ಕಾಳಚಂಡ ತಂಡದ ವಿರುದ್ಧ ತಂಬುಕುತ್ತೀರ ಪಾರಮ್ಯ

ನಾಪೋಕ್ಲು: ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್‌ ಫ್ಯಾಮಿಲಿ ಕ್ಲಬ್ ಆಶ್ರಯದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹೈಲ್ಯಾಂಡರ್ಸ್‌ ಕಪ್‌ನಲ್ಲಿ ಮಂಡೀರ, ತಂಬುಕುತ್ತೀರ, ಓಡಿಯಂಡ, ಮಂದೇಯಂಡ ಕುಟುಂಬ ತಂಡಗಳು ಗೆಲುವು ಸಾಧಿಸಿವೆ.

ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಗ್ರಾಮ ವ್ಯಾಪ್ತಿಯಲ್ಲಿರುವ ಕೊಡವ ಕುಟುಂಬ ತಂಡಗಳ ನಡುವೆ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ತಂಬುಕುತ್ತೀರ ತಂಡ ಕಾಳಚಂಡ ತಂಡದ ಮೇಲೆ 6-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ವಿಜೇತ ತಂಡದ ಪರ ದೀಪು ಚಂಗಪ್ಪ (2), ಬೋಪಣ್ಣ (3), ಶರಣ್ ಚಂಗಪ್ಪ ಗೋಲು ಬಾರಿಸಿದರು.

ಮಂಡೀರ ತಂಡ ಚೆನ್ನಪ್ಪಂಡ ತಂಡವನ್ನು 3-1 ಗೋಲಿನಿಂದ ಮಣಿಸಿತು. ಮಂಡೀರ ಪರ ಮಧು ಬಿದ್ದಪ್ಪ ಪ್ರೀತಂ ಮುದ್ದಪ್ಪ, ಶರೀನ್ ಗೋಲು ಬಾರಿಸಿದರು. ಪರಾಜಿತ ತಂಡದ ಪರ ಪ್ರಶಾಂತ್ ಭೀಮಯ್ಯ ಏಕೈಕ ಗೋಲು ಬಾರಿಸುವುದರ ಮೂಲಕ ಸೋಲಿನ ಅಂತರ ಕಡಿಮೆ ಮಾಡಿದರು.

ಓಡಿಯಂಡ ತಂಡ ಮಲ್ಲಜೀರ ತಂಡದ ವಿರುದ್ಧ 3-1 ಗೋಲಿನ ಜಯ ಸಾಧಿಸಿತು. ವಿಜೇತ ಓಡಿಯಂಡ ಪರ ಪೃಥ್ವಿ ಪೊನ್ನಣ್ಣ (2), ಸುರೇಶ್ ತಿಮ್ಮಯ್ಯ ಗೋಲು ದಾಖಲಿಸಿದರು. ಪರಾಜಿತ ಮಲ್ಲಜೀರ ಪರ ಚೇತನ್ ಏಕೈಕ ಗೋಲು ಬಾರಿಸಿದರು.

ಸಜನ್ ಲೋಕೇಶ್ ಗಳಿಸಿದ ಏಕೈಕ ಗೋಲಿನಿಂದ ಮಂದೇಯಂಡ ತಂಡ ಮೊರ್ಕಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು.