ಕುಟುಂಬ ರಾಜಕಾರಣ ದೂರ ಮಾಡಲು ಪ್ರತಿಜ್ಞೆ ಮಾಡಿ

ಹಾಸನ: ಇನ್ನು ಮುಂದೆ ರಾಜ್ಯದಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಇಲ್ಲಿನ ಕುಟುಂಬ ರಾಜಕಾರಣವನ್ನು ದೂರ ಮಾಡುತ್ತೇವೆ ಎಂದು ಮತದಾರರು ಇಂದೇ ಪ್ರತಿಜ್ಞೆ ಮಾಡಬೇಕು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಕರೆ ನೀಡಿದರು.

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ನಂತರ ನಗರದ ಬಿಎಂ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಭಾಷಣ ಮಾಡಿದರು.

ಕುಟುಂಬ ರಾಜಕಾರಣವನ್ನು ಅಂತ್ಯ ಮಾಡುವುದಕ್ಕಾಗಿ ಪ್ರತಿಯೊಬ್ಬರೂ ನೀವೇ ಮೋದಿ ಎಂದು ಭಾವಿಸಿ ಮನೆ ಮನೆಗೆ ತೆರಳಿ ಮತಯಾಚಿಸಬೇಕು. ಇಂದು ಇಲ್ಲಿ ಸೇರಿರುವ ಬೃಹತ್ ಜನಸ್ತೋಮ ನೋಡಿ ಗೆದ್ದುಬಿಟ್ಟಿದ್ದೇವೆಂದು ಮಲಗಿಬಿಡಬಾರದು ಎಂದರು.

ನಾನು ಕಾಂಗ್ರೆಸ್‌ನಲ್ಲಿ ಎಲ್ಲವನ್ನೂ ಅನುಭವಿಸಿ ಹೊರಗೆ ಹೋಗಿದ್ದೇನೆ ಎನ್ನುತ್ತಿದ್ದಾರೆ. ಆದರೆ ನನ್ನನ್ನು ಕಾಂಗ್ರೆಸ್ ಮಂತ್ರಿ ಮಾಡಿದ ನಂತರ ಜಿಪಂ ಕೇವಲ 2 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್, 16 ಸ್ಥಾನಗಳಲ್ಲಿ ಜಯಗಳಿಸಿತು. ಸ್ವಾತಂತ್ರೃ ಬಂದಾಗಿನಿಂದಲೂ ನಮ್ಮ ಜಿಲ್ಲೆಯಲ್ಲಿ ಬೇರೆ ಪಕ್ಷದವರು ವಿಧಾನಪರಿಷತ್ ಸದಸ್ಯರಾಗಿರಲಿಲ್ಲ. ನನ್ನ ಅವಧಿಯಲ್ಲಿ ಜನರು ವಿಧಾನಪರಿಷತ್ ಸದಸ್ಯರಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ 4.09 ಲಕ್ಷ ಮತ ದೊರಕಿತ್ತು. ಆವರೆಗೆ 3.5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದ ದೇವೇಗೌಡರ ಗೆಲುವನ್ನು ಕೇವಲ 1ಲಕ್ಷಕ್ಕಿಳಿಸಿದೆ. ಅವರು ಕೇವಲ 52 ಸಾವಿರ ಮತಗಳ ಮುನ್ನಡೆಯಲ್ಲಿ ಮಾತ್ರ ಗೆದ್ದರು. ಈವತ್ತು ನನ್ನ ಶಕ್ತಿಯಾಗಿ ನೀವೆಲ್ಲ ಇದ್ದೀರಿ. ಭಾರತೀಯ ಜನತಾ ಪಕ್ಷವಿದೆ. ದೇಶದ ಹೊಸ ಇತಿಹಾಸ ಬರೆಯುತ್ತಿರುವ 130 ಕೋಟಿ ಜನರ ಕಣ್ಮಣಿ ಮೋದಿಯವರ ಕೈ ಬಲಪಡಿಸಬೇಕು.
ನಾನು ಬಿಜೆಪಿ ಸೇರುವ ಮೊದಲು ನನ್ನ ಕ್ಷೇತ್ರದ ಜನರು, ಮುಖಂಡರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಂಡಿದ್ದೇನೆ. ಈಗ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಸಿಎಂ ಮಾಡಬೇಕು. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ 24 ಗಂಟೆಗಳಲ್ಲಿ ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಅದಕ್ಕಾಗಿ ಎಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದರು.

ಕಾಂಗ್ರೆಸ್ ಮತದಾರರ ಬೆಂಬಲ: ಮೇಲ್ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಬಹುದು. ಆದರೆ ತಳಮಟ್ಟದ ಕಾರ್ಯಕರ್ತರು ರಾಜಿಯಾಗುವುದಿಲ್ಲ. ಮೊಕದ್ದಮೆ ಹೂಡಿ ಅವರಿಗೆ ಕಿರುಕುಳ ಕೊಟ್ಟಿರುವುದನ್ನು ಅವರು ಮರೆಯುವುದಿಲ್ಲ. ಜಿಲ್ಲೆಯಲ್ಲಿ ಶೇ.70 ಮತದಾರರು ದೇವೇಗೌಡರ ಕುಟುಂಬದ ವಿರುದ್ಧವಾಗಿದ್ದಾರೆ. ಎಲ್ಲ ತಾಲೂಕುಗಳಲ್ಲಿರುವ ಕಾಂಗ್ರೆಸ್ ಮತದಾರರು ಇದನ್ನು ಅರ್ಥ ಮಾಡಿಕೊಂಡು ನಮಗೆ ಬೆಂಬಲ ನೀಡಬೇಕು ಎಂದರು.

ಕೋಟ್ಯಂತರ ಆಸ್ತಿ ಎಲ್ಲಿಂದ ಬಂತು?: ದೇವೇಗೌಡರ ಕುಟುಂಬಕ್ಕೆ ಮೊದಲು ಕೇವಲ ನಾಲ್ಕೂವರೆ ಎಕರೆ ಜಮೀನಿತ್ತು. ಇಂದು ಅವರು 4500 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ನನ್ನ ಎದುರಾಳಿಯಾಗಿರುವ ಅಭ್ಯರ್ಥಿಗೆ ಇನ್ನೂ 27 ವರ್ಷ ವಯಸ್ಸು. ಒಂದು ದಿನವೂ ಜಮೀನು ಕೆಲಸ ಮಾಡಿಲ್ಲ, ಯಾವುದೇ ವ್ಯವಹಾರವನ್ನೂ ನಡೆಸುತ್ತಿಲ್ಲ. ಕಟ್ಟಿರುವುದು 20 ಹಸುಗಳು ಆದರೂ ಅವರ ಬಳಿ 9.70ಕೋಟಿ ರೂ. ಆಸ್ತಿಯಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಅಷ್ಟೊಂದು ಹಣ, ಆಸ್ತಿ ಅವರಿಗೆಲ್ಲಿಂದ ಬಂತು ಎನ್ನುವುದನ್ನು ಜನರು ಪ್ರಶ್ನಿಸಬೇಕು ಎಂದರು.