ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯಲ್ಲಿ ಇತ್ತೀಚೆಗೆ ಮಾದಿಗ ಸಮುದಾಯದ ಮೇಲೆ ನಡೆದ ದಬ್ಬಾಳಿಕೆ ಸಂಬಂಧ ನೆಪ ಮಾತ್ರಕ್ಕೆ ಒಬ್ಬನನ್ನು ಬಂಧಿಸಿದ್ದು, ಇನ್ನೂ ನಾಲ್ವರು ಪ್ರಮುಖ ಆರೋಪಿಗಳನ್ನು ಇನ್ನೆರಡು ದಿನದೊಳಗೆ ವಶಕ್ಕೆ ಪಡೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎಚ್.ಪ್ರಕಾಶ್ ಬೀರಾವರ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ವರ್ಷಗಳಿಂದ ಕಾಲುವೆಹಳ್ಳಿಯಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿದೆ. ಕ್ಷೌರ ಮಾಡುವ ವಿಚಾರ ಸಂಬಂಧ ಮಾದಿಗರ ಮೇಲೆ ದಬ್ಬಾಳಿಕೆ ನಡೆದಿದೆ. ಪ್ರಕರಣ ದಾಖಲಾಗಿ ಎಂಟು ದಿನವಾದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು.
ನೆಪ ಮಾತ್ರಕ್ಕೆ ಕ್ಷೌರಿಕನೊಬ್ಬನನ್ನು ಪೊಲೀಸರು ಬಂಧಿಸಿ ನಿರ್ಲಕ್ಷೆ ವಹಿಸಿದ್ದಾರೆ. ಆದ್ದರಿಂದ ಚಳ್ಳಕೆರೆ ಡಿವೈಎಸ್ಪಿ ಅಲ್ಲಿನ ವೃತ್ತ ನಿರೀಕ್ಷಕರನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಮುಖಂಡ ಚಿಕ್ಕಗೊಂಡನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸಮನ್ವಯ ಸಮಿತಿ ರಚಿಸಿ, ಕಾಲುವೆಹಳ್ಳಿಯಲ್ಲಿ ಸಹೋದರತ್ವ ಬೆಸೆಯುವ ಕೆಲಸವಾಗಬೇಕು. ಮಾದಿಗರು-ನಾಯಕ ಸಮುದಾಯದವರು ಅಣ್ಣ-ತಮ್ಮಂದಿರಂತೆ ಬದುಕಬೇಕಿದೆ ಎಂದು ಸಲಹೆ ನೀಡಿದರು.
ದಲಿತ ಸಂಘಟನೆ ಒಕ್ಕೂಟದ ಉಪಾಧ್ಯಕ್ಷ ಕೆ.ರಾಜಣ್ಣ ಮಾತನಾಡಿ, ಸಹೋದರ ಸಮಾಜದಿಂದಲೇ ಅಸ್ಪಶ್ಯತೆ
ನಡೆಯುವುದಾದರೆ, ಮೇಲ್ಜಾತಿಯವರು ಆ ರೀತಿ ಕಾಣದಿರುತ್ತಾರೆಯೇ ಎಂದು ಪ್ರಶ್ನಿಸಿದರು.
ಮುಖಂಡರಾದ ಎಂ.ಆರ್.ಶಿವರಾಜ್, ಜೆ.ಜೆ.ಹಟ್ಟಿ ಶಿವಣ್ಣ, ಬಂಗಾರಪ್ಪ, ಜಿ.ಎಂ.ಪ್ರಕಾಶ್ ಇತರರಿದ್ದರು.