ಕಿರು-ತೆರೆ ವೃತ್ತಿ ಬದುಕಿನ ಸವಾಲುಗಳು

ಸದಾ ದುಷ್ಟ ಪಾತ್ರಗಳಲ್ಲೇ ಕಾಣಿಸಿಕೊಳ್ಳುವುದರಿಂದ ಮದುವೆಯಾಗದೇ ಉಳಿದ ಹೆಣ್ಣು ಮಕ್ಕಳು ಈ ಉದ್ಯಮದಲ್ಲಿದ್ದಾರೆ ಗೊತ್ತೆ!

ಅಂತಾರಾಷ್ಟ್ರೀಯ ಮಹಿಳಾ ದಿನದ ವಸ್ತುವಾದ ‘ಬ್ಯಾಲೆನ್ಸ್ ಫಾರ್ ಬೆಟರ್’ನ ಬಗೆಗಿನ ಈ ಸರಣಿಯಲ್ಲಿ ಮುಂದುವರಿದ ಲೇಖನವಾಗಿ ತೆರೆಯ ಮೇಲಿನ ನಟನೆ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಸಾಧಿಸುವ ದಿಸೆಯಲ್ಲಿ ಇಂದಿನ ಹೆಣ್ಣು ಮಕ್ಕಳು ಎದುರಿಸುವ ಸವಾಲುಗಳನ್ನು ನೋಡೋಣ. ಈ ರಂಗದ ಬಗೆಗಿನ ಅರಿವಿನ ಕೊರತೆ ಒಂದು ಕಾರಣವಾದರೆ, ಈ ರಂಗದ ಬಗೆಗಿನ ಊಹಾಪೋಹಗಳು ಮತ್ತೊಂದು ಕಾರಣ. ಇವುಗಳ ಪರಿಣಾಮವನ್ನು ಇಲ್ಲಿ ನಟಿಸುವ ಹೆಣ್ಣು ಮಕ್ಕಳು ಎಲ್ಲರೂ ಎನ್ನಲಾಗದಿದ್ದರೂ, ಬಹುತೇಕ ಹೆಣ್ಣು ಮಕ್ಕಳು ಎದುರಿಸುತ್ತಾರೆ.

ಇಲ್ಲಿ ತಡರಾತ್ರಿಯ ಚಿತ್ರೀಕರಣಗಳು ಅಂದರೆ ಚಿತ್ರೀಕರಣ ಪ್ರಾರಂಭವಾಗುವುದೇ ಸಂಜೆ ಕತ್ತಲಾದ ಮೇಲೆ, ಬೆಳಗಿನ ಜಾವದ ಚಿತ್ರೀಕರಣಗಳು, ಬೇರೆ ಊರಿಗೆ ಹೋಗಿ ಅಲ್ಲಿಯೇ ಉಳಿದುಕೊಂಡು ಮಾಡುವ ಔಟ್​ಡೋರ್ ಚಿತ್ರೀಕರಣಗಳು ಎಲ್ಲವೂ ಇರುತ್ತವೆ. ದಿನನಿತ್ಯದ ಚಿತ್ರೀಕರಣದಲ್ಲೂ ಇಂತಿಷ್ಟು ಗಂಟೆಗೇ ಮುಗಿಯುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಇದು ಸಂಸಾರಸ್ಥ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಗಳಲ್ಲೊಂದು. ಮನೆಯವರಿಗೆ ಆಕೆ ಮಾಡುವ ಕೆಲಸದ ಅರಿವಿದ್ದರೆ ಪರವಾಗಿಲ್ಲ. ಆದರೆ ಎಷ್ಟೋ ಬಾರಿ ಗಂಡ ಅತ್ತೆ ಮಾವ ಎಲ್ಲ ‘ಏನು ನಿಂತಲ್ಲೇ ನಿಂತು ಒಂದಿಷ್ಟು ಮಾತು ಗಳುಹಿ ಬರುವುದಕ್ಕೆ ಇಷ್ಟು ಹೊತ್ತೇ?’ ಎಂದು ಕೇಳುತ್ತಾರೆ. ಇಪ್ಪತ್ತೆರಡು ನಿಮಿಷಗಳ ಒಂದು ಕಂತಿಗೆ ಸುಮಾರು ಹತ್ತರಿಂದ ಹನ್ನೆರಡು ಗಂಟೆಗಳಷ್ಟು ಕೇವಲ ಚಿತ್ರೀಕರಣದ ಕೆಲಸವಿರುತ್ತದೆ. ಇನ್ನು ಎಡಿಟಿಂಗ್, ವಾಹಿನಿ ಕಂತನ್ನು ನೋಡಿ ಒಪ್ಪುವುದು, ಡಬ್ಬಿಂಗ್ ಮಾಡಬೇಕಾದ ಧಾರಾವಾಹಿಗಳಾದರೆ ಆಯಾ ಕಂತಿನ ಡಬ್ಬಿಂಗ್​ಗೆ ಬೇಕಾಗುವ ಸಮಯ ಮೊದಲಾದ ವಿಧಾನಗಳ ಲೆಕ್ಕ ಇಟ್ಟಿಲ್ಲ! ಇದು ಈ ವೃತ್ತಿಯ ಅಂದಾಜಿಲ್ಲದವರಿಗೆ ತಿಳಿಯುವುದಿಲ್ಲ. ಯಾವುದೇ ವಿಷಯವೂ ಹಾಗೆಯೇ ಅಲ್ಲವೇ? ನೀರಿಗಿಳಿದಾಗಲೇ ಆಳ ತಿಳಿಯುವುದು. ಈ ಅಸ್ತವ್ಯಸ್ತ ಸಮಯಕ್ಕೆ ಹೆಣ್ಣು ಮಕ್ಕಳು ಮನೆಯಲ್ಲಿ ಬಹಳಷ್ಟು ಪ್ರಶ್ನೆಗಳನ್ನೆ ದುರಿಸಬೇಕಾಗುತ್ತದೆ. ಅದರಲ್ಲೂ ಮನೆಯಲ್ಲಿ ಮಗುವಿಗೋ, ಯಾರಾದರೂ ಹಿರಿಯರಿಗೋ ಅನಾರೋಗ್ಯವಾಗುವುದು, ಮಕ್ಕಳ ಎಕ್ಸಾಮುಗಳು ಇಂಥ ಸಂದರ್ಭಗಳಲ್ಲಿ ಎಲ್ಲಾ ಹೊರಗೆ ದುಡಿಯುವ ಹೆಣ್ಣು ಮಕ್ಕಳಂತೆ ಇಲ್ಲಿಯೂ ನಟಿಯರು ಒಂದು ವಿವರಿಸಲಾಗದ ತಪ್ಪಿತಸ್ಥ ಭಾವನೆಯಲ್ಲಿ ನರಳುತ್ತಾರೆ. ಈ ತಪ್ಪಿತಸ್ಥ ಭಾವನೆ ಮನೆಯ ಸದಸ್ಯರು ಪೂರ್ಣ ಸಹಕಾರ ಬೆಂಬಲ ಕೊಟ್ಟಿದ್ದರೂ ಹೆಣ್ಣು ಮಕ್ಕಳಿಗೆ ಹೋಗುವುದಿಲ್ಲ ಇನ್ನು ಆ ಸಹಕಾರ ಇಲ್ಲದಿದ್ದರಂತೂ ತನ್ನದೇ ತಪ್ಪಿತಸ್ಥ ಭಾವನೆಯ ಜತೆ ಮನೆಯವರ ಮುನಿಸು, ಮಾತುಗಳನ್ನು ಎದುರಿಸಬೇಕಾಗುತ್ತದೆ.

ಇನ್ನೊಂದು ವಿಚಿತ್ರ ಸಮಸ್ಯೆ. ಇದು ನಟಿಯರಿಗೆ ಮಾತ್ರ ಎದುರಾಗುವ ಸಮಸ್ಯೆ. ತೆರೆಯ ಮೇಲೆ ನೀವು ಖಳ ಪಾತ್ರಗಳನ್ನು ಅಂದರೆ ಕೆಟ್ಟವರ ಪಾತ್ರಗಳನ್ನು ಮಾಡುತ್ತಿದ್ದರೆ ಜನ ನಿಮ್ಮನ್ನಷ್ಟೇ ಅಲ್ಲ ನಿಮ್ಮ ಗಂಡ, ಅತ್ತೆ, ಮಾವ ಕೊನೆಗೆ ನಿಮ್ಮ ಮಕ್ಕಳನ್ನೂ ಬೇರೆಯ ರೀತಿಯಲ್ಲಿ ನೋಡುತ್ತಾರೆ. ದುಷ್ಟ ಪಾತ್ರದಲ್ಲಿ ನಟಿಸುವ ಗೆಳತಿಯೊಬ್ಬಳ ಶಾಲೆಗೆ ಹೋಗುವ ಪುಟ್ಟ ಮಗುವಿಗೆ ಆ ಶಾಲೆಯ ಕೆಲಸಗಾರರೊಬ್ಬರು (ಪಾತ್ರವೊಂದರ ಹೆಸರು ಸೂಚಿಸಿ) ‘ನಿಮ್ಮಮ್ಮನಿಗೆ ಹೇಳು ಅವರಿಗೆ ವಿಷ ಹಾಕಬಾರದಂತೆ ಅಂತ’ ಎಂದು ಹೇಳಿಕೊಟ್ಟು ಕಳಿಸಿದ್ದರು! ಯೋಚಿಸಿ, ಮಗುವಿನ ಮನಸ್ಸಿನ ಮೇಲೆ ಅದು ಯಾವ ಪರಿಣಾಮವನ್ನು ಬೀರಿರಬಹುದು?

ಸದಾ ತೆರೆಯ ಮೇಲೆ ದುಷ್ಟ ಪಾತ್ರಗಳಲ್ಲೇ ಕಾಣಿಸಿಕೊಳ್ಳುವ ಕಾರಣ ಮದುವೆಯಾಗದೇ ಉಳಿದ ಹೆಣ್ಣು ಮಕ್ಕಳು ಈ ಉದ್ಯಮದಲ್ಲಿದ್ದಾರೆಂದರೆ ನೀವು ನಂಬಲೇಬೇಕು! ಹೊರ ಹೋದಾಗಲೆಲ್ಲ ತೆರೆಯ ಮೇಲಿನ ದುಷ್ಟತನಕ್ಕೆ ಒರಟು ಮಾತುಗಳನ್ನು ಕೇಳಬೇಕಾದಾಗ ಆ ನಟಿಗೆ, ಆಕೆಯ ಹತ್ತಿರದವರಿಗೆ ಎಂಥಾ ಮುಜುಗರದ ವಿಷಯವಾಗಿರಬಹುದು? ಈ ಕಾರಣಕ್ಕೇ ಮನೆಯಲ್ಲಿ ಜಗಳಗಳಾಗಿರುವುದನ್ನು ನಾನು ಬಲ್ಲೆ.

ಇನ್ನು ಈ ಕೆಲಸದಲ್ಲಿ ಗಂಡನ ಪಾತ್ರಧಾರಿಯೊಬ್ಬರಿರುತ್ತಾರೆ, ಅವರೊಡನೆ ಸನಿಹದಿಂದ ವರ್ತಿಸಬೇಕಾದ ದೃಶ್ಯಗಳಿರುತ್ತವೆ. ಉದಾಹರಣೆಗೆ ಗಂಡನ ಎದೆಯ ಮೇಲೆ ತಲೆಯಿಟ್ಟು ಅಳುವ ದೃಶ್ಯ, ಗಂಡ ಹೆಂಡತಿಯ ತೋಳು ಬಳಸಿ ನಿಲ್ಲಬೇಕಾದ ದೃಶ್ಯ ಮೊದಲಾದವು. ಚಿತ್ರೀಕರಣದ ಸಮಯದಲ್ಲಿ ಇವು ತೀರಾ ನಿರ್ಲಿಪ್ತವಾಗಿ ಮತ್ತು ಸಾಧ್ಯವಾದಷ್ಟೂ ಕಡಿಮೆ ಸ್ಪರ್ಶವನ್ನೊಳಗೊಂಡಿರುತ್ತವೆ. ಏಕೆಂದರೆ ತನ್ನ ಆಪ್ತ ವಲಯವಲ್ಲದೇ ಬೇರೆ ಪುರುಷರೊಂದಿಗಿನ ಇಂಥ ನಟನೆ ಹೆಣ್ಣು ಮಕ್ಕಳಷ್ಟೇ ಹಿಂಸೆ ಸಭ್ಯ ಗಂಡಸರಿಗೂ ಆಗುತ್ತದೆ. ಆದರೆ ಇಂಥ ದೃಶ್ಯಗಳು ಮನೆಗಳಲ್ಲಿ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಅನುಮಾನಗಳನ್ನು, ಕಂದಕಗಳನ್ನು ಸೃಷ್ಟಿಸುತ್ತವೆ. ಈ ಕಂದಕಗಳು ಹೆಣ್ಣು ಮಕ್ಕಳನ್ನು ಕಟ ಕಟೆಯಲ್ಲಿ ನಿಲ್ಲಿಸಿ ಉತ್ತರ ಕೇಳುತ್ತವೆ. ‘ಅದು ನನ್ನ ವೃತ್ತಿ’ ಎನ್ನುವ ಉತ್ತರವನ್ನು ಬಹು ಮಂದಿ ಅರ್ಥ ಮಾಡಿಕೊಳ್ಳುವುದಿಲ್ಲ.

ಧಾರಾವಾಹಿ ನಟ ನಟಿಯರಿಗೆ ನಮ್ಮಲ್ಲಿ ಬಹಳ ಹೆಚ್ಚು ಜನಪ್ರಿಯತೆ ಸಿಗುತ್ತದೆ. ಹೋದ ಬಂದ ಕಡೆಯೆಲ್ಲಾ ಜನ ಗುರುತಿಸುತ್ತಾರೆ, ಮಾತಾಡಿಸುತ್ತಾರೆ. ಪ್ರಾಮುಖ್ಯ ಕೊಡುತ್ತಾರೆ. ಇದು ಪತಿಯಲ್ಲಿ ಹುಟ್ಟಿಸುವ ಅಸೂಯೆ ಅಥವಾ ಕಿರಿಕಿರಿ ವಿವಾಹಿತ ಹೆಣ್ಣು ಮಕ್ಕಳು ಎದುರಿಸುವ ಮತ್ತೊಂದು ಸವಾಲು. ಹೆಂಡತಿಯಾದವಳು ಗಂಡನಾದವನಿಗಿಂತ ಕಡಿಮೆಯಾಗಿರಬೇಕೆಂಬುದು ಶತಮಾನಗಳಿಂದ ನಮ್ಮ ವಂಶವಾಹಿನಿಗಳೊಳಗೆ ತುರುಕಲ್ಪಟ್ಟ ಅಂಶ. ಅದನ್ನು ಮೀರಿ ಹೆಂಡತಿಗೆ ಸಿಗುವ ಈ ಪ್ರಾಶಸ್ತ್ಯವನ್ನು ಸಹಿಸುವುದು ಎಲ್ಲಾ ಗಂಡಸರಿಂದ ಸಾಧ್ಯವಿಲ್ಲ.

ಅರಿವು, ಪ್ರಪಂಚಜ್ಞಾನ, ನಂಬಿಕೆ ಮತ್ತು ಜತೆಗಾತಿಯ ಬಗೆಗೆ ಧನಾತ್ಮಕ ಧೋರಣೆ ಇಲ್ಲಿ ದುಡಿಯುವ ಹೆಣ್ಣು ಮಕ್ಕಳ ಬದುಕನ್ನು ಹೆಚ್ಚು ಸಹನೀಯವಾಗಿಸಬಹುದು. ತಪ್ಪು ಸರಿಯ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ನನಗೆ ನನ್ನ ಜಾಗದಲ್ಲಿ ನಿಂತು ಸರಿಯೆನಿಸಿದ್ದು ಮತ್ತೊಬ್ಬರಿಗೆ ಅವರು ನಿಂತ ಜಾಗದಿಂದ ತಪ್ಪೆನಿಸಬಹುದು. ಆದರೆ ಸುತ್ತಮುತ್ತಲಿನ ಪ್ರಪಂಚ ನಮ್ಮ ದೃಷ್ಟಿಯನ್ನು ವಿಶಾಲಗೊಳಿಸಲಿ. ನಮ್ಮನ್ನು ನಂಬಿದ ಜೀವಗಳನ್ನು ನಂಬುವ ಅಭ್ಯಾಸ ಬೆಳೆಸಲಿ.

ಈ ದಿಸೆಯಲ್ಲಿ ನಮ್ಮ ಸಮಾಜ ಸಾಗುತ್ತಿದೆ ಎಂಬುದು ನಮ್ಮ ನಾಗರಿಕ ಸಮಾಜದ ಬಹಳ ಹೆಮ್ಮೆಯ ಅಂಶ. ಬರಲಿರುವ ಕಾಲ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಮನೆಯ ಒಳಗಿನ ಮತ್ತು ಹೊರಗಿನ ಜವಾಬ್ದಾರಿಗಳನ್ನು ಸಮ ಸಮವಾಗಿ ಹಂಚಿಕೊಳ್ಳುವುದನ್ನು ಕಲಿಸುತ್ತದೆ, ಮೇಲೆ ಹೇಳಿದ ಅಂಶಗಳನ್ನು ಆಕೆಯ ದೃಷ್ಟಿಕೋನದಿಂದ ನೋಡುವುದನ್ನು ಕಲಿಸುತ್ತದೆ. ಮನರಂಜನಾ ಮಾಧ್ಯಮದಲ್ಲಿ ದುಡಿಯುವ ಹೆಣ್ಣು ಮಕ್ಕಳ ಬದುಕು ಹೆಚ್ಚು ವೃತ್ತಿಪರವಾದ ಸವಾಲುಗಳಿಗೆ ತೆರೆದುಕೊಳ್ಳುತ್ತದೆ.