನಪದ ಬದುಕಿನ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಿರುತ್ತೇವೆ. ಆವತ್ತು ಹಾಗೆ ಯುವರಾಜ್ ಹೇಳಲು ಶುರುವಿಟ್ಟುಕೊಂಡರು- ‘ಪಾಪ, ಈ ಹೆಣ್ಣುಮಕ್ಕಳಿಗೆ ಭತ್ತ ಕುಟ್ಟೋದು ಅನ್ನೋ ಪರಿಕಲ್ಪನೆಯೇ ಗೊತ್ತಿಲ್ಲ. ಅವರು ತಾನೇ ಎಲ್ಲಿ ನೋಡಿದ್ದಾರು ಹೇಳಿ. ಎಂಥಾ ಅದ್ಭುತವಾದ ಕಲೆ ಅದು! ನಾನು ಚಿಕ್ಕವನಿದ್ದಾಗ ಊರಾಗ ನೋಡ್ತಿದ್ದೆ. ನಮ್ಮವ್ವ ಭತ್ತ ಕುಟ್ಟೋದರಾಗ ನಮ್ಮೂರಿಗೇ ಫೇಮಸ್ಸು. ಭತ್ತ ಕುಟ್ಟೋಕೆ ಬರೀ ಶಕ್ತಿ ಇದ್ದರೆ ಆಗಲ್ಲ, ಅದೊಂದು ಸ್ಕಿಲ್ಲು. ಅದೊಂದು ರಿದಮ್ಮು. ಒಳಕಲ್ಲಿನಾಗ ಭತ್ತ ಹಾಕ್ಕೊಂಡು ಇಬ್ಬಿಬ್ಬರು, ಒಮ್ಮೊಮ್ಮೆ ಮೂವರು ಹೆಣ್ಣುಮಕ್ಕಳು ಅದೇ ರಿದಮ್ಮಿನಲ್ಲಿ ಕುಟ್ಟೋರು. ಯಾವ ಕಾರಣಕ್ಕೂ ಒಬ್ಬರ ಒನಕೆ ಒಬ್ಬರಿಗೆ ತಾಕಿಸ್ತಿರಲಿಲ್ಲ. ಒಳಕಲ್ಲಿನ ಕಲ್ಲಿಗೂ ತಾಕಿಸ್ತಿರಲಿಲ್ಲ. ಜೋಡಿ ಒನಕೆ, ಮೂವಾರ ಒನಕೆ ಮ್ಯಾಳ ನೋಡಾಕೇ ಅಷ್ಟು ಚಂದ ಇರೋದು. ಹಾಗೆ ಭತ್ತ ಕುಟ್ಟೋವಾಗಲೇ ಒಳಕಲ್ಲಿನಿಂದ ಹೊರಗೆ ಎಗರಿದ ಭತ್ತಾನ ಕಾಲಿನಾಗ ಒಳಕಲ್ಲ ಕಡೆಗೆ ತಳ್ಳಿಕೊಳ್ಳೋರು. ಎಲ್ಲಾ ನೆನಪಾಗ್ತತಿ ನನಗೆ. ನಮ್ಮವ್ವ ಏನ್ ಚಂದ ಭತ್ತ ಕುಟ್ಟ್​ತಿತ್ತು…!!’.

ನನಗೆ ಯುವರಾಜ್ ಹಾಡಿಸಿದ ಒಂದು ಜನಪದ ಗೀತೆ ತುಂಬಾ ಇಷ್ಟ. ಅದನ್ನು ಯುವರಾಜ್ ಮಗಳು ಯುಕ್ತಿ ಅದ್ಭುತವಾಗಿ ಹಾಡ್ತಾಳೆ. ಸಾಮಾನ್ಯವಾಗಿ ಜನಪದ ಗೀತೆಗಳ ಲಯಕ್ಕೂ ಅದರ ಹಿನ್ನೆಲೆಯಲ್ಲಿರುವ ಕ್ರಿಯೆಗೂ ಒಂದು ನೇರಸಂಬಂಧ ಇರುತ್ತದೆ. ಅದಕ್ಕೇ ಜನಪದದಲ್ಲಿ ‘ಕುಟ್ಟುವ ಪದ’ಗಳ ಲಯ, ಭತ್ತ ಕುಟ್ಟುವ ಕ್ರಿಯೆಯ ಲಯದಲ್ಲೇ ಇರುತ್ತದೆ. ಆದ್ದರಿಂದ ಕುಟ್ಟುವ ಪದಗಳನ್ನು ಹಾಡುವವರಿಗೆ ಒಳಕಲ್ಲಿಗೆ ಬೀಳುವ ಒನಕೆಗಳ ಧಿಮಿಧಿಮಿ ಏಟೇ ತಾಳ. ನಾನು ಯುವರಾಜ್​ಗೆ ಆ ಜನಪದ ಗೀತೆಯನ್ನು ನೆನಪಿಸಿದೆ. ಅದೇ ಹಾಡನ್ನು ದಿಗ್ವಿಜಯ ಟಿವಿಯ ‘ಭಾವಧಾರೆ’ ಕಾರ್ಯಕ್ರಮಕ್ಕಾಗಿ ಯುಕ್ತಿ ಕೆಲವು ದಿನಗಳ ಹಿಂದೆಯಷ್ಟೇ ಹಾಡಿದ್ದಳು ಕೂಡಾ. ಹಾಡು ಇದು- ಸುವ್ವಕ್ಕಾ ಸುವ್ವನಾರಿ/ ಎದಿಯಾಮ್ಯಾಲಿನ ಕೋರಿ

ಹಾರಿಹೋಯಿತವ್ವಾ ಹರದಾರಿ/ ನಾರಿ- ಹಾಕ ವಯ್ಯಾರಿ ||

ಕುಟ್ಟಿ ಕುಟ್ಟಿ ನನ್ನ ರಟ್ಯೆಲ್ಲಾ ನೋದಾವ/ ಕಟ್ಟಿ ಮ್ಯಾಲಿನ ಕಲ್ಲು ಸಡಲ್ಯಾವ

ನಾರಿ- ಹಾಕ ವಯ್ಯಾರಿ ||

ಎಂಥಾ ಚಂದ ಹಾಡು ನೋಡಿ. ಯಾರೋ ಹೆಣ್ಣುಮಗಳು, ಅವಳಿಗೆ ಕುಟ್ಟಿ ಕುಟ್ಟಿ ರಟ್ಟೆಗಳೆರಡೂ ನೋವು! ಆದರೆ ಅದಷ್ಟೇ ಅಲ್ಲ, ಇವಳು ರಟ್ಟೆನೋವು ಬರುವಷ್ಟು ಕುಟ್ಟಿದರೆ ಕಟ್ಟೆಮೇಲಿನ ಕಲ್ಲುಗಳು ಸಡಿಲವಾಗಿದ್ದಾವೆಯಂತೆ! ಒಂದಿಷ್ಟು ಉತ್ಪ್ರೇಕ್ಷೆಯೂ ಇರಬಹುದು. ಆದರೂ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಕುಟ್ಟುವ ರಭಸಕ್ಕೆ ಕಲ್ಲುಕಟ್ಟೆಯ ಕಲ್ಲೇ ಸಡಿಲವಾಗುತ್ತವೆಯೆಂದರೆ ಎಂಥಾ ಚಂದದ ಅಭಿವ್ಯಕ್ತಿ!

ಶಿವಮೊಗ್ಗೆಯಲ್ಲಿ ಇದೊಂದು ಒನಕೆಯ ಪ್ರಸ್ತಾಪ ಬಂದದ್ದರಿಂದ ಅದನ್ನು ಕುರಿತೇ ಈ ವಾರ ಬರೆಯಬೇಕೆನ್ನಿಸಿತು.

ಬಹುಶಃ ಈ ಒನಕೆ ಓಬವ್ವನದೊಂದು ಚಿತ್ರದುರ್ಗದ ಚರಿತ್ರೆಯ ಕತೆ ಇಲ್ಲದಿದ್ದರೆ, ಅದನ್ನು ನಾಗರಹಾವು ಸಿನಿಮಾದಲ್ಲಿ ಅಂಥ ಚೆಂದ ಹಾಡಿನ ಹಿನ್ನೆಲೆಯಲ್ಲಿ ಪುಟ್ಟಣ್ಣ ಕಣಗಾಲ್ ಚಿತ್ರೀಕರಿಸಿರದಿದ್ದರೆ ಈ ‘ಒನಕೆ’ ಅನ್ನುವುದು ನಮ್ಮ ಸ್ಮೃತಿಯಿಂದಲೂ ಸರಿದುಹೋಗಿರುತ್ತಿತ್ತೇನೋ! ನಮ್ಮ ಮಕ್ಕಳಿಗಂತೂ ಈ ಒನಕೆ ಎಂಬ ಸಲಕರಣೆಯಿರಲಿ, ಶಬ್ದವೂ ಪರಿಚಯವಿರುತ್ತಿರಲಿಲ್ಲ.

ಈ ಒನಕೆಗೆ ಒನಿಕೆ, ಒಲಕೆ ಎಂದೂ ಕೆಲವು ಕಡೆ ಹೇಳುತ್ತಾರೆ. ‘ಒನೆ’ ಎಂಬ ಕ್ರಿಯಾಪದ ಮೂಲದಿಂದ ಈ ಒನಕೆ ಎಂಬ ನಾಮಪದ ಸಿದ್ಧಿಸಿದೆ. ‘ಒನೆ’ ಅಂದರೆ ತೂಗಾಡುವುದು, ತೊನೆದಾಡುವುದು, ಓಲಾಡುವುದು, ವಯ್ಯಾರ ಮಾಡುವುದು ಅನ್ನುವ ಅರ್ಥಗಳಿವೆ. ಒನಕೆ ಅನ್ನುವುದಕ್ಕೆ ಸಂಸ್ಕೃತದಲ್ಲಿ ‘ಮುಸಲ’ ಅನ್ನುವ ಶಬ್ದವಿದೆ.

ಮುಸಲ ವರ್ಷಧಾರೆ/ ಮುಗಿಲಿನಿಂದ ಸೋರೆ

ಕುಣಿವ ನವಿಲು ನನ್ನ ಮನಂ/ ನಲ್ಮೆಯುಕ್ಕಿ ಮೀರೆ

-ಹಾಗಂತ ಕುವೆಂಪು ಬರೆದೊಂದು ಪದ್ಯ ನಿಮಗೆ ಗೊತ್ತಿರಬಹುದು. ದಪ್ಪದಪ್ಪವಾಗಿ ಸುರಿವ ಮಳೆಯನ್ನು ಮುಸಲಧಾರೆ ಎಂದು ವರ್ಣಿಸುವುದು ವಾಡಿಕೆ. ಹಾಗಂದರೆ ಒಂದೊಂದು ಮಳೆಯ ಧಾರೆ ಒಂದು ಒನಕೆಯ ಗಾತ್ರ ಇತ್ತು ಅಂತ ಉತ್ಪ್ರೇಕ್ಷೆಯಷ್ಟೆ.

ಇಂಗ್ಲಿಷಿನಲ್ಲೂ ಒನಕೆಗೆ ಕಛಿಠಠ್ಝಿಛಿ ಎಂಬೊಂದು ಸಮಾನಾರ್ಥಕ ಶಬ್ದವಿದೆ. ಕುಟ್ಟುವ ಕ್ರಿಯೆಗೆ ಇಂಗ್ಲಿಷಿನಲ್ಲಿ ಕಟ್ಠ್ಞಜ್ಞಿಜ ಅನ್ನುತ್ತಾರೆ. ಹಾಗಾದರೆ ಅವರಲ್ಲಿಯೂ ಧಾನ್ಯಗಳನ್ನು ಕುಟ್ಟುವ ಪದ್ಧತಿ ಇತ್ತಾ? ಅದಕ್ಕೆ ಇಂಥವೇ ಒನಕೆಗಳನ್ನು ಅಲ್ಲೂ ಬಳಸುತ್ತಿದ್ದರಾ? ಅಂದರೆ, ಇಲ್ಲ. ಅವರ ಕಛಿಠಠ್ಝಿಛಿ ಎರಡೂ ತುದಿಗಳಲ್ಲಿ ಗುಂಡಾಗಿದ್ದ ಒಂದು ಮರದ ತುಂಡು ಅಷ್ಟೆ. ಆ ಕಛಿಠಠ್ಝಿಛಿನಲ್ಲಿ ಅವರು ಔಷಧವನ್ನೋ, ಮಾಂಸವನ್ನೋ ಕುಟ್ಟುತ್ತಿದ್ದರಂತೆ.

ಗುಂಡಾಗಿ, ನೇರವಾಗಿರುವ ಈ ಮರದ ತುಂಡಿಗೆ ಕನ್ನಡದಲ್ಲಿ ತೂಗಾಟ, ತೊನೆದಾಟ, ವಯ್ಯಾರ ಎಂಬರ್ಥದಿಂದ ಆರಂಭವಾಗುವ ಒನಕೆ ಎಂಬ ಹೆಸರು ಹೇಗೆ ಬಂದಿರಬಹುದು? ಹೆಣ್ಣುಮಕ್ಕಳು ಇದನ್ನು ಹಿಡಿದು ಒನೆದಾಡಿಕೊಂಡು, ವಯ್ಯಾರದಿಂದ ಒರಳುಕಲ್ಲಿಗೆ ಕುಟ್ಟುವುದರಿಂದಾಗಿ ಇದಕ್ಕೆ ಒನಕೆ ಎಂಬ ಹೆಸರು ನಿಂತಿರಬಹುದು. ಧಾನ್ಯಗಳನ್ನು ಮೊರಕ್ಕೆ ಹಾಕಿಕೊಂಡು ಕಲ್ಲುಮಣ್ಣು ಬೇರ್ಪಡಿಸಲು ಎಡಕ್ಕೂ ಬಲಕ್ಕೂ ಅಲ್ಲಾಡಿಸುತ್ತಾರೆ. ಇದನ್ನು ‘ಒನೆಯುವುದು’ ಅಂತಲೇ ಕರೆಯುತ್ತಾರೆ.

ಈ ಒನಕೆ ಅನ್ನುವ ಶಬ್ದ ತುಂಬಾ ಪ್ರಾಚೀನವಾದುದು ಅನ್ನುವುದಕ್ಕೆ ಉಲ್ಲೇಖಗಳಿವೆ. ಸಾವಿರ ವರ್ಷಗಳಿಗೂ ಹಿಂದೆ ಕನ್ನಡದಲ್ಲಿ ರಚಿತವಾದ ‘ಕವಿರಾಜಮಾರ್ಗ’ದಲ್ಲಿ ಕನ್ನಡ ಸಾಹಿತ್ಯದ ರೂಪಗಳನ್ನು ಹೇಳುವಾಗ, ಬೆದಂಡೆ, ಚತ್ತಾಣ ಮತ್ತು ಒನಕೆವಾಡು ಎಂಬ ರೂಪಗಳ ಹೆಸರು ಬಂದಿದೆ. ಈ ಒನಕೆವಾಡುಗಳು ಎಂದರೆ ತ್ರಿಪದಿ ರೂಪದ, ಶೃಂಗಾರವಸ್ತುವಿರುವ ಹಾಡುಗಳು ಎಂದು ವಿದ್ವಾಂಸರು ಅರ್ಥೈಸುತ್ತಾರೆ. ಜನರು ಒನಕೆ ಹಿಡಿದು ಧಾನ್ಯಗಳನ್ನು ಕುಟ್ಟುವಾಗ ಈ ಬಗೆಯ ಹಾಡುಗಳನ್ನು ಹಾಡುತ್ತಿದ್ದರು ಅನ್ನುವ ವಿವರಣೆ ಇದೆ. ಋಗ್ವೇದದಲ್ಲಿಯೂ ಒನಕೆವಾಡು ಪದದ ಉಲ್ಲೇಖವಿದೆಯಂತೆ. ಅಂದ ಮೇಲೆ ಈ ಒನಕೆ ಎಂಬುದು ಋಗ್ವೇದ ಕಾಲದಷ್ಟು ಹಳೆಯದು ಎಂದಾಯಿತು.

ಈಗ ಒನಕೆಗೆ ಕೆಲಸ ಇಲ್ಲ. ಶಾಸ್ತ್ರಕ್ಕೆ ಅಂತ ಕೆಲವು ಮನೆಗಳಲ್ಲಿ ಇವೆ. ನಮ್ಮ ಕಡೆ ಮದುವೆಗಳಲ್ಲಿ ಶಾಸ್ತ್ರದ ಭತ್ತ ಕುಟ್ಟುವುದು ಅನ್ನುವುದೊಂದು ‘ಶಾಸ್ತ್ರ’ವಿದೆ. ಆಗ ಹೆಣ್ಣುಮಕ್ಕಳು ಒನಕೆಗಳಿಗೆ ಅರಿಶಿನ-ಕುಂಕುಮ ಹಚ್ಚಿ, ಮೇಲ್ತುದಿಯಲ್ಲಿ ನವಧಾನ್ಯದ ಗಂಟುಕಟ್ಟಿ ಪೂಜಿಸಿ ಅನಂತರ ಒರಳುಕಲ್ಲಿಗೆ ಐದು ಸೇರು ಭತ್ತ ಹಾಕಿಕೊಂಡು ಕುಟ್ಟುತ್ತಾರೆ.

ಒನಕೆ ಕುಣಿತ ಅಂತ ಒಂದು ಜನಪದ ಕುಣಿತವಿದೆ. ಅಲಂಕರಿಸಿದ ಒನಕೆಯ ಒಂದು ತುದಿಯಲ್ಲಿ ಹೂವಿನದೊಂದು ಗೋಪುರ ಕಟ್ಟಿ, ಅದರ ನಡೂಮಧ್ಯದಲ್ಲಿ ದೀಪವನ್ನು ಹಚ್ಚಿಟ್ಟು ಒನಕೆಯ ಇನ್ನೊಂದು ತುದಿಯನ್ನು ತಲೆಯ ಮೇಲೆ ಇಟ್ಟುಕೊಂಡು, ತಮಟೆ-ನಗಾರಿಗಳ ಬಡಿತದ ಲಯಕ್ಕೆ ಕುಣಿಯುವ ಕಲೆ ಇದು. ಸುಮಾರು ನಾಲ್ಕಡಿಗಳಷ್ಟು ಎತ್ತರವಿರುವ ಒನಕೆಯನ್ನು ತಲೆಯ ಮೇಲೆ ನೆಟ್ಟಗೆ ನಿಲ್ಲಿಸಿಕೊಂಡು ಕೈಬಿಟ್ಟು ಕುಣಿಯುವ ಚಮತ್ಕಾರ ನೋಡುವುದಕ್ಕೆ ಚಂದ. ಹೀಗೆ ಒನಕೆ ಕರಗ ಅಂತಲೂ ಒಂದು ಜನಪದ ಕುಣಿತವಿದೆ.

ಏನೇ ಆದರೂ ನಿನಗೆ ಬುದ್ಧಿ ಬರಲ್ಲ ಅನ್ನುವುದಕ್ಕೆ ನಮ್ಮ ಜನಪದರು ‘ನಿನಗೆ ಬುದ್ಧಿ ಬರೋದೂ ಒಂದೇ, ಒನಕೆ ಚಿಗುರೋದೂ ಒಂದೇ’ ಅಂತ ಹೇಳಿ ಹಾಸ್ಯಮಾಡುತ್ತಾರೆ. ‘ನಾಚ್ಕೆ ಹೇಸ್ಗೆ ಇಲ್ಲದ ಗಂಡು, ಕರೀ ಒನಕೆಯ ತುಂಡು’, ‘ಕೋಪಿಷ್ಟನಿಗೆ ಕಣ್ಣಿಲ್ಲ, ಒನಕೇಗೆ ಗಿಣ್ಣಿಲ್ಲ’, ‘ಒಳಕಲ್ಲಿಗೆ ತಲೆಕೊಟ್ಟ ಮೇಲೆ ಒನಕೆ ಏಟು ತಪ್ಪಿಸಿಕೊಳ್ಳೋಕಾಯ್ತದಾ?’, ‘ಕುಟ್ಟೋ ಒನಕೆಗೆ ಕರುಣೆ ಎಲ್ಲೆ ೖತೆ?’- ಎಂಬಿತ್ಯಾದಿಯಾದ ಗಾದೆಮಾತುಗಳಿವೆ.

ಈ ಒನಕೆಗೆ ಸಂಬಂಧಿಸಿದೊಂದು ಕತೆ ಮಹಾಭಾರತದಲ್ಲೂ ಇದೆ. ಇದಕ್ಕೆ ‘ಮೌಸಲ ಪರ್ವ’ ಎಂದೇ ಹೆಸರಿಡಲಾಗಿದೆ. ಕುರುಕ್ಷೇತ್ರದ ಯುದ್ಧವೆಲ್ಲ ಮುಗಿದಿದೆ. ಇಡೀ ಯುದ್ಧಕ್ಕೆ ಕಾರಣನಾದ ದುರ್ಯೋಧನ ಕೂಡ ಅವಮಾನಕರವಾಗಿ ಮಡಿದುಹೋಗಿದ್ದಾನೆ. ಸತ್ತ ಮಗನ ಕಳೇಬರವನ್ನು ನೋಡಲು ಗಾಂಧಾರಿ ಯುದ್ಧಭೂಮಿಗೆ ಹೋಗುತ್ತಾಳೆ. ಶ್ರೀಕೃಷ್ಣ ಮತ್ತು ಪಾಂಡವರೂ ಗಾಂಧಾರಿಯ ಜತೆಗೂಡುತ್ತಾರೆ.

ನೂರು ಮಕ್ಕಳನ್ನೂ ಕಳೆದುಕೊಂಡಿದ್ದ ಗಾಂಧಾರಿಯ ಮನಸ್ಸು ಒಡೆದು ಛಿದ್ರವಾಗಿತ್ತು. ತನ್ನೆಲ್ಲ ಮಕ್ಕಳ ಸಾವಿಗೆ ಕಾರಣರಾದ ಪಾಂಡವರು ಮತ್ತು ಕೃಷ್ಣ ಅವಳೆದುರೇ ನಿಂತಿದ್ದರು. ತನ್ನ ಮಗನ ತಪು್ಪಗಳೆಲ್ಲ ತಿಳಿದಿದ್ದರೂ ಆಕೆಯ ಹೃದಯದಲ್ಲಿ ಆಕ್ರೋಶ ಹೆಡೆಯೆತ್ತಿತು. ‘ನನ್ನ ಮಕ್ಕಳ ಸಾವಿಗೆ ಕಾರಣನಾದ ಕೃಷ್ಣ ಇಲ್ಲಿಂದ ಮೂವತ್ತಾರು ವರ್ಷಗಳಲ್ಲಿ ಮರಣ ಹೊಂದಲಿ’ ಎಂದು ಶಾಪಕೊಟ್ಟಳು. ಕರುಣಾಳುವಾದ ಶ್ರೀಕೃಷ್ಣ ಮುಗುಳ್ನಗುತ್ತಲೇ ಗಾಂಧಾರಿಯ ಶಾಪವನ್ನು ಸ್ವೀಕರಿಸಿದ. ಅದಾದ 36 ವರ್ಷಗಳ ಬಳಿಕ ಶ್ರೀಕೃಷ್ಣ ಒಬ್ಬ ಬೇಟೆಗಾರನ ಬಾಣದಿಂದ ಸಾವನ್ನಪ್ಪಿದ. ಇದರೊಂದಿಗೆ ಕೃಷ್ಣಾವತಾರದ ಸಮಾಪ್ತಿಯಾಯಿತು.

ಕೃಷ್ಣ ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ತಪ್ಪಿಸಬಹುದಿತ್ತು. ಆದರೆ ಅವನು ಹಾಗೆ ಮಾಡದೆ ದಾಯಾದಿಗಳೇ ಒಬ್ಬರನ್ನೊಬ್ಬರು ಕೊಲ್ಲುವ ಹಾಗೆ ಮಾಡಿದ. ಆದ್ದರಿಂದ ಕುರುವಂಶವು ಹೇಗೆ ನಾಶವಾಯಿತೋ ಹಾಗೆಯೇ ಕೃಷ್ಣನ ಯಾದವಕುಲವೂ ನಾಶವಾಗಲಿ ಎಂದೂ ಅಂದೇ ಗಾಂಧಾರಿ ಶಾಪವಿತ್ತಿದ್ದಳು.

ಶ್ರೀಕೃಷ್ಣನ ಅವಸಾನಾನಂತರ ಯಾದವರು ಮದ್ಯಪಾನ, ಜೂಜು, ವ್ಯಭಿಚಾರಗಳಲ್ಲಿ ಆಸಕ್ತರಾಗಿ ಕಾಲ ಕಳೆಯುತ್ತಿದ್ದರು. ಅದೊಂದು ದಿನ ಕೃಷ್ಣನಿಗೆ ಜಾಂಬವತಿಯಲ್ಲಿ ಹುಟ್ಟಿದ ಮಗ ಸಾಂಬನಿಗೆ, ಅವನ ಓರಗೆಯ ಇತರ ಯಾದವ ಯವ್ವನಿಗರು ಗರ್ಭಿಣಿ ಸ್ತ್ರೀ ವೇಷವನ್ನು ತೊಡಿಸಿ ಕಣ್ವನೆಂಬ ಋಷಿಯ ಬಳಿಗೆ ಕರೆದೊಯ್ದು ಅವನನ್ನು ಕುರಿತು ‘ಈ ಸ್ತ್ರೀಗೆ ಹುಟ್ಟುವ ಮಗು ಗಂಡೋ ಹೆಣ್ಣೋ?’ ಎಂದು ಹೇಳಬೇಕೆಂದು ಪೀಡಿಸಹತ್ತಿದರು. ಇವರ ಪರಿಹಾಸ್ಯ ಅರ್ಥವಾದ ಋಷಿ ಕಣ್ವ ಸುಮ್ಮನೆ ಮುಗುಳ್ನಗುತ್ತಿರಲಾಗಿ, ಈ ಹುಡುಗರು ಋಷಿಯ ಕೌಪೀನವನ್ನು ಎಳೆದು ಕಾಡಹತ್ತಿದರು. ಇದರಿಂದ ಕೆರಳಿ ಕ್ರುದ್ಧನಾದ ಋಷಿ ‘ಈಕೆ ಹೆರುವುದು ಹೆಣ್ಣೂ ಅಲ್ಲ, ಗಂಡೂ ಅಲ್ಲ. ಬದಲಾಗಿ ಒಂದು ಒನಕೆ! ಅಷ್ಟುಮಾತ್ರವಲ್ಲದೆ ಆ ಒನಕೆಯೇ ನಿಮ್ಮಿಡೀ ಕುಲದ ಮೃತಿಗೆ ಕಾರಣ’ ಎಂದು ಶಾಪವಿತ್ತರು. ಅಂತೆಯೇ ಆ ಸಾಂಬನಲ್ಲಿ ಒನಕೆಯೇ ಹುಟ್ಟಿತು. ಹೆದರಿದ ಯಾದವರು ತಮ್ಮ ಕುಲದ ಮೃತಿಗೆ ಕಾರಣವಾಗಬಹುದಾದ ಆ ಒನಕೆಯನ್ನು ಕಲ್ಲಿನ ಮೇಲೆ ತೇಯ್ದು ಅದನ್ನು ಕೆರೆಗೆ ಬಿಟ್ಟರು. ತೇಯ್ದ ಒನಕೆಯ ಒಂದೊಂದು ಕಣವೂ ಮೊಳೆತು ಕೆರೆಯ ತುಂಬಾ ಜೊಂಡು ಬೆಳೆಯಿತು. ಮುಂದೊಂದು ದಿನ ಇದೇ ಯಾದವರು ತಮ್ಮತಮ್ಮಲ್ಲೇ ಜಗಳವಾಡುತ್ತಾ ಆ ಜೊಂಡಿನಲ್ಲೇ ಹೊಡೆದಾಡಿಕೊಂಡು ಸತ್ತರು.

– ಒನಕೆಯ ಮಾತು ಬಂದಾಗ ಇದೆಲ್ಲಾ ನೆನಪಾಯಿತು.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top