ಬೆಳಗಾವಿ: ಕಟ್ಟಡ ಕಾರ್ಮಿಕರು, ಇತರ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ. ಸರ್ಕಾರದ ಸೌಲಭ್ಯಗಳು ಕಾರ್ಮಿಕರಿಗೆ ತ್ವರಿತವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಶುಕ್ರವಾರ ಬೆಳಗಾವಿಯ ಉಪಕಾರ್ಮಿಕ ಆಯುಕ್ತರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ರವಾನಿಸಲಾಯಿತು.
ತಾಲೂಕಿನ ಕಡೋಲಿಯಿಂದ ಉಪಕಾರ್ಮಿಕ ಆಯುಕ್ತರ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಕಾರ್ಡ್ಗಳಿಗಾಗಿ ಹಾಕಿದ ಅರ್ಜಿಗಳು ತ್ವರಿತವಾಗಿ ವಿತರಣೆಯಾಗುತ್ತಿಲ್ಲ. ಇದರಿಂದ ಸಕಾಲಕ್ಕೆ ಕಾರ್ಮಿಕರಿಗೆ ಸೌಲಭ್ಯ ದೊರೆಯುತ್ತಿಲ್ಲ. ಕಾರ್ಮಿಕರ ಕಾರ್ಡ್ನಿಂದ ಶಿಕ್ಷಣ ಸೌಲಭ್ಯ, ಮದುವೆಗೆ ಸಹಾಯಧನ, ಬಸ್ಪಾಸ್, ಕಾರ್ಮಿಕರ ಕಿಟ್ಗಳು ಹಾಗೂ ಇನ್ನಿತರ ಯಾವುದೇ ಸಹಾಯಧನಗಳು ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಕಾರ್ಡ್ಗಳಿಗಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಬೇಗ ವಿಲೇವಾರಿ ಮಾಡಿ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಸೋಮನಾಥ ನಾಗೋಜಿ ಪಾಟೀಲ, ಗೊರಕ ನಾಗೋಜಿ ಡೌರಿ, ಹಿರಾಮನಿ ಹೊಣಗೇಕರ, ಈರಪ್ಪ ಪಾಟೀಲ, ಕಲ್ಲಪ್ಪ ನಾರಾಯಣ ಪಾಟೀಲ ಹಾಗೂ ವಕೀಲ ಎನ್.ಬಿ. ಲಾತೂರ, ಸುಜಿತ್ ಮುಳಗುಂದ, ಶಿವಾಜಿ ಕಾಗಣಕರ ಇತರರಿದ್ದರು.