ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿ

ತೀರ್ಥಹಳ್ಳಿ: ಪಟ್ಟಣದ ಕೇಂದ್ರ ಭಾಗದಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್​ನಲ್ಲಿ ಕಾರಿಗೆ ಫುಲ್​ಟ್ಯಾಂಕ್ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾದ ಕೃತ್ಯ ಗುರುವಾರ ನಸುಕಿನಲ್ಲಿ ಸಂಭವಿಸಿದೆ.

ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರಿಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್​ನಲ್ಲಿ ಬೆಳಗಿನ ಜಾವ 4.45ರ ಅಂದಾಜಿಗೆ ಸಿಮೆಂಟ್ ಗ್ರೇ ಬಣ್ಣದ ಇನ್ನೋವಾ ಕಾರಿನಲ್ಲಿ ಬಂದವರು ಟ್ಯಾಂಕ್ ಫುಲ್ ಮಾಡುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ತಿಳಿಸಿದ್ದಾರೆ. 3,400 ರೂ. ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೇ ಪರಾರಿಯಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಪಾನಮತ್ತರಾಗಿದ್ದಾರು ಎಂದು ಸಿಬ್ಬಂದಿ ತಿಳಿಸಿದ್ದಾರೆ. ಕುವೆಂಪು ವೃತ್ತದವರೆಗೆ ಬಂದ ಈ ಕಾರು ನಂತರ ವಾಪಸ್ ತಿರುಗಿ ವೇಗವಾಗಿ ಶಿವಮೊಗ್ಗದತ್ತ ಹೋಗಿದೆ. ಕಾರಿನ ಹಿಂಭಾಗ ನಂಬರ್ ಪ್ಲೇಟ್ ಇರಲಿಲ್ಲ. ಈ ಬಗ್ಗೆ ಮಾಳೂರು ಮತ್ತು ಶಿವಮೊಗ್ಗ ತುಂಗಾ ಪೊಲೀಸ್ ಠಾಣೆಯ ಕಂಟ್ರೋಲ್ ರೂಂಗೆ ತಿಳಿಸಲಾಗಿತ್ತು. ಆದರೆ ಆರೋಪಿಗಳು ಪತ್ತೆಯಾಗಿಲ್ಲ.