ಶನಿವಾರಸಂತೆ: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರು ಬಿಳಹ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೊಡಗು-ಹಾಸನ ಜಿಲ್ಲಾ ಗಡಿಭಾಗದ ದುಂಡಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿನಿಂದ ಕಾಡಾನೆಗಳ ಹಾವಳಿ ಮಿತಿ ಮೀರಿದೆ.
ಯಸಳೂರು ಮೀಸಲು ಅರಣ್ಯದಿಂದ ಬರುತ್ತಿರುವ ಮರಿಯಾನೆ ಸೇರಿದಂತೆ 6ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮೂರು ತಿಂಗಳಿನಿಂದ ಕೊಡಗು ಜಿಲ್ಲೆಗೆ ಸೇರಿದ ದುಂಡಳ್ಳಿ, ಕಾಜೂರು, ಮಾದರೆ, ಕಿರು ಬಿಳಹ, ದೊಡ್ಡಬಿಳಹ, ಅಪ್ಪಸೆಟ್ಟಳ್ಳಿ , ಚಿಕ್ಕಕೊಳತ್ತೂರು ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿವೆ. ರಾತ್ರಿ ವೇಳೆ ಗದ್ದೆ, ತೋಟಗಳಿಗೆ ನುಗ್ಗಿ ಫಸಲು ತಿಂದು ಹಾಕುತ್ತಿವೆ.
ಈ ವ್ಯಾಪ್ತಿಯಲ್ಲಿ ಚಿಕ್ಕ ಪುಟ್ಟ ಅರಣ್ಯ ಪ್ರದೇಶವಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಓಡಿಸಲು ಮುಂದಾದರೆ ಅವು ಮತ್ತೊಂದು ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೀಡು ಬಿಡುತ್ತಿವೆ. ಇದು ರೈತರು, ಅರಣ್ಯ ಇಲಾಖೆಗೆ ತಲೆ ನೋವಾಗಿದೆ. ಮೂರು ದಿನದ ಹಿಂದೆ ಮರಿಯಾನೆ ಸೇರಿದಂತೆ 6 ಕಾಡಾನೆಗಳ ಹಿಂಡು ಜಿಲ್ಲೆಯ ಗಡಿಭಾಗದಲ್ಲಿರುವ ಚೆನ್ನಾಪುರ ಗ್ರಾಮದ ಪುಟ್ಟ ಅರಣ್ಯ ದಲ್ಲಿ ಬೀಡು ಬಿಟ್ಟಿದ್ದು ರಾತ್ರಿ ವೇಳೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸಂಚರಿಸಿ ಬೆಳೆಗಳನ್ನು ಧ್ವಂಸಗೊಳಿಸುತ್ತಿದೆ.
ಭಾನುವಾರ ರಾತ್ರಿ ಚೆನ್ನಾಪುರ ಅರಣ್ಯದಿಂದ ಬಂದ ಕಾಡಾನೆಗಳು ಕಿರು ಬಿಳಹ ಗ್ರಾಮದ ರೈತ ಸುನಿಲ್ ಎಂಬುವರ ಗದ್ದೆಗೆ ನುಗ್ಗಿ ಫಸಲಿಗೆ ಬಂದಿದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು ಧ್ವಂಸಗೊಳಿಸಿವೆ. ತೋಟದಲ್ಲಿ ಕಾಫಿ, ಅಡಕೆ ಗಿಡಗಳನ್ನು ಮುರಿದು ಹಾಕಿವೆ. ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು ಪರಿಹಾರ ನೀಡುವಂತೆ ಬೆಳೆಗಾರ ಸುನೀಲ್ ಶನಿವಾರಸಂತೆ ಅರಣ್ಯ ಇಲಾಖೆಗೆ ಮನವಿ ನೀಡಿದ್ದಾರೆ.