ಕಾಲುವೆ ಸ್ವಚ್ಛಗೊಳಿಸಿ ಹುತಾತ್ಮ ದಿನ ಆಚರಣೆ

ಧಾರವಾಡ: ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆ, ನರಗುಂದ ವಿಭಾಗದ ಮಲಪ್ರಭಾ ಬಲದಂಡೆ ಕಾಲುವೆಯ ಸಹಕಾರ ಸಂಘಗಳ ಮಹಾಮಂಡಳ ಆಶ್ರಯದಲ್ಲಿ ಭಾನುವಾರ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ರೈತ ಹುತಾತ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನೀರಾವರಿ ಇಲಾಖೆ ಮತ್ತು ವಾಲ್ಮಿ ಸಂಸ್ಥೆಯ ಅಧಿಕಾರಿಗಳು ಮಲಪ್ರಭಾ ಬಲದಂಡೆ ಕಾಲುವೆ ಅಡಿ ಬರುವ ನರಗುಂದದ ಎರಡು ಉಪ

ಕಾಲುವೆಯಲ್ಲಿ ತುಂಬಿದ್ದ ಹೂಳು, ಹುಲ್ಲು, ಕಸ-ಕಡ್ಡಿ, ಕಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಈ ವೇಳೆ ಮಾತನಾಡಿದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಶ್ರಮದಾನದ ಮೂಲಕ ಸಮುದಾಯದ ಕೆಲಸಗಳನ್ನು ಮಾಡುವಲ್ಲಿ ನೀರು ಬಳಕೆದಾರ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ಸಮರ್ಪಕ ನೀರಾವರಿಗಾಗಿ ನೀರು ಬಳಕೆದಾರ ಸಹಕಾರ ಸಂಘಗಳನ್ನು ಬಲಪಡಿಸುವುದು ಅಗತ್ಯ. ಸಂಘಗಳನ್ನು ಬಲಪಡಿಸಲು ರೈತರು ಹಾಗೂ ಸಂಘದ ಸದಸ್ಯರು ಶ್ರಮಿಸಬೇಕು ಎಂದರು. ಮಹಾಮಂಡಳದ ಅಧ್ಯಕ್ಷ ಬಿ.ವೈ. ಕಾಡಪ್ಪನವರ, ಸದುಗೌಡ ಪಾಟೀಲ, ಶೇಖಪ್ಪ ತಿರ್ಲಾಪುರ, ಜಿ.ಆರ್. ತಿಮ್ಮಾರೆಡ್ಡಿ, ಎಚ್.ಎನ್. ಹಳಕಟ್ಟಿ, ಶಂಕ್ರಣ್ಣ ಯರಗಟ್ಟಿ, ಬಿ.ಎಂ. ರಾಯರೆಡ್ಡಿ, ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *