ಕಿಡ್ನ್ಯಾಪ್​ ಆಗಿದ್ದ ಬಾಲಕ ಸಿನಿಮೀಯ ಶೈಲಿಯಲ್ಲಿ ರಕ್ಷಣೆ

ಬೆಂಗಳೂರು: ಆಟೋ ಚಾಲಕನಿಂದ ಅಪಹರಣಕ್ಕೊಳಗಾಗಿದ್ದ ಮೂರು ವರ್ಷದ ಬಾಲಕನನ್ನು ಸಿಸಿ ಕ್ಯಾಮರಾದ ಸುಳಿವು ಆಧರಿಸಿ ಗಿರಿನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ್ದಾರೆ.

ಡಿಸೋಜಾನಗರದ ನಿವಾಸಿಗಳಾದ ಕಲಬುರಗಿ ಮೂಲದ ಚಿನ್ನಪ್ಪ, ದೇವಮ್ಮ ದಂಪತಿ ಪುತ್ರ ಭಾಗೇಶ್ ಅಪಹರಣಕ್ಕೊಳಗಾದ ಬಾಲಕ. ಆರೋಪಿ ಆಟೋ ಚಾಲಕ ಮದ್ದೂರು ಮೂಲದ ಸುರೇಶ್ ತಲೆಮರೆಸಿಕೊಂಡಿದ್ದಾನೆ. ಚಿನ್ನಪ್ಪ ನಗರದಲ್ಲಿ ಗಾರೆ ಕೆಲಸಗಾರ. ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಭಾಗೇಶ್ ಕೊನೆಯವನು. ಮಾ.14ರಂದು ಚೆನ್ನಪ್ಪ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆ 11 ಗಂಟೆಗೆ ಅಣ್ಣ ಮೌನೇಶ್ ಜತೆ ಭಾಗೇಶ್ ಮನೆ ಸಮೀಪವಿದ್ದ ಸ್ಕೈಲೈನ್ ಅಪಾರ್ಟ್​ವೆುಂಟ್ ಬಳಿ ಆಟವಾಡುತ್ತಿದ್ದ. ಆ ಸಂದರ್ಭದಲ್ಲಿ ಆಟೋದಲ್ಲಿ ಬಂದ ಆರೋಪಿ ಸುರೇಶ್ ಮಕ್ಕಳ ಬಳಿ ಬಂದು, ಜ್ಯೂಸ್ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಮೌನೇಶ್ ಕೈಗೆ 20 ರೂ. ನೀಡಿ ಸಮೀಪದಲ್ಲಿರುವ ಜ್ಯೂಸ್ ಅಂಗಡಿಯಿಂದ ಜ್ಯೂಸ್ ತರುವಂತೆ ಸೂಚಿಸಿದ್ದ. ಅದರಂತೆ ಮೌನೇಶ್ ಜ್ಯೂಸ್ ತರಲು ಹೋಗುತ್ತಿದ್ದಾಗ, ಭಾಗೇಶ್​ನನ್ನು ಬಲವಂತವಾಗಿ ತನ್ನ ಆಟೋದಲ್ಲಿ ಅಪಹರಿಸಿದ್ದಾನೆ. ಇದನ್ನು ಗಮನಿಸಿದ ಮೌನೇಶ್, ಸ್ವಲ್ಪ ದೂರದವರೆಗೆ ಓಡಿ ಆಟೋ ಹಿಂಬಾಲಿಸಿದ್ದ. ನಂತರ ಮೌನೇಶ್ ಮನೆಗೆ ಬಂದು ತಾಯಿ ಬಳಿ ನಡೆದ ಘಟನೆ ವಿವರಿಸಿದ್ದ. ಆತಂಕಗೊಂಡ ದೇವಮ್ಮ ಪತಿಗೆ ಮಾಹಿತಿ ನೀಡಿ ಠಾಣೆಗೆ ದೂರು ನೀಡಿದ್ದರು.

ಸುಳಿವು ನೀಡಿದ ಸಿಸಿಕ್ಯಾಮರಾ: ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಸ್ಪಷ್ಟವಾಗಿ ಆಟೋ ರಿಕ್ಷಾದ ಗುರುತು ಪತ್ತೆಯಾಗಿತ್ತು. ಆದರೆ, ಸ್ಥಳೀಯ ಮಹಿಳೆಯೊಬ್ಬರು ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ಮಹಿಳೆಯನ್ನು ಸಂರ್ಪಸಿದ ಪೊಲೀಸರು ಪ್ರಕರಣದ ಬಗ್ಗೆ ವಿಚಾರಿಸಿದಾಗ ಆಟೋರಿಕ್ಷಾ ಹೋದ ರಸ್ತೆಯ ಬಗ್ಗೆ ಮಾಹಿತಿ ನೀಡಿದ್ದರು.

ನಂತರ ರಿಕ್ಷಾ ಹೋದ ರಸ್ತೆಯ ಅಂಗಡಿ ಮುಂಗಟ್ಟುಗಳಲ್ಲಿ ಅಳವಡಿಸಿದ್ದ ಹಲವಾರು ಸಿಸಿ ಕ್ಯಾಮರಾ ಪರಿಶೀಲಿಸಿದಾಗ, ರಿಕ್ಷಾದ ನಂಬರ್ ಪತ್ತೆಯಾಗಿತ್ತು. ಈ ನಂಬರ್ ಮೂಲಕ ಆರೋಪಿಯ ಜಾಡು ಹಿಡಿದ ಪೊಲೀಸರು ಆತ ಮಂಡ್ಯದ ಮದ್ದೂರಿನಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಮಾ.17ರಂದು ರಾತ್ರಿ ಆರೋಪಿ ವಾಸಿಸುತ್ತಿದ್ದ ಮನೆಗೆ ದಾಳಿ ನಡೆಸಿದಾಗ ಆರೋಪಿಯ ಸ್ನೇಹಿತ ಸತೀಶ್ ಎಂಬಾತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಅದಾಗಲೇ ಆರೋಪಿ ಸುರೇಶ್ ಬಾಲಕನನ್ನು ಮಾರಾಟ ಮಾಡಿದ್ದ. ಸತೀಶ್ ನೀಡಿದ ಮಾಹಿತಿ ಮೇರೆಗೆ ಹಣ ನೀಡಿ ಮಗುವನ್ನು ದತ್ತು ಪಡೆದುಕೊಂಡ ದಂಪತಿಯನ್ನು ಸಂರ್ಪಸಿದ ಪೊಲೀಸರು ಬಾಲಕನನ್ನು ಪಡೆದುಕೊಂಡು ತಾಯಿ ಮಡಿಲು ಸೇರಿಸಿದ್ದಾರೆ.

1.50 ಲಕ್ಷ ರೂ.ಗೆ ಮಾರಾಟ

ಮಕ್ಕಳಿಲ್ಲದ ಬೆಂಗಳೂರು ಮೂಲದ ದಂಪತಿ ಮಗುವನ್ನು ದತ್ತು ಪಡೆಯಬೇಕೆಂದಿದ್ದರು. ಈ ವಿಚಾರವನ್ನು ಪರಿಚಿತರಿಗೂ ತಿಳಿಸಿದ್ದರು. ಪರಿಚಿತರ ಮೂಲಕ ದಂಪತಿಗೆ ಆರೋಪಿ ಸುರೇಶ್ ಪರಿಚಯವಾಗಿತ್ತು. 1.50 ಲಕ್ಷ ರೂ. ನೀಡಿದರೆ ಎರಡೂವರೆ ವರ್ಷದ ಬಾಲಕನನ್ನು ತಂದು ನಿಮಗೆ ಒಪ್ಪಿಸುತ್ತೇನೆ ಎಂದು ಹೇಳಿದ್ದ. ಅದರಂತೆ ದಂಪತಿ ಆರೋಪಿಗೆ ಹಣ ನೀಡಲು ಒಪ್ಪಿದ್ದರು. ಗಿರಿನಗರದ ಬಳಿ ಭಾಗೇಶ್ ಆಟವಾಡುತ್ತಿರುವುದನ್ನು ಗಮನಿಸಿದ್ದ ಆರೋಪಿ, ಆತನನ್ನು ಅಪಹರಿಸಿ ದಂಪತಿಗೆ ಒಪ್ಪಿಸಿ, 1.50 ಲಕ್ಷ ರೂ. ಪಡೆದು ಪರಾರಿಯಾಗಿದ್ದ.