Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕಿರುತೆರೆಯ ಅನುಬಂಧ

Thursday, 02.02.2017, 4:03 AM       No Comments

‘ಆಟಗಾರ’ ಬಳಿಕ ನಟಿ ಅನು ಪ್ರಭಾಕರ್ ಮುಖರ್ಜಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಅವರಿಗೆ ಸಿನಿಮಾಗಳ ಅವಕಾಶಗಳು ಇಲ್ಲವೆಂದಲ್ಲ. ಪಾತ್ರಗಳನ್ನು ಅಳೆದು ತೂಗಿ ಒಪ್ಪಿಕೊಳ್ಳುವ ಗುಣ ಅವರದ್ದಂತೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆ. 6ರಿಂದ ಪ್ರಸಾರವಾಗಲಿರುವ ‘ತ್ರಿವೇಣಿ ಸಂಗಮ’ ಧಾರಾವಾಹಿ ಮೂಲಕ ಅವರು ಕಿರುತರೆಗೂ ಕಾಲಿಟ್ಟಿದ್ದಾರೆ. ಜತೆಗೆ ನಟ ರಘು ಮುಖರ್ಜಿ ಅವರೊಂದಿಗೆ ವಿವಾಹವಾದ ಮೇಲೆ ಬದುಕಿನಲ್ಲಿ ಮತ್ತಷ್ಟು ಸಂತೋಷದಿಂದಿದ್ದಾರೆ. ಈ ಎಲ್ಲವುಗಳ ಕುರಿತು ನಮಸ್ತೆ ಬೆಂಗಳೂರು ಜತೆ ಅವರು ಮಾತನಾಡಿದ್ದಾರೆ’

  •  ಹಿರಿತೆರೆಯಲ್ಲಿ ಬಿಜಿ ಇದ್ದ ನೀವು ಈಗ ಕಿರುತೆರೆಗೂ ಪಯಣ ಬೆಳೆಸಿದ್ದೀರಿ?

ಎಸ್. ಮಹೇಂದರ್ ಅವರ ‘ಒನ್ಸ್​ಮೋರ್ ಕೌರವ’ದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಮೇಲೆ ‘ತ್ರಿವೇಣಿ ಸಂಗಮ’ ಅಫರ್ ಬಂತು. ಮುಖ್ಯವಾಗಿ ಕಥೆ ನನಗೆ ಬಹಳ ಇಷ್ಟವಾಯಿತು. ನನ್ನ ಪಾತ್ರ ಸಹ ಚೆನ್ನಾಗಿದೆ. ಮುಖ್ಯಪಾತ್ರದಲ್ಲಿ ರಾಜೇಶ್ ನಟರಂಗ ಇದ್ದಾರೆ. ಈ ಮೊದಲೇ ಅವರೊಂದಿಗೆ ಕೆಲಸ ಮಾಡಿದ್ದೇನೆ. ಉತ್ತಮ ತಂಡ ಇದಾಗಿರುವುದರಿಂದ ನಟಿಸುವುದಿಲ್ಲ ಎನ್ನಲು ಸಾಧ್ಯವಾಗಲಿಲ್ಲ. ನೇರವಂತಿಕೆಯ ಪಾತ್ರ ನನ್ನದು.

  • ನಟನೆ ಮತ್ತು ಕುಟುಂಬ ಎರಡನ್ನೂ ಹೇಗೆ ನಿಭಾಯಿಸುತ್ತೀರಾ?

ಇದು ಕೆಲಸವಷ್ಟೇ. ಎಲ್ಲರಿಗೂ ಅವರದ್ದೇ ಆದ ಕುಟುಂಬ ಇರುತ್ತದೆ. ಅದೇ ಥರ ನನಗೂ ಕುಟುಂಬ ಇದೆ. ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ನಾನು ಸೆಟ್​ಗೆ ಬರುತ್ತೇನೆ. ನನ್ನ ಪತಿ ಕೂಡ ಇದೇ ವೃತ್ತಿಯಲ್ಲಿದ್ದಾರೆ. ಕೆಲಸ ಮುಗಿಸಿ ಮನೆಗೆ ಹೋದಮೇಲೆ ಎಲ್ಲ ಹೆಣ್ಣುಮಕ್ಕಳ ಜೀವನ ಹೇಗೆ ನಡೆಯುತ್ತದೋ ಅಷ್ಟೇ ನಾರ್ಮಲ್ ಆಗಿ ನನ್ನ ಬದುಕು ಸಹ ನಡೆಯುತ್ತದೆ. ವಾರಪೂರ್ತಿ ಕೆಲಸ ಮಾಡುವ ಜಾಯಮಾನ ನನ್ನದಲ್ಲ. ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡುವ ರೀತಿ ನಮ್ಮ ವೃತ್ತಿ ಇರುವುದಿಲ್ಲ. 10 ರಿಂದ 15 ದಿನಗಳು ಮಾತ್ರ ನಾನು ಶೂಟಿಂಗ್​ನಲ್ಲಿ ಇರುತ್ತೇನೆ.

  • ಹೊಸ ಸಿನಿಮಾಗಳ ಅವಕಾಶ ಬಂದರೆ ಒಪ್ಪಿಕೊಳ್ಳುತ್ತೀರಾ?

ನನಗೆ ಅವಕಾಶಗಳು ಬರುವುದು ಯಾವತ್ತೂ ನಿಂತಿಲ್ಲ. ನನ್ನ ಮನಸ್ಸಿಗೆ ಖುಷಿ ನೀಡುವಂತಹ ಕಥೆ, ಪಾತ್ರ ಸಿಕ್ಕಾಗ ಖಂಡಿತ ನಟಿಸುತ್ತೇನೆ. ಇಡೀ ದಿನ ಕೆಲಸ ಮಾಡಿ ಮನೆಗೆ ಹೋದಾಗ ತೃಪ್ತಿ ಇರಬೇಕು. ನನ್ನ ಕುಟುಂಬದ ಜತೆ ಇರಬೇಕಾದ ಸಮಯವನ್ನು ನಟನೆಗೆ ಮೀಸಲಿಟ್ಟಾಗ ಅದು ನನಗೆ ಖುಷಿ ನೀಡಬೇಕು. ಆ ರೀತಿ ಇದ್ದಾಗ, ಸಿನಿಮಾ ಅಥವಾ ಧಾರಾವಾಹಿ ಯಾವುದರಲ್ಲಿಯಾದರೂ ನಾನು ನಟಿಸುತ್ತೇನೆ. ಚಿತ್ರರಂಗಕ್ಕೆ ಬಂದು 17 ವರ್ಷ ಆಯ್ತು. ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ನನಗೂ ಇದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಭಾಷೆಯಿಂದಲೂ ಅವಕಾಶಗಳು ಬರುತ್ತಲೇ ಇವೆ.

  • ನಿಮ್ಮ ಮತ್ತು ರಘು ಮುಖರ್ಜಿ ಮಧ್ಯೆ ಪರಿಚಯ ಶುರುವಾಗಿದ್ದು ಹೇಗೆ?

ಮೊದಲಿನಿಂದಲೂ ನಮ್ಮಿಬ್ಬರ ಮಧ್ಯೆ ಸ್ನೇಹವಿತ್ತು. ಬಿಡುವಿದ್ದಾಗ ಭೇಟಿಯಾಗುತ್ತಿದ್ದೆವು. ಅವರು ತುಂಬ ಮೌನಿಯಾದರೆ, ನಾನು ಸಿಕ್ಕಾಪಟ್ಟೆ ಮಾತನಾಡುತ್ತೇನೆ. ಹಾಗಾಗಿ ನಮ್ಮ ನಡುವಿನ ಆತ್ಮೀಯತೆ ಹೆಚ್ಚಾಯಿತು. ಇಬ್ಬರ ಬದುಕಲ್ಲೂ ಒಂದಷ್ಟು ಕಷ್ಟಗಳು ಇದ್ದವು. ನೀವೇಕೆ ಮದುವೆಯಾಗಬಾರದು ಎಂಬ ಸಲಹೆಯನ್ನು ಅಮ್ಮನೇ ನೀಡಿದರು. ತುಂಬ ಸಮಯದ ನಂತರ ನಮ್ಮ ನಿರ್ಧಾರವನ್ನು ಪಾಲಕರಿಗೆ ತಿಳಿಸಿದೆವು. ನಾನಂತೂ ತುಂಬ ಖುಷಿಯಾಗಿದ್ದೇನೆ. ಸಂತೋಷವಾಗಿ ಇರಬೇಕು ಎಂಬುದು ಪ್ರತಿಯೊಬ್ಬರ ಹಕ್ಕು. ರಘು ಜತೆ ಜೀವನ ಶುರುಮಾಡಿದ ಮೇಲೆ ಬದುಕಿನಲ್ಲಿ ಏನು ಬೇಕೋ ಅವೆಲ್ಲ ಫುಲ್​ಫಿಲ್ ಆಗಿವೆ. ನಮ್ಮಿಬ್ಬರ ವೃತ್ತಿ ಒಂದೇ ಆಗಿರುವುದರಿಂದ ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳುತ್ತಾರೆ.

  •  ‘ತ್ರಿವೇಣಿ ಸಂಗಮ’ ಸಂಗೀತ ಪ್ರಧಾನ ಧಾರಾವಾಹಿ. ಹಾಗಾಗಿ, ಈ ಪಾತ್ರಕ್ಕೆ ತಯಾರಿ ಹೇಗೆ ನಡೆಸಿದ್ದೀರಿ?

ನಾನು ಇಲ್ಲಿ ಗಾಯಕಿಯಲ್ಲ, ಆದರೂ ಸಂಗೀತ ಕಲಿತಿರುತ್ತೇನೆ. ಈ ಧಾರಾವಾಹಿಯಲ್ಲಿ ನಾನು ವೀಣೆ ನುಡಿಸುತ್ತೇನೆ. ಸಂಗೀತ ನಿರ್ದೇಶಕರ ಸಿನಿಮಾಗಳಲ್ಲಿ ವೀಣೆ ನುಡಿಸುವ ಕೆಲಸ ಮಾಡುತ್ತಿರುತ್ತೇನೆ.

ಡಾ. ವಿಷ್ಣುವರ್ಧನ್ ಅವರ ‘ಜಮೀನ್ದಾರ್ರು’ ಚಿತ್ರದಲ್ಲಿ ವೀಣೆ ನುಡಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇಂಟರ್​ನೆಟ್ ನೋಡಿ, ವೀಣೆ ನುಡಿಸುವ ಶೈಲಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ನಮ್ಮ ಪಕ್ಕದ ಮನೆಯಲ್ಲಿ ನಡೆಯುವಂತಹ ಕಥೆ ಇದು.

  •  ನೀವು ಮತ್ತು ರಘು ಒಟ್ಟಿಗೆ ನಟಿಸುವ ಸಾಧ್ಯತೆ ಇದೆಯೇ?

ಹ್ಹಹ್ಹಹ್ಹ.. ಈ ಪ್ರಶ್ನೆ ಸುಮಾರು ಬಾರಿ ಎದುರಾಗಿದೆ. ಅವರೊಬ್ಬ ಅದ್ಭುತ ನಟ. ರಘು ನಟಿಸುತ್ತಿದ್ದಾಗ ಅದನ್ನು ನೋಡುವುದೇ ಒಂದು ಖುಷಿ, ಹೆಮ್ಮೆ. ಪಾತ್ರಕ್ಕೆ ಎಷ್ಟು ಶ್ರಮ ಬೇಕೋ ಅಷ್ಟನ್ನೂ ನೀಡಿ ಅಭಿನಯಿಸುವ ಮತ್ತು ಪಾತ್ರದ ಆಳಕ್ಕಿಳಿದು ಕೆಲಸ ಮಾಡುವ ಅವರ ಕಾರ್ಯವೈಖರಿ ಇಷ್ಟ. ಖಂಡಿತ ನಮಗೆ ಒಟ್ಟಿಗೆ ನಟಿಸಬೇಕೆಂಬ ಬಯಕೆ ಇದೆ. ಉತ್ತಮವಾದ ಕಥೆ, ಪಾತ್ರ ಸಿಕ್ಕರೆ ನಟಿಸುತ್ತೇವೆ.

  • ನಿಮ್ಮ ಫಿಟ್​ನೆಸ್​ನ ಗುಟ್ಟೇನು?

ಮೊದಲಿನಿಂದಲೂ ನಾನು ಫಿಟ್​ನೆಸ್​ಗೆ ಹೆಚ್ಚು ಮಹತ್ವ ನೀಡುತ್ತೇನೆ. ನಿತ್ಯ ಜಿಮ್ ವಾಕಿಂಗ್ ಮಾಡುತ್ತಲೇ ಇರುತ್ತೇನೆ. ಊಟದಲ್ಲಿ ಸಾಕಷ್ಟು ಕಟ್ಟುನಿಟ್ಟು ಇದ್ದರೂ, ಇಷ್ಟದ ಆಹಾರವನ್ನು ತಿನ್ನದೇ ಇರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಪತಿ ರಘು ಅವರಂತೂ ಫಿಟ್​ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹಾಗಾಗಿ, ದೈಹಿಕ ಕಾಳಜಿ ಬಗ್ಗೆ ಇನ್ನೂ ಹೆಚ್ಚಿನ ಗಮನ ನೀಡುತ್ತೇವೆ. ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡರೆ ನಮಗೇ ಖುಷಿಯಾಗುವಂತಿರಬೇಕು.

Leave a Reply

Your email address will not be published. Required fields are marked *

Back To Top