ಕಾರ್ವಿುಕರಲ್ಲ ಸ್ವಯಂಸೇವಕರು

ಎನ್​ಎಸ್​ಎಸ್ ಎಂಬುದು ‘ಬದುಕು ಕಲಿಸುವ ಬಯಲು ವಿಶ್ವವಿದ್ಯಾಲಯ’. ಈಗ ಎಲ್ಲೆಡೆ ಕಾಲೇಜು ವತಿಯಿಂದ ಎನ್ನೆಸ್ಸೆಸ್ ಘಟಕಗಳು ಹಳ್ಳಿಹಳ್ಳಿಗಳಲ್ಲಿ ವಾರ್ಷಿಕ ಶಿಬಿರ ಹಮ್ಮಿಕೊಳ್ಳುವ ಸಮಯ. ಈ ಮೂಲಕ ‘ಸ್ವಚ್ಛ, ಆರೋಗ್ಯಕರ ಭಾರತ’ ನಿರ್ವಣಕ್ಕೆ ಸಾಥ್ ನೀಡಿ. ಹಳ್ಳಿ ಜನರ ಪ್ರೀತಿಯ ಅಪ್ಪುಗೆ ಸಿಗುವ ಜತೆಗೆ ಕಾಲೇಜಿನಲ್ಲೂ ನಿಮ್ಮದೇ ಆದ ಇಮೇಜ್ ಅಚ್ಚೊತ್ತಲಿದೆ.

| ಎ.ಎಂ.ಜಿ. ಬೆಂಗಳೂರು

ಇವರು ಕಾರ್ವಿುಕರಲ್ಲ, ಸ್ವಯಂ ಸೇವಕರು. ಸ್ವಚ್ಛ ಪರಿಸರ ನಿರ್ವಿುಸುವ ಸೈನಿಕರು. ಪರರ ಊರಲ್ಲಿ ಬಿಸಿಲು, ಧೂಳು ಎನ್ನದೆ ಕಲ್ಲುಮುಳ್ಳನ್ನೂ ಲೆಕ್ಕಿಸದೆ ಪಾಳುಬಿದ್ದ ದೇವಾಲಯಗಳಿಗೆ ಜೀಣೋದ್ಧಾರದ ಲೇಪನ ಹಚ್ಚಿ, ವೀರಗಲ್ಲು- ಶಾಸನಗಳ ಸಂರಕ್ಷಿಸಿ, ಪ್ರತಿ ಬೀದಿಯಲ್ಲೂ ಜಾಗೃತಿ ಜಾಥಾ ಹೊರಟು ಮಾರಕ, ಸಾಂಕ್ರಾಮಿಕ ರೋಗ ತಡೆ, ಅಕ್ಷರ ಕಲಿಕೆ ಕುರಿತು ಅರಿವು ಮೂಡಿಸಿ, ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಲೇ ಶುಚಿತ್ವದ ಮಹತ್ವ ಸಾರುತ್ತಾರೆ. ಮನೆಮನೆಗೂ ತೆರಳಿ ಜನಸಂಖ್ಯೆ, ಉದ್ಯೋಗ, ಸಾಕ್ಷರತೆ ಪ್ರಮಾಣವನ್ನು ಸಮೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗೆ ತಲುಪಿಸುತ್ತಾರೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಜತೆಗೆ ಮತದಾನಕ್ಕೂ ಪ್ರೇರೇಪಿಸುತ್ತಾರೆ. ನಿಗದಿತ ಜಾಗದಲ್ಲಿ ಅಡುಗೆ ತಯಾರಿಸಿ ಸಹಪಾಠಿಗಳೆಲ್ಲರೂ ಸಹಭೋಜನಕ್ಕೆ ಕೂರುವ ಪರಿ, ಹಗಲಿನಲ್ಲಿ ಇಷ್ಟ-ಕಷ್ಟದೊಂದಿಗೆ ಶ್ರಮದಾನ ಮಾಡಿದವರಿಗೆ ಸಂಜೆ ನಡೆಯುವ ಕಾರ್ಯಕ್ರಮ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತದೆ. ಅಂದಹಾಗೆ ಇದು ಸ್ವಯಂ ಸೇವಕರಿಗಾಗಿ ಸ್ವಯಂ ಸೇವಕರಿಂದಲೇ ಆಯೋಜನೆಗೊಳ್ಳುವ ಕಾರ್ಯಕ್ರಮ.)

ಇಲ್ಲಿ ವೇದಿಕೆಯತ್ತ ಗ್ರಾಮಸ್ಥರನ್ನು ಪ್ರತಿಭೆಗಳ ಮೂಲಕವೇ ಸೆಳೆಯುವ ಇವರ ಕಸರತ್ತು ಉತ್ತಮ ವ್ಯಕ್ತಿತ್ವ ವಿಕಸನಕ್ಕೂ ದಾರಿದೀಪ. ಅಂದಹಾಗೆ, ಇದು ಎನ್​ಎಸ್​ಎಸ್(ರಾಷ್ಟ್ರೀಯ ಸ್ವಯಂ ಸೇವೆ) ವಾರ್ಷಿಕ ಶಿಬಿರದ ಸ್ಯಾಂಪಲ್. ಪಠ್ಯೇತರ ಚಟುವಟಿಕೆಗಳಾದ ಎನ್​ಸಿಸಿ, ಸಾಂಸ್ಕೃತಿಕ, ಕ್ರೀಡೆಯಂತೆಯೇ ಪಿಯುಸಿ, ಪದವಿ, ಸ್ನಾತಕೋತ್ತರ ಕಾಲೇಜುಗಳಲ್ಲೂ ಎನ್​ಎಸ್​ಎಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಡಿಗ್ರಿ ತರಗತಿಗಳಲ್ಲಿರುವ ಪಠ್ಯೇತರ ಚಟುವಟಿಕೆಗಳಲ್ಲಿ ಎನ್​ಎಸ್​ಎಸ್ ಮತ್ತು ಎನ್​ಸಿಸಿ ಪ್ರಮುಖವಾದುದು. ಚಿತ್ರಕಲೆ, ನಾಟಕ, ಸಾಹಿತ್ಯ, ನೃತ್ಯ, ಸಂಗೀತ ಪಠ್ಯೇತರ ಚಟುವಟಿಕೆಗಳ ಜತೆ ಎನ್​ಎಸ್​ಎಸ್ ಕೂಡ ಇದೆ. ಇದರ ಆಯ್ಕೆಯಲ್ಲಿ ನಿರ್ದಿಷ್ಟ ಕಾರ್ಯಕ್ರಮದ ಬಗ್ಗೆ ಅರಿತು ಸೇರಿಕೊಂಡರೆ ಉಪಯುಕ್ತವಾಗುತ್ತದೆ. ಇಲ್ಲದಿದ್ದಲ್ಲಿ ಶನಿವಾರ ಮಧ್ಯಾಹ್ನದ ಪಠ್ಯೇತರ ತರಗತಿ ಜೈಲಿನಂತೆ ಅನಿಸುವುದು ಖಚಿತ. ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಹಲವು ವೇದಿಕೆಯಲ್ಲಿ ಪ್ರತಿಭೆ ಅನಾವರಣಕ್ಕೆ ಎನ್​ಎಸ್​ಎಸ್ ಅವಕಾಶ ಕಲ್ಪಿಸುವ ಜತೆಗೆ ಭಾವೈಕ್ಯತೆಯ ಸಂಬಂಧ ವೃದ್ಧಿ ಹಾಗೂ ನಾಯಕತ್ವ ಬೆಳೆಸುತ್ತಿದೆ.

ಎನ್​ಎಸ್​ಎಸ್ ಎಂಬುದು ‘ಬದುಕು ಕಲಿಸುವ ಬಯಲು ವಿಶ್ವವಿದ್ಯಾಲಯ’. ಹಳ್ಳಿಸೊಗಡಲ್ಲಿ ಮಿಂದೇಳಲು, ಗ್ರಾಮೀಣರ ಬವಣೆ ಅರಿಯಲು, ಶ್ರಮದಾನವನ್ನೂ ಎಂಜಾಯ್ ಮಾಡಲು ಇದು ಸೂಕ್ತ ವೇದಿಕೆಯೂ ಹೌದು. ಈ ಮೂಲಕ ‘ಸ್ವಚ್ಛ, ಆರೋಗ್ಯಕರ ಭಾರತ’ ನಿರ್ವಣಕ್ಕೆ ಸಾಥ್ ನೀಡಿ. ಪ್ರತಿಫಲವಿಲ್ಲದೆ ಮಾಡುವ ಸೇವೆಗೆ ಹಳ್ಳಿ ಜನರ ಪ್ರೀತಿಯ ಅಪ್ಪುಗೆ ಸಿಗುವ ಜತೆಗೆ ಕಾಲೇಜಿನಲ್ಲೂ ನಿಮ್ಮದೇ ಆದ ಇಮೇಜ್ ಅಚ್ಚೊತ್ತಲಿದೆ.

ಹೇಗಿರುತ್ತೆ ಶಿಬಿರ?: ಎನ್​ಎಸ್​ಎಸ್ ಶಿಬಿರ ಹೇಗಿರುತ್ತೆ ಎಂಬುದಕ್ಕೆ ಕಾಲೇಜೊಂದರ ಉದಾಹರಣೆ ಇಲ್ಲಿದೆ. ಪೂರ್ವನಿಯೋಜಿತದಂತೆ ಶಿಬಿರದ ಮುನ್ನಾದಿನ ಸಂಜೆಯೇ ಹೊನ್ನುಡಿಕೆ ಗ್ರಾಮಕ್ಕೆ ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಿಂದ ಎನ್​ಎಸ್​ಎಸ್ ಘಟಕ ತೆರಳಿತು. ಆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಬಿರಾರ್ಥಿಗಳೊಂದಿಗೆ ಕಾಲೇಜಿನ ಎನ್​ಎಸ್​ಎಸ್ ಯೋಜನಾಧಿಕಾರಿ, ಸಹಾಯಕರೂ ವಾಸ್ತವ್ಯ ಹೂಡಿದರು. ರಾತ್ರಿ ಎಲ್ಲರೂ ಊಟ ಮಾಡಿದ ಬಳಿಕ 7 ದಿನ ನಡೆಯುವ ಶಿಬಿರಕ್ಕೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ 7 ತಂಡ ರಚಿಸಿ ಎಲ್ಲ ತಂಡಕ್ಕೂ ಕವಿಗಳ ಹೆಸರನ್ನು ಇಡಲಾಯಿತು. ಪ್ರತಿ ತಂಡಕ್ಕೂ ಒಬ್ಬ ಲೀಡರ್ ನೇಮಿಸಲಾಯಿತು. ಶಾಲೆಯ ಕೊಠಡಿಯಲ್ಲಿ ಚಾಪೆ ಮೇಲೆಯೇ ನಿದ್ರೆಗೆ ಜಾರಿದರು. ಮುಂಜಾನೆ 5ಕ್ಕೆ ಸೀನಿಯರ್ಸ್ ಪೀಪಿ ಊದುತ್ತ ಬಾಗಿಲು ಬಡಿಯುವ ಶಬ್ದಕ್ಕೆ ಎಲ್ಲರೂ ಕ್ಷಣ ಮಾತ್ರದಲ್ಲೇ ಎನ್​ಎಸ್​ಎಸ್ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರ್. ಎನ್​ಎಸ್​ಎಸ್ ಗೀತೆಯ ಮೊದಲ ಸಾಲು ಹೇಳುತ್ತಿದ್ದಂತೆ ನಿದ್ರೆ ಮಾಯ. ಶ್ರಮದಾನವಷ್ಟೇ ಗುರಿ. ತಿಂಡಿ ಬಳಿಕ ಗುದ್ದಲಿ, ಹಾರೆ ಹಿಡಿದು ಹೊರಟ ಶಿಬಿರಾರ್ಥಿಗಳು ಆಯಾ ತಂಡಗಳಿಗೆ ಸೂಚಿಸುವ ಸ್ಥಳಗಳಲ್ಲಿ ಶ್ರಮದಾನ ಶುರುಮಾಡಿದರು.

ಕೆಲಸದ ಬಳಿಕ ಹುಡುಗರು ತೋಟಗಳಲ್ಲಿನ ಬಾವಿ, ಬೋರ್​ವೆಲ್, ಕೆರೆಯತ್ತ ಸ್ನಾನಕ್ಕೆ ಹೊರಟರು. ಯುವತಿಯರಿಗೆ ಗ್ರಾಮಸ್ಥರ ಮನೆಗಳಲ್ಲೇ ಸ್ನಾನದ ವ್ಯವಸ್ಥೆ ಆಗಿತ್ತು. ಸಂಜೆ 6 ಗಂಟೆಯೊಳಗೆ ಧ್ವಜಾರೋಹಣ ನೆರವೇರಿತು. ಸಂಜೆ 7-10ಗಂಟೆವರೆಗೂ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಗಣ್ಯರು, ಗ್ರಾಮಸ್ಥರೂ ಸಾಕ್ಷಿಯಾದರು. ಹೀಗೆ 7 ದಿನಗಳ ಶಿಬಿರ ಇರುತ್ತದೆ.

ಉತ್ತಮ ತಂಡಕ್ಕಾಗಿ ಪೈಪೋಟಿ: ಶಿಬಿರದಲ್ಲಿ ತಂಡಗಳ ನಡುವೆ ಬೆಸ್ಟ್ ಟೀಂ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತದೆ. ಶ್ರಮದಾನ, ಅಡುಗೆ, ಕಲ್ಚರಲ್ ವಿಭಾಗದಲ್ಲಿ ಪ್ರತ್ಯೇಕವಾಗಿ ಬೆಸ್ಟ್ ಟೀಂ ಅವಾರ್ಡ್ ಅನ್ನು ಕಾಲೇಜು ವಾರ್ಷಿಕೋತ್ಸವದಲ್ಲಿ ಕೊಡಲಾಗುತ್ತದೆ. ಹಾಗಾಗಿ ಎನ್ನೆಸ್ಸೆಸ್ ಶಿಬಿರಾರ್ಥಿಗಳು ನಮ್ಮ ತಂಡವೇ ವಿನ್ ಆಗಬೇಕೆಂಬ ಗುರಿಯೊಂದಿಗೂ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಾರೆ.

ಎನ್​ಎಸ್​ಎಸ್ ಹಿನ್ನೆಲೆ: 1969ರ ಸೆಪ್ಟೆಂಬರ್ 24ರಂದು ಭಾರತದಲ್ಲಿ ಎನ್​ಎಸ್​ಎಸ್ ಆರಂಭವಾಯಿತು. ದೇಶದಲ್ಲಿ ಮಹಾತ್ಮ ಗಾಂಧಿ ಕಂಡ ಗ್ರಾಮ ಸ್ವ-ರಾಜ್ಯದ ಕನಸಿನ ಪ್ರತಿಫಲವೇ ರಾಷ್ಟ್ರೀಯ ಸೇವಾ ಯೋಜನೆ ರೂಪುಗೊಂಡಿತು. ಆರಂಭದಲ್ಲಿ 40,000 ವಿದ್ಯಾರ್ಥಿಗಳಿದ್ದ ಈ ಯೋಜನೆ ಪ್ರಸ್ತುತ ಒಂದೊಂದು ವಿಶ್ವವಿದ್ಯಾನಿಲಯಗಳಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ವರ್ಷವಿಡೀ ಸ್ವಚ್ಛತಾ ಕಾರ್ಯ ಕೈಕೊಳ್ಳುವಲ್ಲೇ ನಿರತವಾಗಿದೆ ಘಟಕ. ಒಂದು ಘಟಕ ಎಂದರೆ 100 ವಿದ್ಯಾರ್ಥಿ ಸ್ವಯಂ ಸೇವಕರು ಇರುತ್ತಾರೆ. ಇವರಿಗೆ ಒಬ್ಬರು ಯೋಜನಾಧಿಕಾರಿ ಇರುತ್ತಾರೆ. ಎನ್​ಎಸ್​ಎಸ್ ಕ್ಯಾಂಪ್ ಮೊದಲು ಹತ್ತು ದಿನ ಕಾಲ ನಡೆಯುತ್ತಿತ್ತು. ಆರು ವರ್ಷದಿಂದ ಒಂದು ವಾರಕ್ಕೆ ಸೀಮಿತಗೊಳಿಸಲಾಗಿದೆ

ವೇದಿಕೆ ಸಿಂಗಾರವೇ ಸವಾಲು

ಸರದಿಯಂತೆ ಆಯಾ ತಂಡ ಒಂದು ದಿನ ವೇದಿಕೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಳ್ಳುತ್ತದೆ. ಧ್ವಜಸ್ತಂಭದ ಬಳಿ ರಂಗೋಲಿ, ಹೂವು, ಬಾಳೆಕಂಬ, ತೆಂಗಿನಗರಿ, ಬಣ್ಣಬಣ್ಣದ ಕಾಗದ ಬಳಸಿ ಮದುವಣಗಿತ್ತಿಯಂತೆ ಸಿಂಗರಿಸಲಾಗುತ್ತದೆ. ಸಂಜೆ ವೇದಿಕೆ ಕಾರ್ಯಕ್ರಮದಲ್ಲೂ ಕೆಲ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನಡೆಸಿಕೊಡಬೇಕು. ಇದು ಪ್ರತಿಯೊಬ್ಬರಲ್ಲೂ ಸ್ಟೇಜ್​ಪಿಯರ್ ಹೋಗಲಾಡಿಸುತ್ತದೆ.

ಆರ್​ಡಿ ಪರೇಡ್​ಗೆ ಆಯ್ಕೆ

ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಆರ್​ಡಿ(ಗಣರಾಜ್ಯೋತ್ಸವ) ಪರೇಡ್​ನಲ್ಲಿ ದೇಶಾದ್ಯಂತ ಎನ್​ಎಸ್​ಎಸ್​ನಿಂದ ಒಂದು ತಂಡ ಪಾಲ್ಗೊಳ್ಳಲಿದೆ. ಹಂತ ಹಂತವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನಮ್ಮ ರಾಜ್ಯದಿಂದಲೂ ಮೂರ್ನಾಲ್ಕು ಮಂದಿ ಆಯ್ಕೆಯಾಗುತ್ತಾರೆ. ಪಥಸಂಚಲನ ಮುಗಿದ ಬಳಿಕ/ಮರುದಿನ ರಾಷ್ಟ್ರಪತಿಯೊಂದಿಗೆ ಚಹಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವೂ ಇದೆ. ಇದೇ ರೀತಿ ರಾಜ್ಯ ರಾಜಧಾನಿಯಲ್ಲಿ ನಡೆಯುವ ಆರ್​ಡಿ ಪರೇಡ್​ಗಳಿಗೂ ಎನ್​ಎಸ್​ಎಸ್ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಸಾಂಸ್ಕೃತಿಕ ಪ್ರತಿಭಾವಂತರು, ಉತ್ತಮ ಪಥಸಂಚಲನ ಮಾಡುವ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಇನ್ನು ಪ್ರತಿವರ್ಷ ಇತರೆ ರಾಜ್ಯಕ್ಕೂ ಆಯ್ದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಚಟುವಟಿಕೆಯಡಿ ಹೋಗಲು ಅವಕಾಶವಿರುತ್ತದೆ. ಇದೆಲ್ಲದರ ಖರ್ಚು ವೆಚ್ಚ ಎನ್​ಎಸ್​ಎಸ್​ನದ್ದೇ. ಕಾಲೇಜಿನಲ್ಲಿ 3 ವರ್ಷ ಎನ್​ಎಸ್​ಎಸ್​ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ(ಹೆಚ್ಚುವರಿ ಪಾಯಿಂಟ್ಸ್) ಎನ್​ಎಸ್​ಎಸ್ ನೆರವಾಗಲಿದೆ. ಉದಾಹರಣೆಗೆ ಸ್ನಾತಕೋತ್ತರ ಪದವಿಗೆ ಎನ್​ಎಸ್​ಎಸ್ ಕೋಟಾದಡಿ ಒಂದು ಸೀಟ್ ಪಡೆಯಬಹುದು. ಅಂದಹಾಗೆ ಇಲ್ಲಿ ಸೇವೆ ಹಿರಿತನವನ್ನು ಪರಿಗಣಿಸಿ ಆಯ್ಕೆ ಸಮಿತಿಯು ಅರ್ಹರಿಗೆ ಸೀಟ್ ಕೊಡಮಾಡುತ್ತದೆ.

ಎಂಎಸ್​ಡಬ್ಲ್ಯು ಸೀಟ್ ದಕ್ಕಿತು

ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದುವಾಗ ಮೂರು ವರ್ಷವೂ ಎನ್​ಎಸ್​ಎಸ್​ನಲ್ಲಿದ್ದೆ. ವಾರ್ಷಿಕ ಶಿಬಿರಗಳಲ್ಲೂ ಪಾಲ್ಗೊಂಡೆ. ಎಂಎಸ್​ಡಬ್ಲ್ಯು ಸೇರಲು ತುಮಕೂರು ವಿವಿಗೆ ಅರ್ಜಿ ಹಾಕಿದ್ದೆ. ಮೆರಿಟ್ ಸೀಟ್ ಸಿಗಲಿಲ್ಲ, ಕೊನೆಗೆ ನೆರವಾಗಿದ್ದು ಎನ್​ಎಸ್​ಎಸ್. ಎನ್​ಎಸ್​ಎಸ್ ಕೋಟಾದಡಿ ಸೀಟ್ ಪಡೆಯಲು ತೀವ್ರ ಪೈಪೋಟಿ ಇತ್ತು. ಆದರೆ ದ್ವಿತೀಯ ಬಿಎ ಓದುವಾಗಲೇ ಎನ್​ಎಸ್​ಎಸ್​ನಿಂದ ರಾಜ್ಯಮಟ್ಟದ ಆರ್​ಡಿ ಪರೇಡ್(ಬೆಂಗಳೂರಿನ ಮಾಣಿಕ್ ಷಾ ಮೈದಾನ)ನಲ್ಲಿ ಪಾಲ್ಗೊಂಡಿದ್ದೆ. ಅಲ್ಲದೆ, ಉಡುಪಿಯಲ್ಲಿ ಪೂರ್ವ ಆರ್​ಡಿ ಕ್ಯಾಂಪ್​ನಲ್ಲೂ ಪಾಲ್ಗೊಂಡಿದ್ದೆ. ಹಾಗಾಗಿ ನನಗೆ ಹೆಚ್ಚುವರಿ 40 ಅಂಕ ಬಂದಿತ್ತು. ನನ್ನಿಷ್ಟದ ಎಂಎಸ್​ಡಬ್ಲ್ಯು ಫ್ರೀ ಸೀಟ್ ಎನ್​ಎಸ್​ಎಸ್ ಕೋಟಾದಡಿ ಸಿಕ್ಕಿತು. ಆರ್​ಡಿ ಪಥಸಂಚಲನಕ್ಕಾಗಿನ ಸಿದ್ಧತೆಯಲ್ಲಿಯೇ ಶಿಸ್ತು ಮೈಗೂಡಿತು. ರಾಜ್ಯಪಾಲರೊಂದಿಗೆ ಕಾಫಿ ಪಾರ್ಟಿ, ಫೋಟೋಶೂಟ್ ಒಳ್ಳೆಯ ಅನುಭವ.

| ಸಂತೋಷ್ ಎಂ.ಕೆ. ತುಮಕೂರು.

Leave a Reply

Your email address will not be published. Required fields are marked *