ಕಾಳಿ-ಅರಬ್ಬಿ ಸಂಗಮದಲ್ಲಿ ಜಾತ್ರೆ

ಕಾರವಾರ: ಕಾಳಿ ನದಿ -ಅರಬ್ಬಿ ಸಮುದ್ರ ಸೇರುವ ಸಂಗಮ ಸ್ಥಳದ ದ್ವೀಪದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಜಾತ್ರೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ದೋಣಿಯಲ್ಲಿ ದ್ವೀಪಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಶುಕ್ರವಾರ ಜಾತ್ರೆಯ ಅಂಗವಾಗಿ ಹೋಮ ಪೂರ್ಣಾಹುತಿಗಳು ನಡೆದಿದ್ದವು. ಶನಿವಾರ ಅಭಿಷೇಕ, ಮಹಾ ಪೂಜೆ, ಪಲ್ಲಕ್ಕಿ ಮೆರವಣಿಗೆ ಪ್ರಸಾದ ವಿತರಣೆ ಜರುಗಿತು. ಜ. 20 ರಂದು ದಹಿಂಕಾಲ ಉತ್ಸವ ಜರುಗಲಿದೆ. ಶನಿವಾರ ನಂದನಗದ್ದಾ ಸಂತೋಷಿಮಾತಾ ದೇವಸ್ಥಾನದದಿಂದ ಭಕ್ತರು ದೋಣಿಯಲ್ಲಿ ತೆರಳಿದರು. ಭಕ್ತಿಯ ಜೊತೆಗೆ ದೋಣಿ ವಿಹಾರದ ಅನುಭವವೂ ದೊರಕಿತು.

ಕೂರ್ಮಗಡ ಜಾತ್ರೆ ನಾಳೆ

ದೋಣಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಕೂರ್ಮಗಡ ಜಾತ್ರೆ ಜ. 21 ರಂದು ಜರುಗಲಿದೆ. ಅಂದು ಬೆಳಗ್ಗೆ ಕಡವಾಡದಿಂದ ನರಸಿಂಹ ದೇವರ ಮೂರ್ತಿಯನ್ನು ಕಡವಾಡದಿಂದ ಪಲ್ಲಕ್ಕಿಯಲ್ಲಿ ಕರೆತಂದು ದೋಣಿಯಲ್ಲಿ ಅರಬ್ಬಿ ಸಮುದ್ರದ ನಡುವಿನ ದ್ವೀಪ ಕೂರ್ಮಗಡಕ್ಕೆ ಕೊಂಡೊಯ್ಯಲಾಗುವುದು. ಮಧ್ಯಾಹ್ನ 3 ರಿಂದ ನೈವೇದ್ಯ, ಮಹಾ ಮಂಗಳಾರತಿ ಜರುಗಲಿದೆ. ರಾತ್ರಿ 8 ರಿಂದ 12 ರವರೆಗೆ ಭಜನೆ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 1 ಗಂಟೆಗೆ ಫಲಾವಳಿಗಳ ಲಿಲಾವು ಜರುಗಲಿದೆ. 22 ರಂದು ಬೆಳಗ್ಗೆ ದೇವರನ್ನು ದ್ವೀಪದಿಂದ ಮರಳಿ ದೋಣಿಯಲ್ಲಿ ತಂದು ಕಡವಾಡಕ್ಕೆ ಕೊಂಡೊಯ್ಯಲಾಗುವುದು. ಕೋಡಿಬಾಗ ಹಾಗೂ ಬೈತಖೋಲ್​ದಿಂದ ತೆರಳಲು ದೋಣಿಯ ವ್ಯವಸ್ಥೆ ಇರಲಿದೆ.