ಕಾಲಕಾಲೇಶ್ವರ ರಥೋತ್ಸವ ಸಂಭ್ರಮ

ಗಜೇಂದ್ರಗಡ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಕಾಲಕಾಲಕಾಲೇಶ್ವರ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ನಡೆಯಿತು. ದವನದ ಹುಣ್ಣಿಮೆಯಿಂದ ಐದು ದಿನಗಳವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನದ ಧರ್ಮದರ್ಶಿಗಳು ರಥದ ಗಾಲಿಗೆ ತೆಂಗು ಅರ್ಪಿಸಿ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರೆ ನಿಮಿತ್ತ ಬೆಳಗ್ಗೆ ಕಾಲಕಾಲೇಶ್ವರನಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ದವನಾರ್ಪಣೆ ಮತ್ತು ಪಲ್ಲಕ್ಕಿ ಸೇವೆ ನಡೆಯಿತು. ಮಧ್ಯಾಹ್ನ ದುರ್ಗಾದೇವಿಗೆ ವಸ್ತ್ರಧಾರಣೆ ಮತ್ತು ಅರಿಶಿಣ, ಕುಂಕುಮ ಸಮರ್ಪಿಸಿ ವೈಭವದಿಂದ ರಂಗ ಮಂಟಪಕ್ಕೆ ಕರೆ ತರಲಾಯಿತು. ಜಾತ್ರಾ ಮಹೋತ್ಸವದ ಪ್ರಯುಕ್ತ ಸಾವಿರಾರು ಭಕ್ತರು ದವನ ಸಮರ್ಪಿಸಿದರು. ಗಜೇಂದ್ರಗಡ ಹಾಗೂ ಮ್ಯಾಗೇರಿ ಗ್ರಾಮಗಳ ಭೋವಿ ಸಮಾಜದವರು ತೇರು ಎಳೆದು ಸೇವೆ ಸಲ್ಲಿಸಿದರು.

ಒಂದು ಗಂಟೆ ವಿಳಂಬ

ಶುಕ್ರವಾರ ಸಂಜೆ 6 ಗಂಟಗೆ ರಥೋತ್ಸವ ಎಳೆಯಲಾಯಿತು. ಗಾಲಿ ಉರಳುತ್ತಿದ್ದಂತೆ ರಥದ ಎಡ ಭಾಗಕ್ಕೆ ರಥ ಜಗ್ಗಿದ್ದರಿಂದ ಪಕ್ಕದಲ್ಲಿ ಇದ್ದ ಬೇವಿನಗಿಡಗಳ ನಡುವೆ ರಥ ಸಿಕ್ಕಿಹಾಕಿಕೊಂಡಿತು. ಗಿಡದ ಕೊಂಬೆಗಳನ್ನು ಕಡಿದು ಸತತ ಒಂದು ಗಂಟೆಗಳ ಕಾರ್ಯಾಚರಣೆ ಬಳಿಕ ರಥ ಎಳೆಯಲು ಅನುಕೂಲ ಕಲ್ಪಿಸಲಾಯಿತು.

ಧೂಳಿನಿಂದ ಕೆಂಗೆಟ್ಟ ಭಕ್ತರು

ರಥ ಬೀದಿಯುದ್ದಕ್ಕೂ ಸಾವಿರಾರು ಭಕ್ತರು ಸೇರಿದ್ದರಿಂದ ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿತ್ತು. ವಯೋವೃದ್ಧರು, ರೋಗಿಗಳು, ಮಕ್ಕಳು ಕಿರಿಕಿರಿ ಅನುಭವಿಸುವಂತಾಯಿತು. ರಥಬೀದಿಯಲ್ಲಿ ಗ್ರಾ.ಪಂ ಟ್ಯಾಂಕರ್ ಮೂಲಕ ನೀರು ಸಿಂಪಡಿಸಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಭಕ್ತರು ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *