ಹೂವಿನಹಡಗಲಿ: ಇತ್ತೀಚಿನ ದಿನಗಳಲ್ಲಿ ಕೂಡು ಕುಟುಂಬ ಪದ್ಧತಿ ಕಡಿಮೆಯಾಗುತ್ತಿದೆ ಎಂದು ಶಿಕ್ಷಕ ಶಿವಪ್ರಕಾಶ್ ಹೇಳಿದರು.
ಕೊಂಬಳಿ ಗ್ರಾಮದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೌಟುಂಬಿಕ ಸಂಬಂಧಗಳು, ಕೃಷಿ ಪ್ರಗತಿಯಲ್ಲಿ ವಾಣಿಜ್ಯ ಬೆಳೆಗಳ ಅಗತ್ಯತೆ’ ಕುರಿತು ಭಾನುವಾರ ಉಪನ್ಯಾಸ ನೀಡಿದರು. ಮಾನಸಿಕ ಆರೋಗ್ಯವನ್ನು ಸ್ಥಿರವಾಗಿಡುವಲ್ಲಿ ಕುಟುಂಬಗಳ ಪಾತ್ರ ಪ್ರಮುಖವಾಗಿದೆ ಎಂದರು.
ಆಧುನಿಕ ಪ್ರಪಂಚದಲ್ಲಿ ಅವಿಭಕ್ತ ಕುಟುಂಬ ಪರಿಕಲ್ಪನೆ ತೆರೆಮರೆಗೆ ಸರಿಯುತ್ತಿದ್ದು, ವಿಭಕ್ತ, ಸಿಂಗಲ್ ಪೇರೆಂಟ್ ಕುಟುಂಬಗಳು ಹೆಚ್ಚುತ್ತಿವೆ. ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಬಳಸುವ ಮೂಲಕ ವಾಣಿಜ್ಯ ಬೆಳೆಗಳ ಕಡೆಗೆ ರೈತರು ಹೆಜ್ಜೆ ಹಾಕಬೇಕು. ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ, ಭಾವನಾತ್ಮಕ, ಆರ್ಥಿಕ ಬೆಂಬಲಕ್ಕೆ ಕುಟುಂಬದ ಪ್ರೀತಿ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಶಿವಪ್ರಕಾಶ ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಾತಿ, ಧರ್ಮವನ್ನು ಮೀರಿದ ಸಂಬಂಧಗಳಿದ್ದವು. ಜಾತ್ಯತೀತ ನೆಲೆಯಲ್ಲಿ ಜೀವಿಸುತ್ತಿದ್ದ ಮನುಷ್ಯರು ಪ್ರಸ್ತುತ ಮನಸ್ಥಿತಿಯನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದಾರೆ ಎಂದರು. ಮಾಜಿ ಸೈನಿಕ ಮಹಾಬಲೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಟಿ.ವೀರೇಂದ್ರ, ಮಾಜಿ ಅಧ್ಯಕ್ಷ ಎಚ್.ಜಿ.ಪಾಟೀಲ, ಶಿಕ್ಷಕ ಯುವರಾಜಗೌಡ, ಜಾನಪದ ಕಲಾವಿದ ಪರಮೇಶ್ವರಪ್ಪ, ಉಪನ್ಯಾಸಕರಾದ ಕೆ.ಜಯಪ್ರಕಾಶ, ಉಪನ್ಯಾಸಕ ಪ್ರಭು ಎಸ್., ದತ್ತಿದಾನಿ ರೇಣುಕಯ್ಯ ಸ್ವಾಮಿ ಇತರರಿದ್ದರು.