Wednesday, 12th December 2018  

Vijayavani

Breaking News

ಕಾರ್ಮೋಡ ಸರಿಯಲಿ

Tuesday, 17.04.2018, 3:05 AM       No Comments

ಸಿರಿಯಾದಲ್ಲಿ ಅಲ್ ಅಸದ್ ಸರ್ಕಾರ ತನ್ನದೇ ಪ್ರಜೆಗಳ ಮೇಲೆ ರಾಸಾಯನಿಕ ಅಸ್ತ್ರಗಳಿಂದ ದಾಳಿ ನಡೆಸಿದ ಪ್ರಕರಣ ಈಗ ಜಾಗತಿಕ ಕಳವಳಕ್ಕೆ ಕಾರಣವಾಗಿದೆ. ಸಿರಿಯಾ ಸರ್ಕಾರದ ಕ್ರಮಕ್ಕೆ ಪ್ರತೀಕಾರವಾಗಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ಆ ದೇಶದ ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಿವೆ. ಈ ಕ್ರಿಯೆ-ಪ್ರತಿಕ್ರಿಯೆಗಳು ಅಮೆರಿಕ ಹಾಗೂ ರಷ್ಯಾ ನಡುವೆ ಛಾಯಾಸಮರಕ್ಕೆ ಕಾರಣವಾಗಿ, ಅಂತಿಮವಾಗಿ ವಿಶ್ವದ ಮೇಲೆ ಮೂರನೇ ಮಹಾಯುದ್ಧದ ಆತಂಕ ಕವಿಯಬಹುದೇ ಎಂಬ ಊಹೆಗಳು ವ್ಯಕ್ತವಾಗಿದ್ದವು. ಸದ್ಯಕ್ಕೆ ಆ ಸಾಧ್ಯತೆ ಸ್ವಲ್ಪ ಕ್ಷಿಣಿಸಿದಂತೆ ಕಂಡರೂ, ಹೆಡೆ ತುಳಿದ ಹಾವಿನಂತಾಗಿರುವ ರಷ್ಯಾದ ಮನದಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.

ಸಿರಿಯಾದಲ್ಲಿ ಅಲ್ ಅಸದ್ ಸರ್ಕಾರ ಹಾಗೂ ಬಂಡುಕೋರರ ನಡುವೆ ಹಲವು ದಿನಗಳಿಂದ ಘರ್ಷಣೆ ನಡೆಯುತ್ತಿದ್ದು, ವಿಶ್ವದ ಹಲವು ದೇಶಗಳು ಒಂದೊಂದು ಬಣಗಳಲ್ಲಿ ಗುರುತಿಸಿಕೊಂಡಿವೆ. ಅಮೆರಿಕ ಮತ್ತದರ ಸಹಯೋಗಿಗಳು ಬಂಡುಕೋರರ ಗುಂಪುಗಳಿಗೆ ಬೆಂಬಲ ನೀಡುತ್ತಿದ್ದರೆ, ರಷ್ಯಾ ಅಧ್ಯಕ್ಷ ಅಸದ್ ಬೆನ್ನಿಗೆ ನಿಂತಿದೆ. ಹೀಗಾಗಿ ಸಿರಿಯಾ ನೆಪದಲ್ಲಿ ವಿಶ್ವದ ಹಲವು ದೇಶಗಳು ಇಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಹವಣಿಸುತ್ತಿವೆ. ಜನರ ಮೇಲೆ ರಾಸಾಯನಿಕ ಅಸ್ತ್ರಗಳಿಂದ ದಾಳಿ ಮಾಡಿಲ್ಲ ಎಂದು ಅಸದ್ ಸರ್ಕಾರವೇನೋ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಆ ಮಾತು ನಂಬಲರ್ಹವಾಗಿಲ್ಲ. ಈ ಹಿಂದೆಯೂ ಸಿರಿಯಾ ಸರ್ಕಾರದ ಮೇಲೆ ಇಂಥ ಆಪಾದನೆಗಳು ಬಂದಿದ್ದಿದೆ. ಅಂತಿಮವಾಗಿ, ಅಮೆರಿಕ ಮಿತ್ರಪಡೆ ಕ್ಷಿಪಣಿ ದಾಳಿ ಮೂಲಕ ಅಸದ್​ಗೆ ಬುದ್ಧಿ ಕಲಿಸಲು ಮುಂದಾಗಿದೆ. ಈ ಒಟ್ಟಾರೆ ಪ್ರಸಂಗದಲ್ಲಿ ರಷ್ಯಾ ಎರಡು ಬಗೆಗಳಲ್ಲಿ ಮುಖಭಂಗ ಅನುಭವಿಸಿದೆ. ಮೊದಲನೆಯದಾಗಿ- ಸಿರಿಯಾ ಮೇಲೆ ಕ್ಷಿಪಣಿ ದಾಳಿಯಾಗದಂತೆ ತಡೆಯುವಲ್ಲಿ ಸೋತಿದೆ. ಎರಡನೆಯದಾಗಿ- ಈ ದಾಳಿಗೆ ಮುನ್ನ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಿ ಅಲ್ಲಿ ಅನುಮೋದನೆ ಪಡೆದಿಲ್ಲ ಎಂದು ವಾದಿಸಿ, ಅಮೆರಿಕ ಮತ್ತು ಮಿತ್ರಪಡೆ ದಾಳಿಯನ್ನು ಖಂಡಿಸುವ ನಿಲುವಳಿ ಮಂಡಿಸಿತ್ತು. ಆದರೆ ಭದ್ರತಾ ಮಂಡಳಿಯಲ್ಲಿ ಹಾಜರಿದ್ದ ದೇಶಗಳ ಪೈಕಿ ಚೀನಾ ಮತ್ತು ಬೊಲಿವಿಯಾ ಮಾತ್ರ ರಷ್ಯಾ ನಿಲುವಿಗೆ ಬೆಂಬಲ ಸೂಚಿಸಿದ್ದರಿಂದ ಖಂಡನಾ ನಿರ್ಣಯಕ್ಕೆ ಸೋಲಾಯಿತು.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಸೋವಿಯೆತ್ ಯೂನಿಯನ್ನಿನ ಗತವೈಭವವನ್ನು ಮರಳಿ ಪ್ರತಿಷ್ಠಾಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಜಾಗತಿಕ ರಾಜಕಾರಣದಲ್ಲಿ ದಾಳಗಳನ್ನು ಉರುಳಿಸುತ್ತಿದ್ದಾರೆ. ಆದರೆ ಯುಎಸ್​ಎಸ್​ಆರ್ ಛಿದ್ರವಾದ ನಂತರದಲ್ಲಿ ರಷ್ಯಾ ಬಳಿ ಮೊದಲಿನ ಶಕ್ತಿ ಉಳಿದಿಲ್ಲ. ಆರ್ಥಿಕವಾಗಿಯೂ ಅದು ಹೈರಾಣಾಗಿದೆ. ಹೀಗಾಗಿ ಪುತಿನ್ ಎಷ್ಟೇ ಉತ್ಸಾಹಿಯಾಗಿದ್ದರೂ ಜಾಗತಿಕವಾಗಿ ಅಂಥ ತಾಕತ್ತು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರಿದಂತೆ ಈಗ ಸಿರಿಯಾ ವಿಷಯದಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ. ರಷ್ಯಾವು ಅಮೆರಿಕದ ಕ್ರಮಕ್ಕೆ ದೊಡ್ಡಮಟ್ಟದಲ್ಲಿಯೇ ಉತ್ತರ ನೀಡಲು ಯೋಜಿಸುತ್ತಿದೆ ಎಂಬ ವರದಿಗಳೂ ಇದ್ದು, ಇದೇನಾದರೂ ನಿಜವಾಗಿದ್ದಲ್ಲಿ ಕಳವಳಕಾರಿಯೇ ಸರಿ. ಇದೇನೇ ಇದ್ದರೂ, ಬಲಿಷ್ಠ ದೇಶಗಳು ಮೂರನೇ ದೇಶವನ್ನು ತಮ್ಮ ದಾಳಕ್ಕೆ ವೇದಿಕೆಯಾಗಿ ಬಳಸುವುದನ್ನು ಬಿಟ್ಟು, ಜಾಗತಿಕ ಶಾಂತಿ ನಿಟ್ಟಿನಲ್ಲಿ ಆಲೋಚಿಸಿದರೆ ಸಮಸ್ಯೆಗಳು ಪರಿಹಾರ ಕಂಡಾವು. ಅಂಥ ವಿವೇಚನೆ ಆಳುಗರಿಗೆ ಬರಲೆಂಬುದೇ ಆಶಯ.

Leave a Reply

Your email address will not be published. Required fields are marked *

Back To Top