ಪಿರಿಯಾಪಟ್ಟಣ: ಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ದುಷ್ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. .
ಪಟ್ಟಣದ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ಮಂಗಳವಾರ ನಡೆದ ಅಹಿತಕರ ಘಟನೆಯ ಹಿನ್ನೆಲೆ ಶಾಸಕ ಕೆ.ಮಹದೇವ್ ಶುಕ್ರವಾರ ಚರ್ಚ್ ಗೆ ಭೇಟಿ ನೀಡಿ ಪಾದ್ರಿ ಮತ್ತು ಕ್ರೈಸ್ತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಘಟನೆಯ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭಾಧ್ಯಕ್ಷರು ಸಹ ನನ್ನೊಂದಿಗೆ ಚರ್ಚೆ ನಡೆಸಿದರು. ಪರಿಸ್ಥಿತಿಯ ಸೂಕ್ಷ್ಮತೆಯ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ ಎಂದರು.
ಕಿಡಿಗೇಡಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದರು.
ತಾಲೂಕಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಘಟನೆ ಈವರೆಗೆನಡೆದಿಲ್ಲ. ಈ ಪ್ರಸಂಗವನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುವ ಸಂಚು ನಡೆಸುತ್ತಿರುವುದು ಸಲ್ಲದು ಎಂದರು.
ತಹಸಿಲ್ದಾರ್ ಕೆ.ಚಂದ್ರಮೌಳಿ, ತಾಪಂ ಇ ಒ ಕೃಷ್ಣಕುಮಾರ್, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಸದಸ್ಯ ಪಿ.ಸಿ.ಕೃಷ್ಣ, ಪುರಸಭೆ ಮುಖ್ಯಧಿಕಾರಿ ಮಹೇಂದ್ರ ಕುಮಾರ್, ಪೊಲೀಸ್ ಇನ್ಸ್‌ಪ್ಪೆಕ್ಟರ್ ಶ್ರೀಧರ, ಪಾದ್ರಿ ಜಾನ್ ಪೌಲ್, ಕ್ರೈಸ್ತ ಮುಖಂಡರಾದ ಜೋಸೆಫ್ ಒಲಿವರ, ರಾಜಣ್ಣ, ಪೌಲ್ ರಾಜ್, ರಾಣಿ ಅನ್ನಮ್ಮ, ಜೆಡಿಎಸ್ ಮುಖಂಡರಾದ ಎಸ್.ರಾಮು, ಜಿ.ಶಂಕರ್, ಡಿ.ಎ.ನಾಗೇಂದ್ರ ಇತರರು ಇದ್ದರು.