More

  ಕುಟುಂಬ ರಾಜಕಾರಣ ಅಪಾಯಕಾರಿ

  ಗೋಕಾಕ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರದ ಚಿಂತೆ, ರೇವಣ್ಣನಿಗೆ ಪತ್ನಿ ಭವಾನಿ ಸ್ಪರ್ಧಿಸುವ ಕ್ಷೇತ್ರದ ಚಿಂತೆ. ಕ್ಷೇತ್ರ ಹಾಗೂ ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡುವವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅಂಥವರಿಗೆ ನಿವೃತ್ತಿ ನೀಡಿ ಬಿಜೆಪಿ ಅರಳಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

  ನಗರದಲ್ಲಿ ಶುಕ್ರವಾರ ಬಿಜೆಪಿ ಯುವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕ ಎಂದಾಗ ಮೊದಲಿಗೆ ನೆನಪಾಗುವುದು ಈ ಭಾಗ ಹಿಂದುಳಿದ ಪ್ರದೇಶ ಅಂತ. ಆದರೆ, ಗೋಕಾಕ ಅತ್ಯಂತ ಸ್ವಚ್ಛ ನಗರಿ. ಇಲ್ಲಿನ ನಗರ ಸಭೆ ಬಿಜೆಪಿ ಹಿಡಿತದಲ್ಲಿದೆ. ಗೋಕಾಕ ನಗರ ಸ್ವಚ್ಛ ಮೈಸೂರದಂತೆ ಕಾಣಿಸುತ್ತದೆ. ರಮೇಶ ಜಾರಕಿಹೊಳಿ ಅವರ ಭದ್ರಕೋಟೆ ಇದು. ಎಲ್ಲಿ ನೋಡಿದರೂ ಅವರನ್ನು ಪ್ರೀತಿಸುವ ಜನ ಕಾಣುತ್ತಾರೆ.

  ಇಡೀ ಕ್ಷೇತ್ರದ ಜನರ ಪ್ರೀತಿಗಳಿಸಿರುವ ರಾಜ್ಯದ ಏಕೈಕ ನಾಯಕ ಎಂದರೆ ರಮೇಶ ಜಾರಕಿಹೊಳಿ ಎನ್ನುವುದು ಗೋಕಾಕನಲ್ಲಿ ಕಂಡುಬರುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದು ಮಂತ್ರಿ ಆಗಬೇಕು ಎಂದರು.

  ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಮುಖ್ಯಮಂತ್ರಿ ಯಾರು ಎಂಬ ಜಗಳ ನಡೆಯುತ್ತಿದೆ. ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನು ನಾನು ಕೊಟ್ಟೆ ಎನ್ನುತ್ತಾರೆ. ಆದರೆ, ಅವರಿಗೆ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ನಮ್ಮ ಮುಖ್ಯಮಂತ್ರಿ ಅವರು ಕಳಸಾ ಬಂಡೂರಿ ಯೋಜನೆಗೆ ಹೋರಾಟ ಮಾಡಿದರು. ಆದರೆ, ಅವರೇ ಆ ಯೋಜನೆ ಸಕಾರಗೊಳಿಸುತ್ತಿದ್ದಾರೆ. ಭದ್ರಾ ಯೋಜನೆಗೆ 6,000 ಕೋಟಿ ತಂದು ಯೋಜನೆ ಕಾರ್ಯರೂಪಕ್ಕೆ ತಂದೆವು. ಇದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಆಡಳಿತದ ದಮ್ಮು ಎಂದು ತಿರುಗೇಟು ನೀಡಿದರು.

  ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ದುಡಿಯುತ್ತಾರೆ. ಇಲ್ಲಿ ಯಾರೇ ಇರಲಿ ಅವರ ಗೆಲುವಿಗಾಗಿ ಶ್ರಮಿಸುತ್ತಾರೆ. ಬಿಜೆಪಿಯ ಈ ನಿಲುವು ನನಗೆ ಬಹಳ ಹಿಡಿಸಿದೆ ಎಂದು ಹೇಳಿದರು. ಬಿಜೆಪಿ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರದ ಅಪಪ್ರಚಾರ ಮಾಡುತ್ತಿದೆ. ಆದರೆ, ದಾಖಲೆಗಳನ್ನು ನೀಡಲು ಮುಂದಾಗುತ್ತಿಲ್ಲ. ಅವರ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್ ನೀಡುವ ಗ್ಯಾರಂಟಿ ಯೋಜನೆ ಹಲವು ರಾಜ್ಯಗಳಲ್ಲಿ ಈಡೇರಿಸಲಿಲ್ಲ. ಗುಜರಾತ್ ಹಾಗೂ ಛತ್ತೀಸಗಢಗಳಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತಗಳಿಸಲಿದೆ. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದರು.

  ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಉಪಾಧ್ಯಕ್ಷ ರವಿಕುಮಾರ, ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ಜಿಲ್ಲಾಧ್ಯಕ್ಷ ಬಸವರಾಜ ನೇಸರಗಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಯುವ ಮೋರ್ಚಾ ನಗರ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಗ್ರಾಮೀಣ ಅಧ್ಯಕ್ಷ ಆನಂದ ಅತ್ತುಗೋಳ, ಅರಬಾವಿ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲ್ಹಾರ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts