ಸೊಳ್ಳೆ ಚಿಕ್ಕದಾದರೂ ಕಾಟ ದೊಡ್ಡದು, ಸ್ವಚ್ಛತೆ ಕಾಯ್ದುಕೊಂಡು ಇದರಿಂದ ಪಾರಾಗೋಣ: ಸಿ. ಸತ್ಯಭಾಮಾ

ಚಿತ್ರದುರ್ಗ: ನಿರಂತರ ಸ್ವಚ್ಛತೆಯಿಂದ ಮಲೇರಿಯಾ ಸೇರಿ ಕೀಟ ಜನ್ಯ ರೋಗಗಳನ್ನು ನಿಯಂತ್ರಿಸಬಹುದು ಎಂದು ಜಿಪಂ ಸಿಇಒ ಸಿ. ಸತ್ಯಭಾಮಾ ಹೇಳಿದರು.

ಡಿಎಚ್‌ಒ ಕಚೇರಿಯಲ್ಲಿ ಗುರುವಾರ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 2019-20ನೇ ಸಾಲಿನಲ್ಲಿ ’ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ‘ ಎಂಬ ಧ್ಯೇಯವನ್ನು ಹೊಂದಲಾಗಿದೆ. ಈ ಧ್ಯೇಯಕ್ಕೆ ಪೂರಕವಾಗಿ ವಾಸಿಸುವ ಪ್ರದೇಶದ ಸ್ವಚ್ಛತೆಗೆ ಗಮನ ಕೊಡಬೇಕಿದೆ. ಕೀಟ ಚಿಕ್ಕದಾದರೂ ಕಾಟ ದೊಡ್ಡದು ಎಂಬುದನ್ನು ಮರೆಯಬಾರದು ಎಂದರು.

ಮಲೇರಿಯಾ ಪೀಡಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ 4ನೇ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಲೇರಿಯಾ ಪೀಡಿತರ ವಿಷಯದಲ್ಲಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ 14 ಪ್ರಕರಣಗಳ ವರದಿ ಆಗಿದ್ದರೇ, ಈ ವರ್ಷ 3ಕ್ಕೆ ಕಡಿಮೆಯಾಗಿದೆ. ಇದು ಸಂತಸದ ವಿಷಯವಾದರೂ, ಕೀಟಜನ್ಯ ರೋಗಗಳನ್ನು ತಡೆಟ್ಟಗುವ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.

ಡಾ. ಬಿ.ಜಯಮ್ಮ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಒಂದು ಲಕ್ಷ ಜನರ ರಕ್ತ ಲೇಪನ ಪರೀಕ್ಷೆ ಮಾಡಲಾಗಿದೆ. ನಗರ ವಾಸಿಗಳು ರಕ್ತ ಪರೀಕ್ಷೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಡಿಎಚ್‌ಒ ಡಾ. ಪಾಲಾಕ್ಷ, ಡಾ. ರಂಗನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *