ಕೀರ್ತಿಗೆ ಬಾಲಿವುಡ್ ಬುಲಾವ್

ದಕ್ಷಿಣ ಭಾರತದಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿದ್ದಾರೆ ನಟಿ ಕೀರ್ತಿ ಸುರೇಶ್. ಕಳೆದ ವರ್ಷ ತೆರೆಕಂಡ ‘ಮಹಾನಟಿ’ ಸಿನಿಮಾದಿಂದಾಗಿ ಅವರ ಖ್ಯಾತಿ ದೇಶದ ಉದ್ದಗಲಕ್ಕೂ ಹಬ್ಬಿತು. ಆಗಲೇ ಅವರ ಮೇಲೆ ಬಾಲಿವುಡ್ ಮಂದಿ ಕಣ್ಣಿಟ್ಟಿದ್ದರು. ಆದರೆ ಸೂಕ್ತ ಕಥೆ ಮತ್ತು ಪಾತ್ರಕ್ಕಾಗಿ ಕಾದಿದ್ದ ಕೀರ್ತಿ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ಅಜಯ್ ದೇವಗನ್ ನಟಿಸಲಿರುವ ಸಯ್ಯದ್ ಅಬ್ದುಲ್ ರಹೀಮ್ ಬಯೋಪಿಕ್​ಗೆ ನಾಯಕಿಯಾಗಿ ಕೀರ್ತಿ ಆಯ್ಕೆ ಆಗಿದ್ದಾರೆ.

1950ರಿಂದ 1963ರವರೆಗೆ ಭಾರತೀಯ ಫುಟ್​ಬಾಲ್ ತಂಡದ ಕೋಚ್ ಮತ್ತು ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ ಸಯ್ಯದ್ ಅಬ್ದುಲ್ ರಹೀಮ್ ಜೀವನವನ್ನಾಧರಿಸಿ ನಿರ್ದೇಶಕ ಅಮಿತ್ ಶರ್ಮಾ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡರೆ, ಅವರ ಪತ್ನಿಯಾಗಿ ಕೀರ್ತಿ ನಟಿಸಲಿದ್ದಾರೆ. ‘ಇಂಥ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ನಮ್ಮ ನಿರ್ವಪಕರು ಈ ಕಥೆಯನ್ನು ಆಯ್ದುಕೊಂಡಿದ್ದಕ್ಕೆ ಖುಷಿಯಿದೆ. ಈವರೆಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸವಾಲೊಡ್ಡುವ ಪಾತ್ರಗಳನ್ನೇ ನಾನು ಆಯ್ದುಕೊಳ್ಳುತ್ತ ಬಂದಿದ್ದೇನೆ. ನಿರ್ದೇಶಕರು ಬಂದು ಕಥೆ ಹೇಳಿದಾಗ ನಿಜಕ್ಕೂ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಚಿತ್ರ ಇದಾಗಲಿದೆ’ ಎಂದಿದ್ದಾರೆ ಕೀರ್ತಿ ಸುರೇಶ್. ಇನ್ನು, ಅಜಯ್ ದೇವಗನ್ ಜತೆ ತೆರೆಹಂಚಿಕೊಳ್ಳಲಿರುವುದಕ್ಕೂ ಕೀರ್ತಿ ಖುಷಿಯಲ್ಲಿದ್ದಾರೆ. ‘ನಾನು ಅವರ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಭಾರತದ ಪ್ರತಿಭಾನ್ವಿತ ಸೂಪರ್​ಸ್ಟಾರ್​ಗಳಲ್ಲಿ ಅವರೂ ಒಬ್ಬರು. ಅಂಥ ನಟನ ಜತೆ ಅಭಿನಯಿಸಲು ಕಾತರಳಾಗಿದ್ದೇನೆ’ ಎಂಬುದು ಅವರ ಹೇಳಿಕೆ.

ಈ ಚಿತ್ರದ ಶೂಟಿಂಗ್​ಗೆ ಜೂನ್​ನಲ್ಲಿ ಚಾಲನೆ ಸಿಗಲಿದೆ. ಬೋನಿ ಕಪೂರ್ ನಿರ್ಮಾಣ ಮಾಡಲಿದ್ದಾರೆ. ‘ಫುಟ್​ಬಾಲ್ ಕುರಿತು ಕಥೆ ಮಾತ್ರವಲ್ಲದೆ, ದಂಪತಿ ಬದುಕಿನ ಲವ್​ಸ್ಟೋರಿಯೂ ಈ ಚಿತ್ರದಲ್ಲಿ ಇರಲಿದೆ. ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆ ಆಗಿರುವುದರಿಂದ ದಕ್ಷಿಣ ಭಾರತದಲ್ಲಿ ದೊಡ್ಡ ಪ್ರಮಾಣದ ಪ್ರೇಕ್ಷಕವರ್ಗವನ್ನು ನಮ್ಮ ಚಿತ್ರ ತಲುಪಲು ಸಹಾಯಕ ಆಗಲಿದೆ’ ಎಂದಿದ್ದಾರೆ ಬೋನಿ ಕಪೂರ್.