‘ಕಾಶ್ಮೀರ ಟು ಕನ್ಯಾಕುಮಾರಿ’ ಲಂಡನ್ ವ್ಯಕ್ತಿ ಪಾದಯಾತ್ರೆ!

ಕಾರವಾರ: ದೇಶದ ಸಂಸ್ಕೃತಿ-ಸಂಪ್ರದಾಯ ಅರಿಯಲು ಉತ್ಸುಕನಾಗಿರುವ ಬ್ರಿಟನ್ ಯುವಕನೊಬ್ಬ ಭಾರತ ದರ್ಶನ ಮಾಡಲು ಹೊರಟಿದ್ದಾನೆ. ಜಮ್ಮು, ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಆರಂಭಿಸಿರುವ ಯುವಕ ಗೋವಾ ಮೂಲಕ ಸೋಮವಾರ ಕಾರವಾರ ತಲುಪಿದ್ದು, ಕನ್ಯಾಕುಮಾರಿಯವರೆಗೂ ರಾಷ್ಟ್ರೀಯ ಹೆದ್ದಾರಿ ಮೂಲಕವೇ ಹೋಗುವ ಗುರಿ ಹೊಂದಿದ್ದಾರೆ.
ಲಂಡನ್ ನಗರದ 26 ವರ್ಷದ ಬ್ರೂಟೆಡ್ ಸ್ಕಾಟ್ ಆಗಸ್ಟ್ 2018ರ ಆಗಸ್ಟ್ 10 ರಂದು ಜಮ್ಮು ಕಾಶ್ಮೀರದ ಶ್ರೀನಗರದಿಂದ ಪಾದಯಾತ್ರೆ ಆರಂಭಿಸಿದ್ದು, ಈವರೆಗೆ 2800 ಕಿಮೀ ಕ್ರಮಿಸಿದ್ದಾರೆ. ನವದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಹೀಗೆ ವಿವಿಧ ರಾಜ್ಯಗಳನ್ನು ಸುತ್ತಿ ಈಗ ಕಾರವಾರ ತಲುಪಿದ್ದಾರೆ. ನಿತ್ಯ 25 ರಿಂದ 30 ಕಿಮೀ ಸಂಚರಿಸುವ ಸ್ಕಾಟ್ ಹೆದ್ದಾರಿ ಪಕ್ಕದ ಹೋಟೆಲ್​ಗಳಲ್ಲಿ ಊಟ ಮಾಡುತ್ತಾರೆ. ‘ಮೊದಲು ದಿನಕ್ಕೆ 800 ರೂ. ಸಾಕಾಗುತ್ತಿತ್ತು. ಕರಾವಳಿಗೆ ಬಂದ ನಂತದ ದಿನಕ್ಕೆ 1 ಸಾವಿರವರೆಗೂ ಖರ್ಚಾಗುತ್ತದೆ. ಕೆಲ ಬಾರಿ ಹೋಟೆಲ್​ಗಳಲ್ಲಿ ಇನ್ನೂ ಕೆಲ ಬಾರಿ ಮೈದಾನಗಳಲ್ಲೇ ಟೆಂಟ್ ಹಾಕಿ ವಾಸ್ತವ್ಯ ಮಾಡಬೇಕಾಗುತ್ತದೆ. ಫೆಬ್ರವರಿ ಅಂತ್ಯದೊಳಗೆ ಕನ್ಯಾಕುಮಾರಿ ತಲುಪಿ ನಂತರ ದೇಶಕ್ಕೆ ಮರಳುವ ಇಚ್ಛೆ ಹೊಂದಿದ್ದೇನೆ’ ಎನ್ನುತ್ತಾರೆ ಸ್ಕಾಟ್. ‘ಎಲ್ಲೆಡೆ ಸಂಸ್ಕೃತಿ, ಆಚಾರ ವಿಚಾರಗಳು ಆಹಾರ ಪದ್ಧತಿಗಳನ್ನು ತಿಳಿಯುವುದೇ ನನ್ನ ಉದ್ದೇಶ. ಈ ಹಿಂದೆ ಫ್ರಾನ್ಸ್ ದೇಶದಲ್ಲಿ ಅಂದಾಜು 1 ಸಾವಿರ ಕಿ.ಮೀ. ಪಾದಯಾತ್ರೆ ನಡೆಸಿದ್ದೆ. ಈಗ ಭಾರತದಲ್ಲಿ ನಡೆಯುತ್ತಿದ್ದೇನೆ. ಭಾರತ ತುಂಬಾ ಸುಂದರ ಹಾಗೂ ಅತ್ಯದ್ಭುತ ದೇಶ. ಆದರೆ, ಇಲ್ಲಿನ ಮೂರು ಅಂಶಗಳಿಂದ ನಾನು ಬೇಸರಗೊಂಡಿದ್ದೇನೆ. ಕಂಡಕಂಡಲ್ಲಿ ಪ್ಲಾಸ್ಟಿಕ್ ಕಸಗಳನ್ನು ಎಸೆಯುವುದು. ಬೇಕಾಬಿಟ್ಟಿ ಹಾರ್ನ್ ಹಾಕಿ ಶಬ್ದ ಮಾಲಿನ್ಯ ಮಾಡುವುದು ಹಾಗೂ ಮಹಿಳೆಯರನ್ನು ಅಸಮಾನವಾಗಿ ಕಾಣುವುದು ನನಗೆ ಬೇಸರ ತರಿಸಿದೆ’ ಎಂದು ಹೇಳಿದರು.
ಬೆರಳು ಚೀಪಿ ಆರೋಗ್ಯ ಕಾಪಾಡಿಕೊಳ್ಳುತ್ತೇನೆ: ನಿತ್ಯ ಸಾಕಷ್ಟು ಪಾದಾಯಾತ್ರೆಯಿಂದ ಸುಸ್ತಾಗುತ್ತದೆ. ಮಕ್ಕಳಂತೆ ಹೆಬ್ಬೆರಳು ಚೀಪುವುದರಿಂದ ನನಗೆ ಯಾವುದೇ ಕಾಯಿಲೆ ಅಥವಾ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಚಿಕನ್ ಮಟನ್​ನಂತಹ ಮಾಂಸಾಹಾರಿ ಊಟ ಮಾಡುವುದಿಲ್ಲ. ಮೀನು ಹಾಗೂ ಸಸ್ಯಹಾರಿ ಊಟ ಮಾಡುತ್ತೇನೆ. ಒಂದೆರಡು ಬಾರಿ ಹೊಟ್ಟೆಯ ಸಮಸ್ಯೆ ಕಾಡಿದಾಗ ವಾಹನ ಹತ್ತಿದ್ದೇನೆ. ಉಳಿದಂತೆ ಎಲ್ಲೆಡೆ ನಡೆದೇ ಸಾಗಿದ್ದೇನೆ ಎಂದು ಬ್ರೂಟೆಡ್ ಸ್ಕಾಟ್ ತಿಳಿಸಿದರು.
ಜನರ ಭಯವಿಲ್ಲ: ನಿತ್ಯ ಐದರಿಂದ ಹತ್ತು ಕಿಮೀ ನಡೆದ ನಂತರ ನಾನು ಅಲ್ಲಿನ ಜನರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಅದರಿಂದ ಖುಷಿಯಾಗುತ್ತದೆ. ಜನರಿಂದ ನನಗೆ ಭಯವಿಲ್ಲ. ಪಾಣಿಪತ್​ನಲ್ಲಿ ಅತ್ಯಂತ ಕೆಟ್ಟ ಘಟನೆ ನಡೆಯಿತು. ಬಯಲಿನಲ್ಲಿ ಟೆಂಟ್ ಹಾಕಿ ಮಲಗಿದ್ದೆ. ಆದರೆ, ಪೊಲೀಸರು ಬಂದು ಎಬ್ಬಿಸಿದರು. ನಿಮ್ಮ ವಸ್ತು ಕಳವಾಗಬಹುದು ಎಂದು ಇಲ್ಲಿನ ಜನ ಸರಿಯಿಲ್ಲ ಎಂದು 20 ಕಿಮೀ ದೂರ ಹೆದ್ದಾರಿ ಪಕ್ಕ ಬಿಟ್ಟುಬಿಟ್ಟರು. ನನಗೆ ಜನರನ್ನು ಕಂಡರೆ ಭಯವಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.