ಕಾಶ್ಮೀರದ ಐತಿಹಾಸಿಕ ತಪ್ಪು ಸರಿಪಡಿಸಿದ್ದಾಗಿ ಬಿಜೆಪಿ ಮುಖಂಡ ಸಂತೋಷ್ ಹೇಳಿಕೆ: 370ನೇ ವಿಧಿ ರದ್ದು ವಿಚಾರ ಚರ್ಚೆ

ಬೆಂಗಳೂರು: ಕಾಶ್ಮೀರ ವಿಷಯದಲ್ಲಿ ನಾವು ಗೆದ್ದಿಲ್ಲ. ಆದರೆ, ಇತಿಹಾಸದಲ್ಲಿ ಆಗಿದ್ದ ತಪ್ಪನ್ನು ಸರಿಪಡಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಜನಮನ ಸಂಘಟನೆ ಗಾಂಧಿಭವನದಲ್ಲಿ ಶುಕ್ರವಾರ ‘ಭಾರತಾಂಬೆಯ ಕಿರೀಟ- ಕಾಶ್ಮೀರ 370ನೇ ವಿಧಿ ರದ್ದತಿ’ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಶ್ಮೀರ ಮರು ನಿರ್ವಣಕ್ಕೆ ಅಲ್ಲಿನ ಜನರು ಭಾರತೀಯರೊಂದಿಗೆ ಭಾವನಾತ್ಮಕವಾಗಿ ಬೆರೆಯಬೇಕು. ಅಂತಹ ಸಂದರ್ಭವನ್ನು ನಾವು ಸೃಷ್ಟಿ ಮಾಡಿದ್ದೇವೆ ಎಂದರು.

370ನೇ ವಿಧಿ ಮತ್ತು 35 ಎ ಕಲಂ ರದ್ಧತಿಗೆ ಬಿಜೆಪಿ 73 ಬಾರಿ ನಿರ್ಣಯಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಆ.5ರಂದು ಅದಕ್ಕೆ ಕಾಲ ಕೂಡಿ ಬಂತು. ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಸತತ ಪರಿಶ್ರಮದಿಂದ ಇದು ಸಾಧ್ಯವಾಯಿತು ಎಂದು ಹೇಳಿದರು.

ದೇಶದ ಶೇ.1 ಜನಸಂಖ್ಯೆ ಹೊಂದಿರುವ ಕಾಶ್ಮೀರಕ್ಕೆ ನಮ್ಮ ಬಜೆಟ್​ನ ಶೇ.11.25 ಹಣ ವ್ಯಯವಾಗುತ್ತಿತ್ತು. ಬಂದೋಬಸ್ತ್ ಗಾಗಿಯೇ ಸೇನೆಯ ಶೇ.39 ಯೋಧರನ್ನು ನಿಯೋಜಿಸಲಾಗಿತ್ತು. ಈ ನೆಲದ 250 ಕಾನೂನುಗಳು ಅಲ್ಲಿಗೆ ಅನ್ವಯವಾಗುತ್ತಲೇ ಇರಲಿಲ್ಲ. ದೇಶದೆಲ್ಲೆಡೆ ಒಂದೇ ಧ್ವಜ ಇದ್ದರೆ, ಅಲ್ಲಿ ಮಾತ್ರ 2 ಧ್ವಜ ಹಾರಿಸಲಾಗುತ್ತಿತ್ತು. ಕಾಶ್ಮೀರಕ್ಕಾಗಿಯೇ 40 ಸಾವಿರ ಜನರ ಪ್ರಾಣಹಾನಿಯಾಗಿತ್ತು. ಇದೆಲ್ಲದಕ್ಕೂ ಅಂತ್ಯ ಹಾಡುವ ದಿಟ್ಟ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದರು.

ಬಿಜೆಪಿ ಹುಟ್ಟಿದ್ದೇ ಕಾಶ್ಮೀರ ವಿಷಯದಲ್ಲಿ ಆಗಿರುವ ಘೋರ ಅನ್ಯಾಯ ಸರಿಪಡಿಸಲು ಮತ್ತು ರಾಮಮಂದಿರ ಕಟ್ಟಲು. ಇದನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇವೆ. ಈಗ ಕಾಶ್ಮೀರ ಸಮಸ್ಯೆ ಬಗೆಹರಿದಿದೆ. ಮುಂದೆ ಆನಂದಿಸಲು ಇನ್ನಷ್ಟು ವಿಷಯಗಳಿವೆ ಎಂದು ಹೇಳಿದರು.

ಸಚಿವರಾದ ಸಿ.ಸಿ. ಪಾಟೀಲ್, ಸಿ.ಟಿ.ರವಿ, ಶಾಸಕರಾದ ನಾಗೇಶ್, ನಾರಾಯಣಸ್ವಾಮಿ, ಕೆ.ಜಿ. ಬೋಪಯ್ಯ, ಪ್ರೀತಂಗೌಡ, ಮಸಾಲೆ ಜಯರಾಂ, ಜನಮನ ಸಂಘಟನೆ ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯ ದರ್ಶಿ ಎ.ಎಚ್. ಆನಂದ್ ಉಪಸ್ಥಿತರಿದ್ದರು.

ಕಾಶ್ಮೀರದಲ್ಲಿ ಕೆಎಲ್​ಇ ಸಂಸ್ಥೆ

ಕಾಶ್ಮೀರದಲ್ಲಿ ಆಸ್ಪತ್ರೆ ಕಟ್ಟಲು ವೇದಾಂತ ಸಂಸ್ಥೆಯವರು, ವಿದ್ಯಾಸಂಸ್ಥೆಗಳನ್ನು ತೆರೆಯಲು ಕೆಎಲ್​ಇ ಸಂಸ್ಥೆ ಮುಂದೆ ಬಂದಿವೆ. ಹೀಗೆ ಇನ್ನು ಹಲವು ಪ್ರಯತ್ನಗಳು ಪ್ರಾರಂಭವಾಗಿವೆ ಎಂದು ಸಂತೋಷ್ ಮಾಹಿತಿ ನೀಡಿದರು.

ಪಿಒಕೆಗೂ ಪ್ರವೇಶ

ಕಾಶ್ಮೀರಿ ಪಂಡಿತರು ಅಲ್ಲಿಗೆ ತಕ್ಷಣಕ್ಕೆ ಹೋಗುವ, ತಮ್ಮ ಆಸ್ತಿ ಪಡೆಯುವ ಪರಿಸ್ಥಿತಿ ಇನ್ನೂ ನಿರ್ವಣವಾಗಿಲ್ಲ. ಕಾಶ್ಮೀರಿ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಸಾಗಿದೆ. ಲೈನ್ ಆಫ್ ಕಂಟ್ರೋಲ್​ನಲ್ಲಿರುವ ನಾವು, ಮುಂದೆ ಪಾಕ್ ವಶದಲ್ಲಿರುವ ಭಾಗ (ಪಿಒಕೆ) ಕಾಲಿಡುತ್ತೇವೆ ಎಂದು ಸಂತೋಷ್ ತಿಳಿಸಿದರು.

Leave a Reply

Your email address will not be published. Required fields are marked *