ಕೊಡೇಕಲ್: ದೇಶಕ್ಕೆ ಸ್ವಾತಂತ್ರö್ಯ ಬಂದು 77 ವರ್ಷವಾದರೂ ಕೆಲ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎಂಬುದಕ್ಕೆ ಹುಣಸಗಿ ತಾಲೂಕಿನ ಆಮಲಿಂಗೇಶ್ವರ ದೊಡ್ಡಿ ನಿದರ್ಶನ. ಜೋಗುಂಡಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮಾಪುರ ಎಸ್‌ಕೆ ಹತ್ತಿರದ ಆಮಲಿಂಗೇಶ್ವರ ದೊಡ್ಡಿ ನಿವಾಸಿಗಳು ಯಾವುದೇ ಸೌಕರ್ಯವಿಲ್ಲದೆ ಜೀವನ ನಡೆಸುತ್ತಿರುವುದು ಶೋಚನೀಯ ಸಂಗತಿ.
ಅಮ್ಮಾಪುರ ಎಸ್‌ಕೆದಿಂದ 4 ಕಿಮೀ ದೂರದ ಕಾನನ ಪ್ರದೇಶ ಕೃಷ್ಣಾ ನದಿ ಪಕ್ಕದ ಫಲವತ್ತಾದ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತ ಅಲ್ಲೇ ಗುಡಿಸಲು, ಮನೆ ಕಟ್ಟಿಕೊಂಡು 20ಕ್ಕೂ ಹೆಚ್ಚು ಕುಟುಂಬದ 50-60 ಜನ ವಾಸಿಸುತ್ತಿದ್ದಾರೆ. ಆದರೆ ಇದುವರೆಗೆ ಕುಡಿಯಲು ಶುದ್ಧ ನೀರು ಸೇರಿ ಅಗತ್ಯ ಮೂಲಸೌಲಭ್ಯ ಇಲ್ಲದೆ ಯಾತನೆ ಅನುಭವಿಸುತ್ತಿದ್ದಾರೆ.
ವ್ಯವಸಾಯವೇ ಬದುಕಾಗಿಸಿಕೊಂಡಿರುವ ಜನವಸತಿ ಪ್ರದೇಶಕ್ಕೆ ಗ್ರಾಪಂನವರೇ ಆಮಲಿಂಗೇಶ್ವರ ದೊಡ್ಡಿ ಎಂದು ಹೆಸರಿಟ್ಟಿದ್ದಾರೆ ಹೊರತು ಯಾವೊಂದು ಸೌಲಭ್ಯ ಕಲ್ಪಿಸಿಲ್ಲ. ಚುನಾವಣೆ ವೇಳೆ ಮಾತ್ರ ಮತಯಾಚನೆಗೆ ಬರುವ ಜನಪ್ರತಿನಿಧಿಗಳು ಇಲ್ಲದ ಭರವಸೆ ನೀಡಿ ಹೋದವರು ಮತ್ತೆ ಇತ್ತ ತಲೆಸಹಿತ ಹಾಕುವುದಿಲ್ಲ ಎಂದು ಕಿಡಿಕಾರುತ್ತಾರೆ ದೊಡ್ಡಿಯ ಬುದ್ದು ರಾಠೋಡ್.
ಇನ್ನು ಈ ದೊಡ್ಡಿಗೆ ಅಮ್ಮಾಪುರ ಬಳಿಯ ಹಳ್ಳ ದಾಟಿಯೇ ತೆರಳಬೇಕು. ಆದರೆ ಸೇತುವೆಯಾಗಲಿ, ಪರ್ಯಾಯ ಮಾರ್ಗವಾಗಲಿ ಇಲ್ಲದ್ದರಿಂದ ದೊಡ್ಡಿ ಜನರೇ ಹಣ ಸಂಗ್ರಹಿಸಿ ತಮ್ಮ ಮತ್ತು ಜಾನುವಾರುಗಳ ಓಡಾಟಕ್ಕೆ ಕಿರಿದಾದ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಆದರೆ ಪ್ರತಿವರ್ಷ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ ಹರಿಸುವ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗುವುದರಿಂದ 15-20 ದಿನ ಹೊರಜಗತ್ತಿನ ಸಂಪರ್ಕ ಕಳೆಡಿದುಕೊಂಡು ನಿವಾಸಿಗಳು ಪರದಾಡುವುದು ಸಾಮಾನ್ಯ.
ಶುದ್ಧ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ಕಲುಷಿತ ನೀರಿನ ಸೇವನೆಯಿಂದಾಗಿ ನಿವಾಸಿಗಳು ಆಸ್ಪತ್ರೆ ಸೇರಿದ ಪ್ರಸಂಗಗಳಿಗೇನೂ ಕೊರತೆಯಿಲ್ಲ. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ದೊಡ್ಡಿ ಜನರ ಸಮಸ್ಯೆಯನ್ನು ಖುದ್ದು ನೋಡಿದ್ದ ಮಾಜಿ ಸಚಿವ ನರಸಿಂಹ ನಾಯಕ(ರಾಜುಗೌಡ) ಶುದ್ಧ ಕುಡಿಯುವ ನೀರು ಸೇರಿ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದರು. ಜೆಸ್ಕಾಂನಿAದ ವಿದ್ಯುತ್ ಕಂಬಗಳನ್ನು ಸಹ ಹಾಕಲಾಗಿದೆ. ಆದರೆ ಚುನಾವಣೆ ನಂತರ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ತಂತಿಗಳಿಲ್ಲದೆ ಬರೀ ಕಂಬಗಳಷ್ಟೇ ಕಾಣಬಹುದಾಗಿದೆ.
ಆಮಲಿಗೇಶ್ವರ ದೊಡ್ಡಿ ಸೇರಿ ಸುತ್ತಮುತ್ತ ಫಲವತ್ತಾದ ಸಾವಿರಾರು ಎಕರೆ ಜಮೀನಿದೆ. 30 ವರ್ಷ ಹಿಂದೆಯೇ ಉಪ ಕಾಲುವೆ ನಿರ್ಮಿಸಿದ್ದರೂ ಹನಿ ನೀರು ಹರಿಯದಿರುವುದು ಕೃಷ್ಣಾ ಭಾಗ್ಯ ಜಲನಿಗಮ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ಕಾಲುವೆ ನೀರು ಬಳಸಿ ವ್ಯವಸಾಯ ಮಾಡಬೇಕಿದ್ದ ಸ್ಥಳೀಯರು ಮಳೆಯನ್ನೇ ನಂಬಿ ಕೂಡುವಂತಹ ಸ್ಥಿತಿ ಇದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದು, ಕಾಲುವೆ ನೀರು ಯಾವಾಗ ಬರುತ್ತದೆ ಎಂದು ಜಾತಕಪಕ್ಷಿಯಂತೆ ಕಾಯುತ್ತಲೇ ದಿನದೂಡುತ್ತಿದ್ದಾರೆ.
ಸಂಚಾರಕ್ಕೆ ಸೇತುವೆ ನಿರ್ಮಿಸಿಕೊಡಿ: ಆಮಲಿಂಗೇಶ್ವರ ದೊಡ್ಡಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಪ್ರವಾಹದಿಂದಾಗಿ ಕೊಚ್ಚಿ ಹೋಗಿದ್ದು, ಶಾಲಾ ಮಕ್ಕಳು ಸೇರಿ ಜನ-ಜಾನುವಾರುಗಳಿಗೆ ಸಂಚರಿಸಲು ರಸ್ತೆ ಇಲ್ಲವಾಗಿದೆ. ಶೀಘ್ರವೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಳ್ಳಕ್ಕೆ ಸೇತುವೆ ನಿರ್ಮಿಸುವ ಮೂಲಕ ದೊಡ್ಡಿ ಜನರಿಗೆ ಅನೂಕೂಲ ಮಾಡಿಕೊಡಬೇಕು ಎಂಬುದು ಒಕ್ಕೊರಲ ಒತ್ತಾಸೆಯಾಗಿದೆ.