ಕುಟುಂಬ ಕಲ್ಯಾಣಕ್ಕೆ ಜನಜಾಗೃತಿ ಮುಖ್ಯ

ಕುಮಟಾ: ವಿಶ್ವದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗದ ಪರಿಪೂರ್ಣ ಅಭಿವೃದ್ಧಿಯಿಂದ ಜನಜಾಗೃತಿ ಹೆಚ್ಚಿ ಕುಟುಂಬ ಕಲ್ಯಾಣ ತನ್ನಿಂತಾನೇ ಬದುಕಿನ ಭಾಗವಾಗುತ್ತದೆ. ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ನಿಯಮ ರೂಪಿಸುವ ಅಗತ್ಯವಿದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ತಿಳಿಸಿದರು.

ಪಟ್ಟಣದ ಶ್ರೀ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಾದಂತೆ ಮೂಲಸೌಲಭ್ಯಗಳ ಕೊರತೆಯೂ ಹೆಚ್ಚುತ್ತದೆ ಎಂದರು.

ಜಿಲ್ಲಾ ಕುಟುಂಬ ಯೋಜನಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ಮಾತನಾಡಿ, ಕುಟುಂಬ ಯೋಜನೆಗೆ ಬೇಕಾದ ಎಲ್ಲ ಮಾಹಿತಿಗಳೂ ಬಹುತೇಕ ಜನರಿಗೆ ತಿಳಿದಿವೆ, ಆದರೆ ನಿಜ ಜೀವನದಲ್ಲಿ ಆಳವಡಿಕೆಯ ಸಂದರ್ಭದಲ್ಲಿ ಹಿಂಜರಿಕೆ ಕಂಡುಬರುತ್ತಿದೆ. ಕುಟುಂಬ ಯೋಜನೆ ಬಗ್ಗೆ ಮಹಿಳೆಯರಿಗಿಂತ ಪುರುಷರಲ್ಲಿ ಜಾಗೃತಿಯ ಅವಶ್ಯಕತೆ ಹೆಚ್ಚಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ನಿಸರ್ಗಕ್ಕೆ ವಿರುದ್ಧವಾಗಿ ಮಾನವ ಬದುಕುವುದು ಹೆಚ್ಚುತ್ತದೆ. ಇದು ವಿನಾಶಕ್ಕೆ ಕಾರಣವಾಗಬಹುದು. ಮಿತ ಸಂತಾನವೇ ಸುಖಕ್ಕೆ ದಾರಿ ಎಂದರು.

ಪ್ರಾಚಾರ್ಯ ರತನ ಗಾಂವಕಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ರಂಜಿತಾ ಶೆಟ್ಟಿ ಮಾತನಾಡಿದರು. ಉಪನ್ಯಾಸಕ ದಯಾನಂದ ಶೇಟ ಸ್ವಾಗತಿಸಿದರು. ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *