ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಕಾವೇರಿ ನದಿ ತೀರಕ್ಕೆ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಹಾಗೂ ತಹಸೀಲ್ದಾರ್ ಮಂಜುಳಾ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವನಸಮುದ್ರ ಗ್ರಾಮದ ವೆಸ್ಲಿ ಸೇತುವೆ ಕಾವೇರಿ ನದಿಯಲ್ಲಿ ಪ್ರವಾಸಿಗರು ತೆರಳಿ ಜೀವ ಭಯ ತೊರೆದು ಮೋಜು-ಮಸ್ತಿ ಮಾಡುವುದು, ಈಜುವುದು, ಸ್ನಾನ ಮಾಡುವುದು ವೆಸ್ಲಿ ಸೇತುವೆ ಕೆಳಗೆ, ಮೇಲೆ ಹತ್ತಿ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಜು.9ರಂದು ಸಾವಿನ ತಾಣವಾದ ಕಾವೇರಿ ಮಡಿಲು ಎಂಬ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿ ತಾಲೂಕು ಆಡಳಿತದ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಉಪವಿಭಾಗಾಧಿಕಾರಿ, ಕಾವೇರಿ ನದಿಗೆ ಸಾರ್ವಜನಿಕರು ಇಳಿಯುವುದಕ್ಕೆ ಅವಕಾಶ ನೀಡಬಾರದು. ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಪ್ರವಾಸಿಗರಿಗೆ ನದಿಯ ಆಳದ ಬಗ್ಗೆ ಅರಿವು ಮೂಡಿಸಿ ಎಂದು ಡಿವೈಎಸ್ಪಿ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.
ಹೀಗಿದ್ದರೂ ಭಾನುವಾರ ನದಿಯಲ್ಲಿ ನೂರಾರು ಪ್ರವಾಸಿಗರಿಂದ ಮೋಜು-ಮಸ್ತಿ ಮುಂದುವರಿದಿತ್ತು. ಈ ಕಾರಣ ಆ.14 ರಂದು ಉಪವಿಭಾಗಾಧಿಕಾರಿ ಸೂಚನೆಗೂ ಕಿಮ್ಮತ್ತಿಲ್ಲ ಎಂಬ ವರದಿ ವಿಜಯವಾಣಿಯಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರಕ್ಕೆ ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಮಂಜುಳಾ, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಣೇಶ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ವೇಳೆ ನದಿ ತೀರದಲ್ಲಿ ಹೆಚ್ಚಿನ ಸೂಚನೆಯ ನಾಮಫಲಕಗಳನ್ನು ಅಳವಡಿಸಿ, ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಪ್ರವಾಸಿಗರಿಗೆ ಕಾವೇರಿ ನದಿಯ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.
ಅದಲ್ಲದೇ ಶ್ರೀಮಧ್ಯರಂಗನಾಥ ಸ್ವಾಮಿಯ ದೇವಾಲಯ ಸಮೀಪದ ನದಿಯಲ್ಲಿ ನಡೆಯುತ್ತಿರುವ ಬೋಟಿಂಗ್ ಸ್ಥಳಕ್ಕೆ ಭೇಟಿ ನೀಡಿದರು. ಸಾರ್ವಜನಿಕರನ್ನು ದೋಣಿಗೆ ಹತ್ತಿಸುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್ ನೀಡಬೇಕು. 4 ಜನರನಷ್ಟೇ ದೋಣಿಯಲ್ಲಿ ಕರೆದೊಯ್ಯಬೇಕು. ಮಕ್ಕಳಿಗೆ ದೋಣಿ ಪ್ರಯಾಣ ಮಾಡಲು ಅವಕಾಶ ನೀಡಬಾರದು ಎಂದು ಅಂಬಿಗರಿಗೆ ಖಡಕ್ ಸೂಚನೆ ನೀಡಿದರು.
ಫೆನ್ಸಿಂಗ್ ಅಳವಡಿಕೆಗೆ ಮನವಿ: ಶಿವನಸಮುದ್ರ ಕಾವೇರಿ ನದಿಗೆ ಜನರು ಇಳಿಯದಂತೆ ನಾಮಫಲಕ ಅಳವಡಿಸುವಂತೆಯೂ, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನದಿ ತೀರಕ್ಕೆ ಸಾರ್ವಜನಿಕರು ತೆರಳದಂತೆ ಫೆನ್ಸಿಂಗ್ ಅಳವಡಿಸಬೇಕಾಗಿ ಹಿಂದೆಯೇ ಡಿವೈಎಸ್ಪಿ ಎಸ್‌ಪಿ ಅವರಿಗೆ ಪತ್ರ ಬರೆದಿದ್ದರು. ನಂತರ, ಎಸ್ಪಿ ಅವರು ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಂಜೂರಾದ ಬಳಿಕ ಫೆನ್ಸಿಂಗ್ ಅಳವಡಿಕೆ ಮಾಡಲಾಗುತ್ತದೆ ಎಂದರು.