ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಮೇ 19ರಂದು

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ.

ಕುಂದಗೋಳ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವುಗೊಂಡಿತ್ತು. ಲೋಕಸಭೆ ಚುನಾವಣೆ ಕಾವಿನ ಮಧ್ಯೆಯೇ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತುರುಸುಗೊಂಡಿವೆ.

ಈ ಮಧ್ಯೆ ಕುಂದಗೋಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಯಾರನ್ನು ಘೋಷಿಸಬೇಕೆಂಬುದು ಕಾಂಗ್ರೆಸ್​ಗೆ ತಲೆ ನೋವಾಗಿದೆ. ಶಿವಳ್ಳಿ ನಂತರ ಕ್ಷೇತ್ರದಲ್ಲಿ ಅವರಷ್ಟು ಜನಮನ್ನಣೆ ಗಳಿಸಿದ ಮತ್ತೊಬ್ಬ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟದಲ್ಲಿ ತೊಡಗಬೇಕಿದೆ.

ಶಿವಳ್ಳಿಯವರ ಪತ್ನಿ ಅಥವಾ ಅವರ ಸಹೋದರರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಕುಟುಂಬದವರಿಂದಲೇ ಧುರೀಣರ ಮುಂದೆ ಬಂದಿದೆ ಎನ್ನಲಾಗಿದೆ. ಆದರೆ ಯಾರು ಕಣಕ್ಕಿಳಿಯಬೇಕೆಂಬುದರ ಬಗ್ಗೆ ಅವರ ಕುಟುಂಬದಲ್ಲಿಯೇ ಗೊಂದಲಗಳಿವೆ. ಶಿವಳ್ಳಿ ಅವರ ಪತ್ನಿಗೆ ಟಿಕೆಟ್ ನೀಡಬೇಕೆಂಬುದು ಬಹುತೇಕ ಕಾರ್ಯಕರ್ತರ ಆಶಯ. ಆದರೆ ಶಿವಳ್ಳಿಯವರ ಸಹೋದರರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇದೆ.

ಶಿವಳ್ಳಿಯವರಷ್ಟು ಜನಸಂಪರ್ಕವಾಗಲಿ, ಪ್ರಭಾವವಾಗಲಿ ಅವರ ಸಹೋದರರಿಗೆ ಇಲ್ಲ. ಪತ್ನಿಗೆ ಟಿಕೆಟ್ ನೀಡಿದರೆ ಅನುಕಂಪದ ಮತಗಳು ಬರಬಹುದೆಂಬ ಲೆಕ್ಕಾಚಾರ. ಕೆಲ ಹೊಸಬರೂ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದು, ಅವಕಾಶ ನೀಡುವಂತೆ ಮುಖಂಡರ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಕಟಗಿ, ಗುತ್ತಲ ಕುಟುಂಬ ಕೂಡ ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನಿಸಬಹುದು. ದೋಸ್ತಿ ಸರ್ಕಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್​ನ ಒಬ್ಬರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್​ನಲ್ಲಿ ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಜೆಡಿಎಸ್​ನ ಮಾಜಿ ಶಾಸಕ ಎಂ.ಎಸ್. ಅಕ್ಕಿ ಅವರಿಗೆ ಅವಕಾಶ ಸಿಕ್ಕರೆ ಅಚ್ಚರಿ ಪಡಬೇಕಿಲ್ಲ.

ಕಳೆದ ಚುನಾವಣೆಯಲ್ಲಿ 6,280 ಮತಗಳನ್ನು ಪಡೆದಿದ್ದ ಜೆಡಿಎಸ್​ನ ಎಂ.ಎಸ್. ಅಕ್ಕಿ, 4ನೇ ಸ್ಥಾನಕ್ಕೆ ಕುಸಿದಿದ್ದರು. ದೋಸ್ತಿ ಸರ್ಕಾರದಿಂದ ಇಲ್ಲಿಯೂ ಒಬ್ಬರನ್ನು ಕಣಕ್ಕಿಳಿಸಲು ತೀರ್ವನಿಸಿದಲ್ಲಿ ಎಂ.ಎಸ್. ಅಕ್ಕಿ ಅಥವಾ ಶಿವಳ್ಳಿ ಕುಟುಂಬದ ಒಬ್ಬರು ಚುನಾವಣೆಯಿಂದ ಹಿಂದೆ ಸರಿಯುವುದು ಅನಿವಾರ್ಯ.

ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಸೋಲುಂಡಿದ್ದ ಬಿಜೆಪಿಯ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅವರಿಗೆ ಈ ಬಾರಿಯೂ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ಟಿಕೆಟ್​ಗಾಗಿ ತೀವ್ರ ಪೈಪೋಟಿ ಒಡ್ಡಿದ್ದ ಎಂ.ಆರ್. ಪಾಟೀಲ ಹೆಸರೂ ಕೇಳಿಬರುತ್ತಿದೆ.

ಏ. 23ಕ್ಕೆ ಲೋಕಸಭೆ ಚುನಾವಣೆ ನಡೆದ ನಂತರವೂ ಜಿಲ್ಲೆಯ ಚುನಾವಣೆ ಕಾವು ತಣ್ಣಗಾಗದೇ, ಮೇ 19ರ ಕುಂದಗೋಳ ಉಪ ಚುನಾವಣೆಯತ್ತ ತಿರುವು ಪಡೆದುಕೊಳ್ಳಲಿದೆ.

ಕ್ಷೇತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಂಗ್ರೆಸ್​ಗೆ ಇದ್ದರೆ, ಕಳೆದ ಬಾರಿ ಕಡಿಮೆ ಅಂತರದಲ್ಲಿ ತಪ್ಪಿದ್ದ ಗೆಲುವನ್ನು ಈ ಬಾರಿ ಪಡೆಯಲೇಬೇಕೆಂಬ ಬಯಕೆ ಬಿಜೆಪಿಯದ್ದು.

ಈ ಲೋಕಸಭೆ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದಿಂದ ಹೆಚ್ಚು ಮತಗಳನ್ನು ತಮಗೆ ಹಾಕಿಸಿ, ಟಿಕೆಟ್ ಕೊಡಿಸೋಣ ಎಂಬ ಷರತ್ತನ್ನು ಎರಡೂ ಪಕ್ಷಗಳ ಅಭ್ಯರ್ಥಿಗಳು ವಿಧಿಸುವ ಸಾಧ್ಯತೆ ಇದೆ.

ದಿ. ಸಿ.ಎಸ್. ಶಿವಳ್ಳಿ ಅವರ ಕುಟುಂಬದ ಒಬ್ಬರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬುದು ಕಾರ್ಯಕರ್ತರ ಅಭಿಪ್ರಾಯ. ಈ ಕುರಿತ ವಿವರವುಳ್ಳ ವರದಿಯನ್ನು 3 ದಿನದೊಳಗೆ ಹೈಕಮಾಂಡ್​ಗೆ ಕಳುಹಿಸಲಾಗುವುದು.

ಅನಿಲಕುಮಾರ ಪಾಟೀಲ, ಅಧ್ಯಕ್ಷರು, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್