ಕಾಲು ತುಂಡಾದರೂ ಪರೀಕ್ಷೆಗೆ ಹಾಜರ್

ಮಂಗಳೂರು: ಚಲಿಸುವ ರೈಲಿನ ಅಡಿಗೆ ಸಿಲುಕಿ ಒಂದು ಕಾಲನ್ನೇ ಕಳೆದುಕೊಂಡರೂ, ಛಲದಿಂದ ಐದೇ ತಿಂಗಳಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ ಸಮರ್ಥೆ ಈಕೆ.
ಫಾತಿಮಾ ಸುಜಾನಾ. ಸಂತ ಆ್ಯಗ್ನೆಸ್ ಕಾಲೇಜಿನ ಅಂತಿಮ ಪಿಯುಸಿ ವಿದ್ಯಾರ್ಥಿನಿ. ಈಕೆಯನ್ನು ಶುಕ್ರವಾರ ಆರಂಭಗೊಂಡ ಪರೀಕ್ಷೆ ಬರೆಯಲು ಪೋಷಕರು ಎತ್ತಿ ತಂದು ಪರೀಕ್ಷಾ ಕೇಂದ್ರವಾದ ಅಲೋಶಿಯಸ್ ಕಾಲೇಜಿನ ಎಕ್ಸಾಂ ಹಾಲ್‌ನಲ್ಲಿ ಕುಳ್ಳಿರಿಸಿದಾಗ ಸುತ್ತಲಿನ ಇತರ ವಿದ್ಯಾರ್ಥಿಗಳು, ಉಪನ್ಯಾಸಕರೇ ದಂಗಾದರು!

ಕಾಮರ್ಸ್ ವಿದ್ಯಾರ್ಥಿನಿ ಫಾತಿಮಾ ಮಂಗಳೂರಿನ ಮಹಾಕಾಳಿಪಡ್ಪು ನಿವಾಸಿ ಸಾಮಾಜಿಕ ಕಾರ್ಯಕರ್ತ ಹಾಗೂ ಬ್ಯಾಡ್ಮಿಂಟನ್ ಪಟು ಅಬ್ದುಲ್ ಸಮದ್ ಅವರ ಪುತ್ರಿ. ಕಳೆದ ವರ್ಷ ಅಕ್ಟೋಬರ್ 29 ಫಾತಿಮಾಗೆ ಕೆಟ್ಟ ದಿನ. ಅಂದು ಕಾಲೇಜಿಗೆ ಹೋಗಲು ರೈಲ್ವೇ ಹಳಿ ದಾಟುವಾಗ ಜಾರಿ ಬಿದ್ದರು. ಎದ್ದು ದಾಟಬೇಕೆನ್ನುವಷ್ಟರಲ್ಲೇ ವೇಗದ ರೈಲು ಆಕೆಯ ಮೇಲೆ ಹಾದುಹೋಯಿತು. ಎರಡು ಕಾಲುಗಳಿಗೂ ಸೊಂಟದವರೆಗೂ ತೀವ್ರ ಪೆಟ್ಟು ಬಿತ್ತು.

ಅಲ್ಲೇ ನೋಡಿದ ಪರಿಚಯಸ್ಥರು ತಕ್ಷಣ ತಂದೆಗೆ ಫೋನ್ ಮೂಲಕ ಮಾಹಿತಿ ನೀಡಿದರು, ಸಮದ್ ಹಾಗೂ ಅವರ ಸೋದರ ಫಾತಿಮಾರನ್ನು ಆಸ್ಪತ್ರೆಗೆ ಸೇರಿಸಿದರು. 10 ದಿನ ತೀವ್ರ ನಿಗಾ ವಿಭಾಗ ಹಾಗೂ ಒಟ್ಟು 40 ದಿನ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಒಂದು ಕಾಲನ್ನು ಉಳಿಸಲೇ ಆಗಲಿಲ್ಲ. ಇನ್ನೊಂದು ಕಾಲು ಸರಿಯಾಗಿ ಊರಲು 6 ತಿಂಗಳು ಬೇಕಾಗಬಹುದು. ಇದರ ನಡುವೆ ಮಗಳ ಮನಸ್ಥೈರ್ಯ ಕುಗ್ಗದಂತೆ ನೋಡಿಕೊಂಡರು ಸಮದ್ ಹಾಗೂ ಅವರ ಪತ್ನಿ ರಮ್ಲತ್.

ಮುಂದೆ ಏನು ಮಾಡಬೇಕೆನ್ನುವ ಬಗ್ಗೆ ಫಾತಿಮಾ ನಿರ್ಧರಿಸಿಲ್ಲ. ಆಕೆಯ ಇಷ್ಟ ಉಪನ್ಯಾಸಕಿಯಾಗುವುದು. ಆದರೆ ಈಗ ಕಾಲು ತುಂಡಾಗಿರುವುದರಿಂದ ಏನಾಗುವುದೋ ನೋಡಬೇಕು. ಏನಿದ್ದರೂ ವ್ಯಾಸಂಗ ಮುಂದುವರಿಸುವುದಂತೂ ನಿಜ, ಕಾಲಕ್ರಮೇಣ ಮುಂದಿನ ಹಾದಿಯನ್ನು ನಿರ್ಧರಿಸುತ್ತಾಳೆ ಎಂದು ದೃಢವಾಗಿ ನುಡಿಯುತ್ತಾರೆ. ಒಂದು ಕಾಲು ಮಂಡಿಯಿಂದಲೇ ತುಂಡಾಗಿದೆ. ಅಲ್ಲಿಗೆ ಕೃತಕ ಕಾಲು ಅಳವಡಿಸುವ ಬಗ್ಗೆ ವೈದ್ಯರು ಸೂಚಿಸಿದ್ದು, ಅದರಂತೆ ಈಗಾಗಲೇ ಕೃತಕ ಕಾಲು ತರಿಸುವ ವ್ಯವಸ್ಥೆ ಮಾಡಿದ್ದೇನೆ ಎನ್ನುವ ಸಮದ್, ಬಳಿಕ ಇನ್ನಷ್ಟು ಪರಿಸ್ಥಿತಿ ಸುಧಾರಿಸುವ ಆಶಾಭಾವನೆಯಲ್ಲಿದ್ದಾರೆ.

ಏನೇ ಆದರೂ ಪರೀಕ್ಷೆ ಬರೆಯಲೇಬೇಕು ಎನ್ನುವ ದೃಢ ನಿರ್ಧಾರ ಆಕೆಯದ್ದಾಗಿತ್ತು. ಅದಕ್ಕೆ ಪೂರಕವಾಗಿ ನಾವೂ ಆಕೆಗೆ ಆತ್ಮವಿಶ್ವಾಸ ತುಂಬಿದೆವು, ಬೀಚ್‌ಗೂ ಎತ್ತಿಕೊಂಡೇ ಕರೆದುಕೊಂಡು ಹೋಗುತ್ತಿದ್ದೆವು. ಬುದ್ಧಿವಂತೆ ಆಕೆ, ಸಾಕಷ್ಟು ಧೈರ್ಯವೂ ಇದೆ, ಹಾಗಾಗಿ ಈಗ ಪರೀಕ್ಷೆ ಬರೆದಿದ್ದಾಳೆ.
ಅಬ್ದುಲ್ ಸಮದ್, ತಂದೆ.