ಕಾಲ್ತುಳಿತಕ್ಕೆ ಯುವಕ ಬಲಿ

ನೆಲಮಂಗಲ: ಆದಿಚುಂಚನಗಿರಿ ರಥೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ ಯುವಕ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ತಾಲೂಕಿನ ಟಿ.ಬೇಗೂರು ಗ್ರಾಮದ ಆರ್.ಪಿ.ಮೋಹನಗೌಡ (25) ಮೃತ. ಆದಿಚುಂಚನಗಿರಿ ಜಾತ್ರೆಗೆ ಕುಟುಂಬ ಸಮೇತ ತೆರಳಿದ್ದ ಮೋಹನ್​ಗೌಡ ಬೆಳಗಿನ ಜಾವದಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದಾಗ ಕಾಲ್ತುಳಿತ ಉಂಟಾಗಿ ಕೊನೆಯುಸಿರೆಳೆಸಿದ್ದಾನೆ. ಅದೇ ಗ್ರಾಮದ ಬೈರೇಗೌಡ ಎಂಬುವರು ತೀವ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಿಂದ ಕರೆ: ರಥೋತ್ಸವ ಮುಗಿದು ಬಹಳ ಹೊತ್ತಾದರೂ ಮೋಹನ್ ಅರವಂಟಿಕೆ ಬಳಿ ಬರದಿರುವುದನ್ನು ಕಂಡು ತಂದೆ ಪಾಪಣ್ಣ ಮೊಬೈಲ್​ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಕಾರಣ ಅನುಮಾನಗೊಂಡು ಹುಡುಕಾಟ ನಡೆಸಿದ್ದರೂ ಮಗ ಪತ್ತೆಯಾಗಿರಲಿಲ್ಲ. ಈ ವೇಳೆ ಬೆಳ್ಳೂರು ಕ್ರಾಸ್​ನಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯವರು ಕರೆ ಮಾಡಿದಾಗ ಮಗ ಮೃತಪಟ್ಟಿರುವುದು ಗೊತ್ತಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿ ಇರುವ ಹುಟ್ಟೂರು ರಾಗಿಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ

ವಿವಿಧ ಸಂಘಟನೆಗಳ ಸಂತಾಪ: ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿ ಯುವ ಬ್ರಿಗೇಡ್ ಹಾಗೂ ಟೀಂ ಮೋದಿ ತಂಡದಲ್ಲಿ ಸಂಚಾಲಕನಾಗಿದ್ದ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮೋಹನ್ ಮೃತದೇಹವನ್ನು ಗುರುವಾರ ಸಂಜೆ ಟಿ.ಬೇಗೂರು ಗ್ರಾಮಕ್ಕೆ ತರಲಾಯಿತು. ಅಂತಿಮ ದರ್ಶನ ಪಡೆದ ತಾಲೂಕಿನ ವಿವಿಧ ಹಿಂದುಪರ ಸಂಘಟನೆ ಮುಖಂಡರು ಕಂಬನಿ ಮಿಡಿದರು.

ಕಿರಿಯ ಮಗ: ಪಾಪಣ್ಣ ರಾಜಮ್ಮ ದಂಪತಿಯ 3 ಮಕ್ಕಳ ಪೈಕಿ ಕಿರಿ ಮಗನಾಗಿದ್ದ ಮೋಹನ್ ಆರು ತಿಂಗಳ ಹಿಂದೆ ವಿವಾಹವಾಗಿದ್ದ. ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಕುಟುಂಬದೊಂದಿಗೆ ಪಾಲ್ಗೊಳ್ಳುತ್ತಿದ್ದ. ಮೋಹನ್ ಕುಟುಂಬ ಅರವಂಟಿಕೆ ಹಾಕಿ ಭಕ್ತರಿಗೆ ಪ್ರಸಾದ ವಿತರಿಸುವ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.