ಕಾಳಿ ನದಿ ನೀರಿನ ಗುಣಮಟ್ಟ ಕಳಪೆ

ಕಾರವಾರ: ಕಾಳಿ ನದಿ ನೀರಿನ ಗುಣಮಟ್ಟದ ಕುರಿತು ವಿದ್ಯಾರ್ಥಿಗಳ ತಂಡವೊಂದು ಸಿದ್ಧಪಡಿಸಿದ ವರದಿ ಆತಂಕಪಡಿಸುವಂತಿದೆ.

ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜ್​ನ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ವಿಘ್ನೇಶ್ವರ ಗಾಂವಕರ್, ಕುಮಾರ ಚೌಹಾಣ, ವಿಶಾಲ ಕಾಣಕೋಣಕರ್ ತಯಾರಿಸಿದ ವರದಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಕಾಳಿ ನದಿ ಮಲಿನವಾಗುತ್ತ ಸಾಗುತ್ತಿದ್ದು, ಎಚ್ಚೆತ್ತುಕೊಂಡು ಪರಿಹಾರ ಕ್ರಮ ವಹಿಸದಿದ್ದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬುದು ವಿದ್ಯಾರ್ಥಿಗಳ ಅಧ್ಯಯನದ ಸಾರಾಂಶ.

ದಾಂಡೇಲಿ ಬಳಿ ಅತಿ ಮಲಿನ: ಉತ್ತರ ಕನ್ನಡ ಜಿಲ್ಲೆಯ ಡಿಗ್ಗಿಯಲ್ಲಿ ಹುಟ್ಟಿ 184 ಕಿ.ಮೀ. ಹರಿದು ಕಾರವಾರ ಬಳಿ ಅರಬ್ಬಿ ಸಮುದ್ರ ಸೇರುವ ನದಿ ಕಾಳಿ. ಕಾರ್ಖಾನೆಗಳ ತ್ಯಾಜ್ಯ, ಕೃಷಿ ನೀರು, ಮನೆಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಹಲವು ಕಡೆ ನೀರು ಮಲಿನವಾಗಿದೆ. ಈ ನೀರು ಬಳಸುವ ಜನರಿಗೆ ರೋಗ ತರುವಂತಿದೆ. ವನ್ಯ ಮೃಗಗಳಿಗೆ, ಜಲಚರಗಳಿಗೂ ನದಿಯ ನೀರಿನಿಂದ ಅಪಾಯ ಉಂಟಾಗುತ್ತಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅಧ್ಯಯನ ಹೇಗೆ?: ವಿದ್ಯಾರ್ಥಿಗಳು ಗಣೇಶಗುಡಿ ಸೂಪಾ ಡ್ಯಾಂ ಸಮೀಪ, ದಾಂಡೇಲಿಯ ದಾಂಡೇಲಪ್ಪ ದೇವಸ್ಥಾನ ಸಮೀಪ, ಶಿವಪುರ ಸೇತುವೆ ಬಳಿ, ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಬಿಟ್ಟ ನೀರು, ಕದ್ರಾ ಬಸ್ ನಿಲ್ದಾಣ ಸಮೀಪ ಹಾಗೂ ಉಳಗಾ ಸಮೀಪ ಮಾದರಿಯನ್ನುಪಡೆದಿದ್ದಾರೆ. ಅದನ್ನು ಗೋವಾದ ಖಾಸಗಿ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರಿಶೀಲಿಸಿದ್ದಾರೆ. ಅದರಿಂದ ಬಂದ ಅಂಶಗಳನ್ನು ವಿಶ್ಲೇಷಿಸಿ ವರದಿ ತಯಾರಿಸಿದ್ದಾರೆ.

ಕೃಷಿಗೂ ಯೋಗ್ಯವಲ್ಲ!: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯಕರ ನೀರಿನಲ್ಲಿ ಇರಬೇಕೆಂದು ನಿಗದಿಪಡಿಸಿದ 20 ಅಂಶಗಳನ್ನು ಆಧರಿಸಿ ಅಧ್ಯಯನ ನಡೆಸಲಾಗಿದೆ. ದಾಂಡೇಲಿ ಸಮೀಪ ಪಡೆದ ನೀರು ಕೃಷಿಗೂ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಅದರಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗಿದೆ. ಬಿಒಡಿ (ಜೈವಿಕ ಆಮ್ಲಜನಕ ಬೇಡಿಕೆ), ಸಿಒಡಿ (ರಾಸಾಯನಿಕ ಆಮ್ಲಜನಕ ಬೇಡಿಕೆ) ಮಟ್ಟದ ಹೆಚ್ಚಾಗಿದೆ. ಮ್ಯಾಗ್ನಿಶಿಯಂ, ಕಬ್ಬಿಣ, ಕ್ಷಾರೀಯತೆ, ಘಡಸುತನ, ಕ್ಯಾಲ್ಶಿಯಂ ಹೀಗೆ ಎಲ್ಲ ಅಂಶಗಳು ದಾಂಡೇಲಿ ಸಮೀಪ ನೀರಿನಲ್ಲಿ ಅತಿಯಾಗಿರುವುದು ಕಂಡುಬಂದಿದೆ. ಕೈಗಾದಿಂದ ಕೆಳಗೆ ಪರಿಶೀಲಿಸಿದ ನೀರಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬಂದಿದ್ದು, ಸಾಮಾನ್ಯಕ್ಕಿಂತ ಕೊಂಚ ಬಿಸಿಯಾಗಿರುವುದು ಪತ್ತೆಯಾಗಿದೆ. ನೇರವಾಗಿ ಕುಡಿಯಲು ನೀರು ಯೋಗ್ಯವಾಗಿಲ್ಲ. ಆದರೆ, ಯಾವುದೇ ವಿಕಿರಣದ ಅಂಶಗಳಿಲ್ಲ ಎಂಬುದೂ ವರದಿಯಲ್ಲಿರುವ ಮಹತ್ವದ ವಿಷಯವಾಗಿದೆ.

ತಂತ್ರಜ್ಞಾನದ ಕೌತುಕ ದರ್ಶನ: ಉಪ್ಪು ನೀರಿನಿಂದ ಸಿಹಿ ನೀರು ತಯಾರಿಕೆ, ಗಾಳಿಯಿಂದ ನೀರು ತಯಾರಿಕೆ… ಹೀಗೆ ತಂತ್ರಜ್ಞಾನದ ಕೌತುಕಗಳು ಸೋಮವಾರ ಮಾಜಾಳಿಯಲ್ಲಿ ತೆರೆದುಕೊಂಡವು.

ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜ್​ನ 8ನೇ ಸೆಮಿಸ್ಟರ್​ನ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಭಾಗವಾಗಿ ತಯಾರಿಸಿದ ತಾಂತ್ರಿಕ ಮಾದರಿಗಳನ್ನು ಸೋಮವಾರ ಪ್ರದರ್ಶಿಸಿದರು. ಸಿವಿಲ್ ವಿಭಾಗದ 8, ಮೆಕ್ಯಾನಿಕಲ್ ವಿಭಾಗದ 10 ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ 4 ಸೇರಿ ಒಟ್ಟು 22 ಮಾದರಿಗಳು ಪ್ರದರ್ಶನಗೊಂಡವು.

ಆಯ್ಕೆ: ಮರಗಳು ಕಳ್ಳತನವಾಗುವುದು ಹಾಗೂ ಬೆಂಕಿಯಿಂದ ಹಾನಿಯಾಗುವುದನ್ನು ತಡೆಯಲು ಚಿಪ್ ಅಳವಡಿಸುವ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಮಾದರಿ ತಾಂತ್ರಿಕ ಶಿಕ್ಷಣ ಗುಣಮಟ್ಟ ಮಂಡಳಿ (ಬಿಐಟಿಎಸ್)ಗೆ ಆಯ್ಕೆಯಾಗಿದೆ. ಎಲ್ಲ ಮಾದರಿಗಳ ವಿವರಗಳನ್ನು ರಾಷ್ಟ್ರೀಯ ಮಟ್ಟದ ಜರ್ನಲ್​ಗಳಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಾಂಶುಪಾಲ ಸುರೇಶ ಡಿ. ಮಾನೆ ವಿವರಿಸಿದರು.

ನಾವು ಪ್ರತಿ ತಿಂಗಳು ನದಿಯ ನೀರಿನ ಗುಣಮಟ್ಟವನ್ನು ನಮ್ಮ ಧಾರವಾಡ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣೀತ ಮಟ್ಟಗಳ ಆಧಾರದ ಮೇಲೆ ಸಿ ಗುಣಮಟ್ಟವನ್ನು ಕಾಳಿ ನದಿ ನೀರು ಹೊಂದಿದೆ. ಅಂದರೆ ಅಲ್ಲಿ ಕೋಲಿಫಾಮ್ರ್ ಅಂಶ ಕೊಂಚ ಹೆಚ್ಚು ಕಂಡುಬರುತ್ತದೆ. ನೀರು ಸಂಸ್ಕರಿಸಿ, ಕುದಿಸಿ ಕುಡಿಯಲು ಯೋಗ್ಯವಾಗಿದೆ ಎಂದು ನಮ್ಮ ಮಂಡಳಿ ವರದಿ ಹೇಳುತ್ತದೆ.
ವಿಜಯಾ ಹೆಗಡೆ
ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿ