ಕಿಸಾನ್ ಸಮ್ಮಾನ್ ಸೌಲಭ್ಯ ತಲುಪಿಸಿ

ಹೊಸಕೋಟೆ: ಕಿಸಾನ್ ಸಮ್ಮಾನ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಿಗರು, ಕಂದಾಯಾಧಿಕಾರಿಗಳು ಯೋಜನೆಯಿಂದ ವಂಚಿತರಾದವರ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಸಮರ್ಪಕ ಜಾರಿ ನಿಟ್ಟಿನಲ್ಲಿ ಮಂಗಳವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಸುಮಾರು 294 ಗ್ರಾಮಗಳಿದ್ದು, ಪ್ರತಿ ಗ್ರಾಮದಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೋಂದಣಿ ಜತೆಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕಕೊಂಡಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಹೋಬಳಿಗೆ ಒಬ್ಬ ನೋಡಲ್ ಅಧಿಕಾರಿ ನೇಮಿಸಿ ಅವರಿಂದ ಮಾಹಿತಿ ಪಡೆದು ವರದಿ ನೀಡಲು ಸೂಚಿಸಿದರು.

ಹೊಸಕೋಟೆ ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಸುಮಾರು 1400 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುವುದು ಕಷ್ಟ. ಕೊರೆಸಿದ ಸುಮಾರು 60ರಷ್ಟು ಕೊಳವೆಬಾವಿಗಳಲ್ಲಿ ನೀರು ದೊರೆಯದೆ ಅಂತರ್ಜಲ ಕುಸಿದಿದೆ ಎಂದರು.

ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಕಾರ್ಖಾನೆ, ಕೋಳಿ ಫಾರಂ, ಉಗ್ರಾಣಗಳಲ್ಲಿ ಕಡ್ಡಾಯವಾಗಿ ಮಳೆ ಕೊಯ್ಲು ಪದ್ಧತಿ ಅನುಷ್ಠಾನಗೊಳಿಸಬೇಕು. ಈ ಬಗ್ಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಕಾರ್ಯಕ್ರಮ ಅನುಷ್ಠಾನಗೊಳಿಸಿರುವ ಬಗ್ಗೆ ಸಮಗ್ರ ಮಾಹಿತಿ ಪಡೆದು, ಅನುಷ್ಠಾನಗೊಳಿಸದಿದ್ದರೆ ನೋಟಿಸ್ ಜಾರಿ ಮಾಡಿ ಎಂದರು.

ತಾಲೂಕಿನಲ್ಲಿ ಮಳೆ ನೀರಿನ ಸಂರಕ್ಷಣೆಯಲ್ಲಿ ಹಿಂದಿದೆ. ಇದಕ್ಕೆ ಅಧಿಕಾರಿ ಬೇಜವಾಬ್ದಾರಿ ಕಾರಣವಾಗಿದ್ದು, ಈ ಪರಿಸ್ಥಿತಿ ಬದಲಾಗಬೇಕು ಎಂದರು.

ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುಬ್ರಮಣಿ, ತಾಪಂ ಇಒ ಪ್ರಕಾಶ್ ಇದ್ದರು.

ಮಳೆಕೊಯ್ಲು ಪದ್ಧತಿ ಜಾರಿಗೆ ತರದಿರುವ ಕಾರ್ಖಾನೆ, ವೇರ್​ಹೌಸ್, ಕೋಳಿ ಸಾಕಣೆಕೇಂದ್ರ, ಉಗ್ರಾಣಗಳ ವಿರುದ್ಧ ಕಾನೂನು ರೀತಿ ಸ್ವಯಂ ದೂರು ದಾಖಲಿಸಿ ಬಂದ್ ಮಾಡಿಸಬಹುದು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ ಮಳೆಕೊಯ್ಲು ಅಳವಡಿಸಿಕೊಂಡು ನೀರಿನ ಸಂರಕ್ಷಣೆಗೆ ತಿಳಿಹೇಳಬೇಕು.

| ರಮೇಶ್ ತಹಸೀಲ್ದಾರ್

Leave a Reply

Your email address will not be published. Required fields are marked *