ಕಾರಿಗಾಗಿ ಚಾಲಕನ ಬರ್ಬರ ಹತ್ಯೆ

ನೆಲಮಂಗಲ: ಪಟ್ಟಣದ ಹೊರವಲಯದಲ್ಲಿ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ವೇಳೆ ಪೊಲೀಸ್ ಅಧಿಕಾರಿ ಮೇಲೆಯೇ ಹಲ್ಲೆ ಮಾಡಲು ಮುಂದಾದ ಇಬ್ಬರು ಆರೋಪಿಗಳ ಮೇಲೆ ಆತ್ಮ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿದೆ.

ತಾಲೂಕಿನ ವಾಜರಹಳ್ಳಿ ವಿನೋದ್​ಕುಮಾರ್ (24), ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಹೇಮಂತ್​ಸಾಗರ್ (23) ಬಂಧಿತರು. ಗುಂಡೇಟು ತಿಂದಿರುವ ಆರೋಪಿಗಳು ಮತ್ತು ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಬ್​ಇನ್​ಸ್ಪೆಕ್ಟರ್ ನವೀನ್​ಕುಮಾರ್ ಅವರನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 19 ರಂದು ತಾಲೂಕಿನ ಮಲ್ಲರಬಾಣವಾಡಿಯ ಗುಂಡುತೋಪಿನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ, ಸುಟ್ಟಿರುವುದು ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಬೆಂಗಳೂರು ನಗರ ವ್ಯಾಪ್ತಿಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದ ನೆಲಮಂಗಲ ಪೊಲೀಸರಿಗೆ ಬೆಂಗಳೂರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಮಾಹಿತಿ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದ ಮೇಲೆ ಇನ್​ಸ್ಪೆಕ್ಟರ್ ಅನಿಲ್​ಕುಮಾರ್, ಪಿಎಸ್​ಐ ನವೀನ್​ಕುಮಾರ್, ಶಂಕರ್​ನಾಯಕ್ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚಿಸಿ, ಕಾಣೆಯಾದ ವ್ಯಕ್ತಿಯ ಮೊಬೈಲ್ ಕರೆಯನ್ನಾಧರಿಸಿ ಆರೋಪಿಗಳ ಶೋಧ ಆರಂಭಿಸಲಾಗಿತ್ತು. ತನಿಖೆಯಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದ ಕೆಂಪೇಗೌಡ ಅವರದ್ದೇ ಎಂದು ದೃಢಪಟ್ಟಿತ್ತು.

ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಕೋಟಗುಡ್ಡ ಗ್ರಾಮದ ಕೆಂಪೇಗೌಡ(38) ಕಾರು ಖರೀದಿಸಿ, ಬಾಡಿಗೆಗೆ ಓಡಿಸುತ್ತಿದ್ದರು. ಶನಿವಾರ, ಭಾನುವಾರ ದೂರದ ಊರುಗಳಿಗೆ ಬಾಡಿಗೆ ಹೋಗುತ್ತಿದ್ದರು. ಮೇ 18 ಶನಿವಾರ ಪ್ರವಾಸದ ನೆಪದಲ್ಲಿ ಕಾರು ಬಾಡಿಗೆ ಪಡೆದ ಆರೋಪಿಗಳು ನಗರ ಹೊರವಲಯದಲ್ಲಿ ಕಾರು ಚಾಲಕ ಕೆಂಪೇಗೌಡ ಅವರ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿ, ನೀಲಗಿರಿ ತೋಪಿನಲ್ಲಿ ಮೃತದೇಹ ಸುಟ್ಟು ಪರಾರಿಯಾಗಿದ್ದರು.

ಆರೋಪಿಗಳು ಸೋಮವಾರ ರಾತ್ರಿ ಬೆಂಗಳೂರು ಉತ್ತರ ತಾಲೂಕು ಸೊಂಡೆಕೊಪ್ಪದ ಮಾರ್ಗದಿಂದ ನೆಲಮಂಗಲ ಕಡೆಗೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಗಣೇಶನ ಗುಡಿ ಬಳಿ ಕಾದುಕುಳಿತಿದ್ದರು. ಬುಲೆಟ್​ನಲ್ಲಿ ಬರುತ್ತಿದ್ದ ಆರೋಪಿಗಳನ್ನು ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಪಿಎಸ್​ಐ ನವೀನ್​ಕುಮಾರ್ ಹಿಂಬಾಲಿಸಿಕೊಂಡು ಆರೋಪಿ ಹೇಮಂತಕುಮಾರ್ ನನ್ನು ಹಿಡಿಯಲು ಹೋದಾಗ ಡ್ಯಾಗರ್​ನಿಂದ ಹಲ್ಲೆ ಮಾಡಿದ್ದಾನೆ. ಎಚ್ಚೆತ್ತ ಇನ್ಸ್​ಪೆಕ್ಟರ್ ಅನಿಲ್​ಕುಮಾರ್ ಮೂರು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರೂ ಮತ್ತೆ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದ ವೇಳೆ ಇಬ್ಬರ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಡಕುಟುಂಬದಿಂದ ಬಂದಿದ್ದ ಮೃತ ಕೆಂಪೇಗೌಡ ಬ್ಯಾಂಕಿನಲ್ಲಿ ಸಾಲಮಾಡಿ ಕಾರು ಖರೀದಿಸಿದ್ದು ಪತ್ನಿ ಮಕ್ಕಳು ಹಾಗೂ ಪಾಲಕರೊಂದಿಗೆ ಬಂದು ಬೆಂಗಳೂರಿನ ಹೆಬ್ಬಗೋಡಿಯಲ್ಲಿ ವಾಸವಿದ್ದರು. ಕೆಂಪೆಗೌಡ ಅವರಿಗೆ ಪತ್ನಿ, 5 ಮತ್ತು 3 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 7 ತಿಂಗಳ ಗಂಡುಮಗು ಇದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಭೇಟಿ: ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್​ವಾಸ್ ಸೆಪಟ್ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಜ್ಜಿತ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಪಿಎಸ್​ಐ ನವೀನ್​ಕುಮಾರ್ ಆರೋಗ್ಯ ವಿಚಾರಿಸಿದರು. ಬಳಿಕ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಡಿವೈಎಸ್​ಪಿ ಪಾಂಡುರಂಗ ಇನ್​ಸ್ಪೆಕ್ಟರ್ ಅನಿಲ್​ಕುಮಾರ್ ಮತ್ತಿತರರು ಇದ್ದರು.

ಆರೋಪಿಗಳಿಗಿದೆ ಅಪರಾಧ ಹಿನ್ನೆಲೆ: ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳವು ಮಾಡುತ್ತಿದ್ದ ವಿನೋದ್, ಚೆನ್ನಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಕಾರು ಕದ್ದಿದ್ದ ಹೇಮಂತ್​ಸಾಗರ ರಾಮನಗರ ಜೈಲು ಸೇರಿದ್ದರು. ಈ ವೇಳೆ ಇಬ್ಬರೂ ಸ್ನೇಹಿತರಾಗಿದ್ದು, 3 ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದರು. ಆರೋಪಿ ಹೇಮಂತ್​ಸಾಗರ್ ಕದ್ದ ವಾಹನಗಳನ್ನು ಬಣ್ಣ ಬದಲಿಸಿ ಆಂಧ್ರ ಮತ್ತು ಮುಂಬೈಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.