ಕಾರ್ಮಿಕ ಕಾನೂನು ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ: ಅನ್ನಭಾಗ್ಯ ಯೋಜನೆ ಜಾರಿ ಸಂದರ್ಭದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡದಿರುವುದನ್ನು ಖಂಡಿಸಿ ಶ್ರಮಿಕ ಶಕ್ತಿ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿಗೆ ತೆರಳಿ ಧರಣಿ ನಡೆಸಿದ ಪ್ರತಿಭಟನಾಕಾರರು, ಅನ್ನಭಾಗ್ಯ ಯೋಜನೆಯನ್ನು ಆಹಾರ ನಿಗಮದ ಗೋದಾಮುಗಳಿಂದ ಪಡಿತರ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವಲ್ಲಿ ಹಮಾಲಿಗಳ ಪಾತ್ರ ಮಹತ್ವದ್ದಾಗಿದೆ.

2015ರಿಂದಲೇ ಕಾರ್ಮಿಕ ಕಾನೂನುಗಳು ಜಾರಿಯಲ್ಲಿದ್ದರೂ, ಜಿಲ್ಲೆಯಲ್ಲಿ ಇದುವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. ಲೋಡಿಂಗ್, ಅನ್‌ಲೋಡಿಂಗ್ ಮಾಡುವ ಹಮಾಲಿಗಳಿಗೆ ಗುತ್ತಿಗೆದಾರರು ಕಿರುಕುಳ ನೀಡುವುದು, ಕಡಿಮೆ ಕೂಲಿ ಕೊಡುವುದಲ್ಲದೆ, ಶೇ.13.75ರಷ್ಟು ಇಎಸ್‌ಐ, ಪಿಎಫ್ ವಂತಿಗೆಗೂ ಕಾರ್ಮಿಕರ ವೇತನದಲ್ಲೇ ಶೇ.32ರಷ್ಟು ವಂತಿಗೆ ಕಡಿತ ಮಾಡುತ್ತಿದ್ದಾರೆ.

ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮತ್ತು ಕಿರುಕುಳ ಬಗೆಹರಿಸಲು ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಬೇಕು. ತಮ್ಮ ಅಧ್ಯಕ್ಷತೆಯಲ್ಲೇ ಇಎಸ್‌ಐ, ಪಿಎಫ್, ಕಾರ್ಮಿಕ ಅಧಿಕಾರಿಗಳು, ಆಹಾರ ಇಲಾಖೆ ಉಪ ನಿರ್ದೇಶಕರು ಮತ್ತು ಕಾರ್ಮಿಕ ಪ್ರತಿನಿಧಿಗಳ ಜಂಟಿ ಸಭೆ ಕರೆಯುವಂತೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಆಹಾರ ನಿಗಮ ಗೋದಾಮುಗಳಿಂದ ಆಹಾರ ಧಾನ್ಯಗಳ ಎತ್ತುವಳಿ ಮಾಡಲು ಟೆಂಡರ್ ಅಂತಿಮವಾಗಿದ್ದು, ಕಳೆದ ನವೆಂಬರ್ ತಿಂಗಳಿನಿಂದಲೇ ಲೋಡಿಂಗ್ ಮತ್ತು ಅನ್‌ಲೋಡಿಂಗ್ ದರ ಕ್ವಿಂಟಾಲ್‌ಗೆ 16ರೂ. ನಿಗದಿಯಾಗಿದೆ. ಆದರೆ, ಮಂಡ್ಯ, ಶ್ರೀರಂಗಪಟ್ಟಣ ತಾಲೂಕುಗಳಿಗೆ ಇನ್ನೂ ಟೆಂಡರ್ ಬಿಡ್ ಅಂತಿಮಗೊಂಡಿಲ್ಲ.

ಆ ತಾಲೂಕುಗಳಲ್ಲಿ ಹಳೆಯ ದರ ಕ್ವಿಂಟಾಲ್‌ಗೆ 14ರೂ. ಮುಂದುವರಿಯುತ್ತಿದೆ. ಆ ತಾಲೂಕಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚಳವಾದ ದರ ಸಿಗದೆ ಅನ್ಯಾಯವಾಗುತ್ತಿದೆ. ಆದ್ದರಿಂದ ಟೆಂಡರ್ ಅಂತಿಮಗೊಳಿಸಬೇಕು. ಅಥವಾ ಕೂಲಿ ದರ ಹೆಚ್ಚಿಸಬೇಕು. ಪರಿಷ್ಕೃತ ದರವನ್ನು 2018ರ ಡಿಸೆಂಬರ್‌ನಿಂದಲೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ವರದರಾಜೇಂದ್ರ, ರಾಜ್ಯ ಖಜಾಂಚಿ ನರಸಿಂಹ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ದೇವರಾಜು, ಮುತ್ತಯ್ಯ, ಪುಟ್ಟಸ್ವಾಮಿ, ಪ್ರಕಾಶ್, ಗೋವಿಂದರಾಜು, ಸುನೀಲ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *