ಕಾರವಾರ: ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಾರವಾರದ ಸೇಂಟ್ ಮೈಕಲ್ ಹೈಸ್ಕೂಲ್ನ ನಂದಿನಿ ಸಾವಂತ್ ಮೊದಲ, ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯ ಯಶೋಧಾ ನಾಯ್ಕ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಲ್ಲಿನ ಬಾಲಮಂದಿರ ಶಾಲೆಯಲ್ಲಿ ಅಣಕು ಸಂಸತ್ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರವಾರ ಶೈಕ್ಷಣಿಕ ಜಿಲ್ಲೆಯ 5 ತಾಲೂಕುಗಳ 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಕಾಶ್ ನಾಯಕ, ತಾರಾನಾಥ್ ಹರಿಕಂತ್ರ, ರತ್ನಮಾಲಾ ಹೆಗಡೆ ನಿರ್ಣಾಯಕರಾಗಿದ್ದರು. ಶಿಕ್ಷಕರಾದ ಸುರೇಶ ಗಾಂವಕರ, ಎಸ್.ಜಿ. ಶೇರುಗಾರ್, ಮಾರುತಿ ನಾಯಕ ಸಹಕರಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಜ.16 ರಂದು ನಡೆಯುವ ರಾಜ್ಯಮಟ್ಟದ ಅಣಕು ಸಂಸತ್ ಸ್ಪರ್ಧೆಯಲ್ಲಿ ಗೆದ್ದವರು, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಡೆಯುವ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.
ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನ ಇನಿ ಎಂ.ನಾಯ್ಕ ತೃತೀಯ, ಕಾರವಾರದ ಬಾಲಮಂದಿರ ಪ್ರೌಢಶಾಲೆಯ ಸಹನಾ ಗೋವೇಕರ ನಾಲ್ಕನೆಯ ಹಾಗೂ ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯ ಶಶಿಧರ್ ಮಹಾಲೆ ಐದನೇ ಬಹುಮಾನ ಪಡೆದುಕೊಂಡರು. ದೈಹಿಕ ಅಧೀಕ್ಷಕ ಆರ್.ಎಚ್.ನಾಯಕ ಬಹುಮಾನ ವಿತರಿಸಿದರು.
ಅರಿವಿಗಾಗಿ ಸ್ಪರ್ಧೆ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎನ್.ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಸತ್ತಿನ ಬಗೆಗೆ ಅರಿವು ಮೂಡಿಸುವ ಸಲುವಾಗಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಕಲಾಪ ಬಹಿಷ್ಕಾರ
ಅಣಕು ಸಂಸತ್ನಲ್ಲಿ ಮಾತನಾಡಿದ ವಿದ್ಯಾರ್ಥಿಗಳ ಪ್ರೌಢಿಮೆ ಗಮನ ಸೆಳೆಯಿತು. ಮಂತ್ರಿಗಳ ವಿದೇಶ ಪ್ರವಾಸ, ಸಾಲಮನ್ನಾ, ಗೋವಾ ರಾಜ್ಯಕ್ಕೆ ಮೀನು ಬ್ಯಾನ್, 8 ಮೀನುಗಾರರು ಕಣ್ಮರೆ ಮುಂತಾದ ಕರಾವಳಿಯ ಸಮಸ್ಯೆಗಳು ಅಣಕು ಸಂಸತ್ನಲ್ಲಿ ಪ್ರತಿಬಿಂಬಿತವಾದವು. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಹೇರಿಕೆ ವಿಷಯದಲ್ಲಿ ಸದನದಲ್ಲಿ ಕೋಲಾಹಲ ಎದ್ದು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ದಿವಂಗತರಾದ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ, ಜಾಫರ್ ಶರೀಫ್, ಚಿತ್ರನಟ ಮತ್ತು ರಾಜಕಾರಣಿ ಅಂಬರೀಷ್ ಮುಂತಾದ ಮಹನೀಯರಿಗೆ ನುಡಿನಮನದ ಮೂಲಕ ಸಂತಾಪ ಸೂಚಿಸಿ ಅಣಕು ಸಂಸತ್ ಪ್ರದರ್ಶನ ಪ್ರಾರಂಭಿಸಿದರು.