ಕುಖ್ಯಾತ ಮನೆಗಳ್ಳನ ಬಂಧನ

ಹುಬ್ಬಳ್ಳಿ:ಮನೆ ಕಳ್ಳತನದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಗರದ ಕುಖ್ಯಾತ ಕಳ್ಳನನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಕಾಪುರ ಚೌಕ್ ಯಲ್ಲಾಪುರ ಓಣಿ ಗೊಲ್ಲರ ಕಾಲನಿಯ ರಾಜು ಉರ್ಫ ಜಂಗಲ್ಯಾ ತಂದೆ ಗಡೆಪ್ಪ ಬಿಲಾನಾ (31) ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸರು ರಾಜುನನ್ನು ಬಂಧಿಸಿ 8.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ರಾಡ್ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜು ಹಳೇ ಅಪರಾಧಿ ಇದ್ದು, ಹುಸೇನಸಾಬ ತಂದೆ ಇಮಾಮಸಾಬ ಕನವಳ್ಳಿ ಎಂಬಾತನೊಂದಿಗೆ ಸೇರಿ ನಾಲ್ಕೈದು ಮನೆಕಳ್ಳತನ ಮಾಡಿದ್ದಾನೆ. ಹುಸೇನಸಾಬ ಸದ್ಯ ತಲೆ ಮರೆಸಿಕೊಂಡಿದ್ದು, ಪತ್ತೆಗೆ ಜಾಲ ಬೀಸಲಾಗಿದೆ. ಆತನನ್ನು ಬಂಧಿಸಿದರೆ ಅವನ ಬಳಿಯೂ 10 ಲಕ್ಷ ರೂ. ಮೌಲ್ಯದ ಆಭರಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಆಯುಕ್ತರು ತಿಳಿಸಿದರು.

ರಾಜು ಹಾಗೂ ಹುಸೇನಸಾಬ ಒಂದು ಪ್ರದೇಶದಲ್ಲಿ ಸುತ್ತಾಡಿ ಅಲ್ಲಿನ ಮನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದರು. ಹಳೇಹುಬ್ಬಳ್ಳಿಯ ಸಂತೋಷನಗರ, ಎಂಟಿಎಸ್ ಕಾಲನಿ, ಕಲಾವಿದರ ಪ್ಲಾಟ್, ಮುರಾರ್ಜಿ ನಗರದಲ್ಲಿ ನಾಲ್ಕು ಕಡೆ ಮನೆ ಕಳ್ಳತನ ಮಾಡಿದ್ದಾರೆ. ಕಳವು ಮಾಡಿದ ಆಭರಣಗಳನ್ನು ಅಡವಿಟ್ಟು, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿಸಿದರು.

ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ಎಎಸ್​ಐ ಎಂ.ಐ. ಪಠಾಣ, ಆರ್.ಎಚ್. ಮಾಣಿಕನವರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 10 ಸಾವಿರ ರೂ. ಬಹುಮಾನ ಘೋಷಿಸಿರುವುದಾಗಿ ಆಯುಕ್ತರು ತಿಳಿಸಿದರು.

ರಾಜನಗರ ದರೋಡೆ ಪ್ರಕರಣ ಸುಳಿವು ಪತ್ತೆ

ಹುಬ್ಬಳ್ಳಿ: ರಾಜನಗರದಲ್ಲಿ ಮನೆಗೆ ನುಗ್ಗಿ ವೃದ್ಧನ ಕೊಲೆಗೈದು ದರೋಡೆ ನಡೆಸಿದ ಪ್ರಕರಣದಲ್ಲಿ ಕೆಲ ಮಹತ್ವದ ಸುಳಿವು ಪತ್ತೆಯಾಗಿದ್ದು, ಇದು ಅಂತಾರಾಜ್ಯ ಕಳ್ಳರ ಕೈವಾಡವಿರುವುದಾಗಿ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕರಿಂದ ಆರು ಜನರ ತಂಡ ಈ ಕೃತ್ಯ ಎಸಗಿದೆ. ಪತ್ತೆಗಾಗಿ ಡಿಸಿಪಿ ಗಡಾದಿ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದರು.

ಅಂತಾರಾಜ್ಯ ಕಳ್ಳರ ಕೈಚಳಕದ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಸಹಕಾರ ಕೋರಿದ್ದೇವೆ. ಅಲ್ಲದೆ, ಬೇರೆಬೇರೆ ರಾಜ್ಯಗಳ ಅಪರಾಧ ವಿಭಾಗದವರ ನೆರವು ಕೇಳಿದ್ದೇವೆ. ಲಭ್ಯ ಸುಳಿವುಗಳನ್ನು ಇಟ್ಟುಕೊಂಡು ಶೀಘ್ರ ದರೋಡೆಕೋರರ ಜಾಲ ಭೇದಿಸುವುದಾಗಿ ಹೇಳಿದರು.

ಕೃತ್ಯ ನಡೆದ ಸ್ಥಳದ ಸನಿಹದಲ್ಲಿ ಯಾವುದೇ ಸಿಸಿ ಟಿವಿ ಇರಲಿಲ್ಲ. ಸ್ಥಳೀಯ ಖದೀಮರ ಸಹಕಾರ ಇಲ್ಲದೆ ಬೇರೆ ರಾಜ್ಯದ ಕಳ್ಳರು ಇಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಿಲ್ಲ ನಿಜ. ಆ ಮನೆ ಮಾಲೀಕ ಬಣವಿಯವರು ಬ್ಯಾಂಕ್​ನಿಂದ 10 ಲಕ್ಷ ಡ್ರಾ ಮಾಡಿಕೊಂಡು ಬಂದಿದ್ದರೋ ಇಲ್ಲವೋ ಗೊತ್ತಾಗಿಲ್ಲ. ಬೇರೆ ಯಾರಾದರೂ ಹಣ ಡ್ರಾ ಮಾಡಿಕೊಂಡು ಬಂದಿದ್ದರೆ, ದರೋಡೆಕೋರರು ತಪ್ಪಾಗಿ ಗ್ರಹಿಸಿಕೊಂಡು ಬಣವಿಯವರ ಮನೆಗೆ ನುಗ್ಗಿದರೆ ಎಂಬುದು ಸೇರಿ ವಿವಿಧ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ಉತ್ತರಿಸಿದರು.

ಕಾರವಾರ ರಸ್ತೆ ಬೈಪಾಸ್ ಬಳಿ ಸಿದ್ದಾಪುರದ ವ್ಯಕ್ತಿಯನ್ನು ಥಳಿಸಿ 32 ಲಕ್ಷ ರೂ. ದೋಚಿದ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

ದಾವತ್ ಎ ಇಸ್ಲಾಂ ಎಂಬ ಸಂಘಟನೆಯ ಸಮಾವೇಶಕ್ಕೆ ಪರವಾನಗಿ ನೀಡುವ ಬಗ್ಗೆ ಯಾವುದೇ ಒತ್ತಡ ಇರಲಿಲ್ಲ. ಪರಿಶೀಲನೆ ಮಾಡಿ ಪರವಾನಗಿ ನೀಡಲಾಗಿತ್ತು ಎಂದು ಆಯುಕ್ತ ನಾಗರಾಜ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ರಾತ್ರಿ ಗಸ್ತು ಸಶಕ್ತಗೊಳಿಸಲು ಯತ್ನ

ಹುಬ್ಬಳ್ಳಿ :ಅವಳಿ ನಗರದಲ್ಲಿ ದರೋಡೆ, ಮನೆಕಳ್ಳತನ ಸೇರಿ ಈಚೆಗೆ ಹೆಚ್ಚಾಗಿರುವ ಅಪರಾಧಿಕ ಕೃತ್ಯಗಳನ್ನು ಮಟ್ಟ ಹಾಕುವ ದಿಸೆಯಲ್ಲಿ ಮಹಾನಗರ ಪೊಲೀಸ್ ಕಮಿಷನರೇಟ್ ಹೊಸ ಯೋಜನೆ ರೂಪಿಸಿದೆ.

ರಾತ್ರಿ ಗಸ್ತು ಸಶಕ್ತಗೊಳಿಸುವ ಜತೆಗೆ ಆಸಕ್ತ ಯುವಕರನ್ನು ಪೊಲೀಸರ ನೈಟ್ ಬೀಟ್​ಗೆ ಸೇರಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕಳ್ಳತನ ನಿಯಂತ್ರಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದ್ದಾರೆ.

ಈಗಾಗಲೇ ಧಾರವಾಡದಲ್ಲಿ 60- 70 ಯುವಕರ ಪಡೆ ಪೊಲೀಸ್ ನೈಟ್ ಬೀಟ್ ಜೊತೆಗೆ ಕೆಲಸ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಅವರಿಗೆ ಗುರುತಿನ ಪತ್ರ ಹಾಗೂ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಗಸ್ತು ತಿರುಗುವ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದರು.

ಪೊಲೀಸರಿಗೆ ಪರಿಚಯ ಇರುವ, ಸ್ವ ಇಚ್ಛೆಯಿಂದ ಬರುವ ಯುವಕರನ್ನು ಬೀಟ್​ನಲ್ಲಿ ಸೇರಿಸಿಕೊಳ್ಳಲಾಗುವುದು, ಮುಂಬರುವ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಈ ಯೋಜನೆ ಜಾರಿಗೊಳಿಸುವುದಾಗಿ ಅವರು ಹೇಳಿದರು.

ದರೋಡೆ ಪ್ರಕರಣ ಕಡಿಮೆ: ಹಾಗೆ ನೋಡಿದರೆ 2016ಕ್ಕೆ ಹೋಲಿಸಿದರೆ ಈಚಿನ ವರ್ಷಗಳಲ್ಲಿ ದರೋಡೆ ಪ್ರಕರಣ ಕಡಿಮೆಯಾಗಿವೆ. 2016ರಲ್ಲಿ 10 ದರೋಡೆ ಪ್ರಕರಣ ನಡೆದಿತ್ತು. 2017ರಲ್ಲಿ ಎರಡು ನಡೆದಿದ್ದವು. ಅದರಲ್ಲೂ ಒಂದು ಪ್ರಕರಣ ಭೇದಿಸಲಾಗಿದೆ ಎಂದು ಆಯುಕ್ತರು ಹೇಳಿದರು.

ಹುಬ್ಬಳ್ಳಿ ಎಪಿಎಂಸಿಯಲ್ಲಿ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಆಯುಕ್ತರು, ಅಲ್ಲಿ ವ್ಯಾಪಾರಸ್ಥರು ಪೊಲೀಸ್ ಸೂಚನೆ ಮೇರೆಗೆ ಜಾಗೃತಿ ವಹಿಸುತ್ತಿದ್ದಾರೆ. ಅಂಗಡಿಗಳಲ್ಲಿ ಹೆಚ್ಚಿನ ಹಣ ಇಡುತ್ತಿಲ್ಲ. ಅಲ್ಲದೆ, ಕಳ್ಳತನದ ಬಗ್ಗೆ ಯಾರೂ ದೂರು ನೀಡುತ್ತಿಲ್ಲ. ದೂರು ಇಲ್ಲದೆ ಕ್ರಮ ಕೈಗೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಹು-ಧಾ ಪೊಲೀಸ್ ಆಯುಕ್ತರಾಗಿ ಲೋಕೇಶಕುಮಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಬಿ.ಎಸ್. ಲೋಕೇಶಕುಮಾರ ಅವರನ್ನು ಸರ್ಕಾರ ನೇಮಕ ಮಾಡಿದೆ. ಕೋಲಾರ ಗೋಲ್ಡ್ ಫೀಲ್ಡ್ ಎಸ್ಪಿಯಾಗಿದ್ದ ಲೋಕೇಶಕುಮಾರ ಅವರಿಗೆ ಡಿಐಜಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಈ ಹಿಂದೆ ಧಾರವಾಡ ಎಸ್ಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಹು-ಧಾ ಪೊಲೀಸ್ ಆಯುಕ್ತರಾಗಿದ್ದ ಎಂ.ಎನ್. ನಾಗರಾಜ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.