ಕಾಳಧನದ ವಿರುದ್ಧ ಪ್ರಹಾರದಿಂದ ಮುಂದಿವೆ ಅಚ್ಛೇ ದಿನ್

ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನಬೆಂಬಲ ಸಿಕ್ಕಿದೆ. ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದರೂ ಸರ್ಕಾರವನ್ನು ದೂರುತ್ತಿಲ್ಲ. ಅವರು ಭವಿಷ್ಯವನ್ನು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಜ್ವಲವಾಗಬಹುದಾದ ದೇಶದ ಅರ್ಥವ್ಯವಸ್ಥೆ ಅವರ ಕಣ್ಣಿಗೆ ಕಾಣುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಅರ್ಥವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಕ್ರಾಂತಿಕಾರಕ ನಿರ್ಧಾರವನ್ನು ತಳೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೆ ದೂಡಿದರು. ಅದರಲ್ಲೂ, ಕಾಳಧನಿಕರಿಗೆ ನಿದ್ದೆಯಿಲ್ಲದ ರಾತ್ರಿಗಳು ಆರಂಭವಾದವು. ಮತ್ತೊಂದೆಡೆ, ಜನಸಾಮಾನ್ಯರು ಮೋದಿಯವರ ಈ ಮಾಸ್ಟರ್ ಸ್ಟ್ರೋಕ್ನಿಂದ ಸಂತಸಗೊಂಡರು. 500 ಮತ್ತು 1,000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತದಿಂದ ಕೆಲ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇವು ತಾತ್ಕಾಲಿಕ ಎಂಬ ಅರಿವು ಜನಸಾಮಾನ್ಯರಲ್ಲೂ ಇದೆ (ಪ್ರತಿಪಕ್ಷಗಳನ್ನು ಹೊರತುಪಡಿಸಿ!). ದೇಶದ ಹಿತ ಮತ್ತು ಅರ್ಥವ್ಯವಸ್ಥೆಯ ಸುಧಾರಣೆ ಬಯಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಮೋದಿಯವರು ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸುತ್ತಿದ್ದಾನೆ.

ಇಲ್ಲಿ ಒಂದು ಸಂಗತಿ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಇದು ಕೇವಲ ಕಪ್ಪುಹಣ ವಿರುದ್ಧದ ಯುದ್ಧವಲ್ಲ. ಭಾರತದ ಸುಪ್ತಚೇತನ ಉದಯಿಸುವ ಹೊಸಪರ್ವದ ಆರಂಭ! ಕೆರೆಯನ್ನು ಸ್ವಚ್ಛಗೊಳಿಸಬೇಕೆಂದರೆ ಅದರಲ್ಲಿ ತುಂಬಿರುವ ಹೂಳನ್ನು ಮೊದಲು ತೆಗೆಯಬೇಕು. ಆಗಲೇ ಅದು ಶುದ್ಧಗೊಂಡು ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಸಾಧ್ಯವಾಗುವುದು. ಮೋದಿಯ ನಿರ್ಧಾರವೂ ಅಂತಹದ್ದೇ ಒಂದು ಕ್ರಮ, ಅವರು ದೇಶದಲ್ಲಿ ತುಂಬಿರುವ ಹೂಳನ್ನು ತೆಗೆಯುವ ದಿಟ್ಟಹೆಜ್ಜೆ ಇಟ್ಟಿದ್ದಾರೆ. ಆದರೆ ಇಂತಹದ್ದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭದ ವಿಚಾರವಲ್ಲ. ಯಾರು ಬೇಕಾದರೂ ಇಂತಹ ನಿರ್ಧಾರ ಕೈಗೊಳ್ಳಬಲ್ಲರು ಎಂದು ಹೇಳುವಂತಿಲ್ಲ. ಯಾರಲ್ಲಿ ಧರ್ಮ ಮತ್ತು ರಾಷ್ಟ್ರಭಕ್ತಿಯ ಶಕ್ತಿ ತುಂಬಿರುತ್ತದೆಯೋ ಅವರು ಮಾತ್ರ ಇಂತಹ ನಿರ್ಧಾರ ಕೈಗೊಳ್ಳಬಲ್ಲರು.

ಕಪ್ಪುಹಣದ ವಿರುದ್ಧ ಕೈಗೊಂಡ ನಿರ್ಧಾರಕ್ಕೆ ದೇಶದ 125 ಕೋಟಿ ಜನರು ಹೇಗೆ ಬೆಂಬಲವಾಗಿ ನಿಂತರು ಎಂಬುದು ಇತಿಹಾಸದ ಪುಟಗಳಲ್ಲಿ ರಾರಾಜಿಸಲಿದೆ. ಸರ್ಕಾರ ಅಚಾನಕ್ಕಾಗಿ ಘೊಷಿಸಿದ ನಿರ್ಧಾರದಿಂದ ಜನರಿಗೆ ತೊಂದರೆಯಾಗಿರುವುದು ಹೌದಾದರೂ ಇದು ಕೆಲ ದಿನಗಳ ಮಟ್ಟಿಗೆ ಮಾತ್ರ. ಆದರೆ, ಎಟಿಎಂ ಹಾಗೂ ಬ್ಯಾಂಕ್ಗಳ ಮುಂದೆ ಸರದಿಯಲ್ಲಿ ನಿಂತುಕೊಂಡವರಾರೂ ಮೋದಿಯವರನ್ನು ದೂರುತ್ತಿಲ್ಲ. ಮುಂದೆ ಒಳ್ಳೆಯದಾಗುತ್ತದೆ ಎಂದಾದರೆ ಈಗ ಸ್ವಲ್ಪ ಕಷ್ಟ ಅನುಭವಿಸಲೇ ಬೇಕಲ್ವಾ ಎಂದು ಅವರೇ ಪ್ರಶ್ನಿಸುವಂತಾಗಿದೆ. ಇದು ಪ್ರತಿಪಕ್ಷಗಳ ನಿದ್ದೆಯನ್ನೂ ಕಸಿದುಕೊಂಡಿದೆ ಎಂಬುದು ನಿಜ. ಅದು ಬೇರೆ ವಿಚಾರ ಬಿಡಿ.

ಭವಿಷ್ಯದಲ್ಲಿ ಜನರು 2016ರ ಮೋದಿ ಅರ್ಥಕ್ರಾಂತಿಯನ್ನು ಮಕ್ಕಳು, ಮೊಮ್ಮಕ್ಕಳಿಗೆ ವಿವರಿಸಬೇಕಾದರೆ ಎಷ್ಟೊಂದು ರೋಮಾಂಚಿತರಾಗುತ್ತಾರೋ. ಆ ದಿನಗಳಲ್ಲಿ ಅವರು ಅನುಭವಿಸಿದ ಸಿಹಿ ಕಹಿ ನೆನಪುಗಳನ್ನು ಅವರ ಜತೆ ಹಂಚಿಕೊಳ್ಳಬಹುದು. ಎಟಿಎಂನ ಎದುರು ಅವರು ಹೇಗೆ ಐದಾರು ಗಂಟೆಗಳ ಕಾಲ ಸಾಲುಗಟ್ಟಿ ನಿಂತಿದ್ದರು, ಎಟಿಎಂಗಳಲ್ಲಿ ಹಣ ಬಂದಾಗ ಎಷ್ಟು ಖುಷಿ ಪಟ್ಟಿದ್ದರು ಎಂದೆಲ್ಲ ವಿವರಿಸಬಹುದು. ಅದರ ಜತೆಗೆ ಕಪ್ಪುಹಣವನ್ನು ಸಂಗ್ರಹಿಸಿಟ್ಟುಕೊಂಡವರ ಬಾಯಿಯನ್ನು ಮೋದಿ ಹೇಗೆ ಮುಚ್ಚಿಸಿದರು? ನಾಲ್ಕು ಕೋಟಿ ರೂಪಾಯಿಯ ಕಾರಲ್ಲಿ ಬಂದವರು ಬ್ಯಾಂಕಿನಿಂದ ನಾಲ್ಕು ಸಾವಿರ ರೂಪಾಯಿ ತೆಗೆದುಕೊಳ್ಳುವ ನಾಟಕವನ್ನು ಹೇಗೆ ಆಡಿದರು ಎಂಬುದನ್ನು ರೋಚಕವಾಗಿ ವಿವರಿಸಬಹುದು.

ಈಗಿನ ಪರಿಸ್ಥಿತಿಯಲ್ಲಿ 1857ರ ಕ್ರಾಂತಿಯನ್ನು ನೆನಪಿಸಿಕೊಳ್ಳುವಂತೆ, ತಾತನೋ.. ಮುತ್ತಾತನೋ ಲಖನೌ, ಕಾನ್ಪುರ, ಮೇರಠ್ ಅಥವಾ ಪಾಲಂನಲ್ಲಿ ನಡೆದ ದಂಗೆಯಲ್ಲಿ ಪಾಲ್ಗೊಂಡಿದ್ದರು ಎಂದು ಹೇಳುವಾಗ. 1947ರ ದಿನವನ್ನು ನೆನಪಿಸಿಕೊಳ್ಳುವಾಗ, ಭಗತ್ ಸಿಂಗ್ ಸ್ಯಾಂಡರ್ಸ್ಗೆ ಗುಂಡಿಕ್ಕಿ ಹತ್ಯೆಗೈದು ಡಿಎವಿ ಕಾಲೇಜಿನಿಂದ ಹೊರಬರುತ್ತಿರುವುದನ್ನು ನೆನಪಿಸಿಕೊಂಡಾಗ ಆಗುವ ರೋಮಾಂಚನವಿದೆಯಲ್ಲ ಅಂತಹದ್ದೇ ರೋಮಾಂಚನ ಭವಿಷ್ಯದಲ್ಲಿ ಮೋದಿಯ ಅರ್ಥಕ್ರಾಂತಿಯನ್ನು ನೆನಪಿಸಿಕೊಂಡಾಗ ಆಗಲಿದೆ.

ಅದಕ್ಕೂ ಮುಖ್ಯವಾಗಿರುವ ಅಂಶವೊಂದನ್ನು ನಾವು ಗಮನಿಸಬೇಕು. ನಮ್ಮ ರಾಷ್ಟ್ರದ ಜನರು ಬದಲಾಗುತ್ತಿದ್ದಾರೆ. ಆಡಳಿತ ವ್ಯವಸ್ಥೆಯಿಂದಲೇ ಬೇಸತ್ತು ಹೋಗಿದ್ದ ಜನರು ಇದೀಗ ಮತ್ತೊಮ್ಮೆ ಅವರಲ್ಲಿರುವ ಪ್ರತಿರೋಧಕ ಶಕ್ತಿಯನ್ನು ಒಗ್ಗೂಡಿಸಿ ಒಗ್ಗಟ್ಟಾಗಿದ್ದಾರೆ. ಪರಿಸ್ಥಿತಿ ಹೇಗಿದೆಯೆಂದರೆ ಮತ್ತೊಮ್ಮೆ ಕಾರ್ಗಿಲ್ ಯುದ್ಧ ನಡೆಯುತ್ತಿದೆಯೇ ಎಂಬ ಅನುಮಾನ ಹುಟ್ಟಿಸುವ ಮಟ್ಟಕ್ಕೆ ಜನ ಒಂದಾಗಿದ್ದಾರೆ. ಮೋದಿ ತೆಗೆದುಕೊಂಡಿದ್ದು ಎಂತಹ ಮಹತ್ವದ ನಿರ್ಧಾರ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದನ್ನು ಹಲವು ತಿಂಗಳುಗಳಿಂದ ಗುಪ್ತವಾಗಿಯೇ ಮುಂದುವರಿಸಿಕೊಂಡು ಬಂದರಲ್ಲ, ಇದು ದೇಶದ ಅರ್ಥವ್ಯವಸ್ಥೆ ಮತ್ತು ನಿರ್ಮಾಣ ಕ್ಷೇತ್ರದ ಮೇಲೆ ಪ್ರಭಾವ ಬೀರಿದ್ದು ಮಾತ್ರವಲ್ಲ ಭಾರತೀಯರ ಮನಸನ್ನೇ ಬದಲಾಯಿಸಿಬಿಟ್ಟಿದೆ. ಒಂದು ಕಾಲದಲ್ಲಿ ಅಸಮಾನವಾದ ಅರ್ಥವ್ಯವಸ್ಥೆ ಮತ್ತು ಕಪ್ಪುಹಣ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುತ್ತಿದ್ದವರು ಈಗ ಬದಲಾಗಿದ್ದಾರೆ. ಯಾವ ದೇಶದಲ್ಲಿ ಕಾಯಿದೆ ಮತ್ತು ಫಾಯಿದೆ(ಅನುಕೂಲ) ಈ ಎರಡರಲ್ಲಿ ಯಾವುದನ್ನು ಆರಿಸುತ್ತೀರಿ ಎಂದು ಕೇಳಿದರೆ ಫಾಯಿದೆ ಎನ್ನುವವರೇ ಹೆಚ್ಚಿದ್ದರು. ಕಾಯಿದೆಯನ್ನು ಬಿಟ್ಟೇಬಿಟ್ಟಿದ್ದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೇಲಿನಿಂದ ಕೆಳಸ್ತರದವರೆಗೆ ಎಲ್ಲರೂ ಕಾಯಿದೆಯನ್ನು ಘಾತಕವಾದುದು ಎಂದೇ ನಂಬಿದ್ದವರು. ಹೀಗಾಗಿ ಫಾಯಿದೆಯನ್ನೇ ಆಯ್ದುಕೊಂಡು ಬಂದಿದ್ದರು. ಆದರೆ ಈಗ ಅದೇ ಜನರು ಬದಲಾಗುತ್ತಿದ್ದಾರೆ. ಆಡಳಿತದ ಬಗ್ಗೆ ಅವರಿಗಿದ್ದ ಆತ್ಮವಿಶ್ವಾಸ ಮರುಕಳಿಸುತ್ತಿದೆ. ಇಲ್ಲಿ ಕಾಯಿದೆ ಅಥವಾ ಫಾಯಿದೆಯಲ್ಲ, ಕಾಯಿದೆಯ ಜತೆಗೆ ಫಾಯಿದೆ ಎಂಬ ಮಾತು ಕೇಳಿಬರುತ್ತಿದೆ. ಈಗ ಜನರಿಗಾಗುತ್ತಿರುವ ನೋವಿದೆಯಲ್ಲ ಅದು ನವಭಾರತ ಜನನದ ಪ್ರಸವದ ನೋವು. ಹೊಸಹುಟ್ಟಿನ ಕಾಲವಿದು, ಹೀಗಾಗಿಯೇ ನೋವಿದ್ದರೂ ಭವಿಷ್ಯವನ್ನು ನಗುಮೊಗದಿಂದಲೇ ಸ್ವಾಗತಿಸುತ್ತಿದ್ದಾರೆ.

ಇತ್ತೀಚೆಗೆ ಸತ್ನಾದಲ್ಲಿರುವ ಸರಸ್ವತಿ ಶಿಶುಮಂದಿರದ ಸ್ವರ್ಣಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದೆ. ರೈಲಿನಲ್ಲಿ ಸರ್ಕಾರಿ ಸಿಬ್ಬಂದಿಯೋರ್ವರ ಪರಿಚಯವಾಯಿತು. ಅವರೊಂದಿಗೆ ನೋಟು ಚಲಾವಣೆ ಸ್ಥಗಿತಗೊಂಡಿರುವ ಬಗ್ಗೆಯೇ ಮಾತುಕತೆ ನಡೆಸುತ್ತಿದ್ದೆ. ಅವರ ಹೆಸರು ಜಾವೇದ್ ಅಹ್ಮದ್. ರೈಲ್ವೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಆ ದಿನದ ಬಗ್ಗೆ ಅವರು ವಿವರಿಸಿದ್ದು ಹೀಗೆ- ‘‘ಮೋದಿ ಮಾತು ಆರಂಭಿಸುವಾಗ ನಮಗೆ ಅನಿಸಿದ್ದು ಈಗ ಯುದ್ಧದ ಘೊಷಣೆ ಮಾಡುತ್ತಾರೇನೋ ಎಂದು. ಆದರೆ ನೋಟು ಚಲಾವಣೆಯನ್ನು ಸ್ಥಗಿತಗೊಳಿಸುವ ಘೊಷಣೆ ಮಾಡಿದರು. ಆದರೆ, ಮೋದಿ ಘೊಷಣೆಯಿಂದ ನನ್ನ ಪತ್ನಿ ಚಿಂತಿತಳಾದಳು, ಕುಪಿತಳಾದಳು. ಅಗತ್ಯ ಕಾಲಕ್ಕೆ ಬೇಕಾಗುತ್ತದೆಂದು ನನ್ನ ಕಣ್ತಪ್ಪಿಸಿ ಆಕೆ ಸುಮಾರು ಹಣ ಒಟ್ಟುಗೂಡಿಸಿದ್ದಳು. ಅದು ಸುಮಾರು 1.25 ಲಕ್ಷ ರೂ.ದಷ್ಟಿತ್ತು. ಇದನ್ನು ನೋಡಿ ನನಗೂ ಆಶ್ಚರ್ಯವಾಗಿತ್ತು. ಆಕೆ ಸೀರೆ ಮುಂತಾದವುಗಳಿಗೆ ಹಣ ಖರ್ಚು ಮಾಡದೇ ಎಷ್ಟೊಂದು ಕಷ್ಟಪಟ್ಟು ಈ ಹಣವನ್ನು ಸಂಗ್ರಹಿಸಿರಬಹುದು ಎಂಬ ಆಲೋಚನೆ ಹುಟ್ಟಿಕೊಂಡಿತು. ಮೋದಿ ನಿರ್ಧಾರದ ಬಗ್ಗೆ ಆಕೆಗೆ ಅರ್ಥವಾಗುವಂತೆ ತಿಳಿಸಿದೆ. ನಾವೇನೂ ಚಿಂತೆ ಮಾಡುವ ಅಗತ್ಯವಿಲ್ಲ. ಇದನ್ನು ನೇರವಾಗಿ ನಿನ್ನ ಖಾತೆಗೆ ಹಾಕಿಸಿಬಿಡುವೆ ಅಷ್ಟೇ. ಯಾರು ಕಪ್ಪುಹಣ ಇಟ್ಟಿರುತ್ತಾರೋ ಅವರು ಹೆದರಿಕೊಳ್ಳಬೇಕು ನಾವಲ್ಲ ಎಂದಿದ್ದೆ. ಈ ನಿರ್ಧಾರದಿಂದ ಕೆಲ ಸಮಸ್ಯೆಗಳೇನೋ ಎದುರಾಗಬಹುದು. ಆದರೆ ಮೋದಿ ಭಾರತೀಯರೆಲ್ಲರ ಹೃದಯ ಗೆದ್ದುಬಿಟ್ಟರು’’ ಎಂದರು.

ನಮ್ಮ ದೇಹದಲ್ಲಿ ಹೇಗೆ ಹೃದಯ ಬಡಿದುಕೊಳ್ಳುತ್ತದೆಯೋ, ಮನಸ್ಸು ಇರುತ್ತದೆಯೋ ಹಾಗೆಯೇ ನಮ್ಮ ದೇಶಕ್ಕೂ ಒಂದು ಹೃದಯ ಮತ್ತು ಮನಸ್ಸು ಇರುತ್ತದೆ. ನರೇಂದ್ರ ಮೋದಿಯವರು ದೇಶದ ಆ ಮನಸ್ಸನ್ನೇ ಮುಟ್ಟಿಬಿಟ್ಟರು. ಇದರಿಂದ ನಮ್ಮ ಅರ್ಥವ್ಯವಸ್ಥೆಯ ಜತೆಜತೆಗೆ ಎಲ್ಲ ಕ್ಷೇತ್ರಗಳಲ್ಲಿ ಹೊಸ ಹುರುಪು ಮೂಡಿಸಲು ಸಾಧ್ಯವಾಗಲಿದೆ. ದೇಶದ ಶಿಕ್ಷಣವ್ಯವಸ್ಥೆ, ವೈದ್ಯಕೀಯ ಯೋಜನೆಗಳು, ನ್ಯಾಯಪಾಲನೆ, ಪೊಲೀಸ್ ವ್ಯವಸ್ಥೆ ಮತ್ತು ಸರ್ಕಾರಿ ಸೇವೆಗಳು ಸುಧಾರಿಸಲಿವೆ ಎಂಬ ಆತ್ಮವಿಶ್ವಾಸ ಹುಟ್ಟಿಕೊಳ್ಳಲಿದೆ.

ಎಲ್ಲಿ ನ್ಯಾಯವ್ಯವಸ್ಥೆ ವಿಳಂಬವಾಗುವುದೋ, ಪೊಲೀಸ್ ಮತ್ತು ಆಡಳಿತದ ಮೇಲೆಯೇ ಜನರು ನಂಬಿಕೆ ಕಳೆದುಕೊಂಡಿದ್ದಾರೋ, ಎಲ್ಲಿ ಹಿರಿಯ ನಾಯಕರು ಮತ್ತು ಅಧಿಕಾರಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಾರೋ ಅಲ್ಲಿಯ ಸರ್ಕಾರ ಕೆಲ ಕಠಿಣ ನಿರ್ಣಯ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ದೇಶವನ್ನು ಬಡತನ ಮುಕ್ತ, ಅಸಾಕ್ಷರ ಮುಕ್ತಗೊಳಿಸಬೇಕಾದರೆ ಮತ್ತು ಅಸ್ವಸ್ಥತೆ ಕೊನೆಗೊಳಿಸಬೇಕಾದರೆ ಅಲ್ಲಿನ ನಾಯಕನ ಹೃದಯದಲ್ಲಿ ನಿಷ್ಠಾವಂತಿಕೆ ಇರಬೇಕು. ಅಷ್ಟೇ ಅಲ್ಲ, ಹೊರಗಿನ ಶತ್ರುಗಳಿಂದ ಎದುರಾಗುವ ಎಲ್ಲ ಸಮಸ್ಯೆಗಳನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸುವ ಭುಜಬಲ ಇರಬೇಕು. ನರೇಂದ್ರ ಮೋದಿಯವರು ನರೇಂದ್ರ ವಿಕ್ರಮಾದಿತ್ಯನಾಗಿ ಈ ಕಾರ್ಯವನ್ನು ಆರಂಭಿಸಿದ್ದಾರೆ. ಮುಂದೆ ಇನ್ನೂ ಎಂತೆಂತಹ ಬದಲಾವಣೆಗಳಾಗಲಿದೆ ಎಂಬುದನ್ನು ನೀವೇ ನೋಡಿ. ನನ್ನ ದೃಷ್ಟಿಯಲ್ಲಿ ಇದು ಭಾರತದ ಹೊಸ ಪರ್ವ. ಇಲ್ಲಿ ಶಂಕೆ, ಬರ್ಬರತೆ ಎಲ್ಲವೂ ನಾಶವಾಗಿ ಹೋಗಲಿದೆ. ಶುಭಂ ಕರೋತಿ ಕಲ್ಯಾಣಂ ಎಂಬಂತೆ ಎಲ್ಲೆಡೆ ಶುಭದ ಹಾದಿಗಳು ತೆರೆದುಕೊಳ್ಳಲಿವೆ, ಆ ಮೂಲಕ ಅಭಿವೃದ್ಧಿಯ ಕನಸು ಸಾಕಾರಗೊಳ್ಳುವ ದಿನಗಳು ಸಮೀಪಿಸಿವೆ.

(ಲೇಖಕರು ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *