ಕಾರವಾರ ಜಿಲ್ಲೆಯಲ್ಲಿ ಗುಂಡಿ ಗಂಡಾಂತರ

ಕಾರವಾರ: ಜಿಲ್ಲೆಯ ರಸ್ತೆಗಳ ಗುಂಡಿಯ ಗಂಡಾಂತರ ಮಿತಿ ಮೀರಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಾಹನಗಳು ಹಾಳಾಗಿ ಗ್ಯಾರೇಜ್ ಸೇರುತ್ತಿವೆ. ಎರಡು ತಾಸಿನ ದಾರಿ ಕ್ರಮಿಸಲು ಈಗ ಮೂರು ತಾಸು ಹಿಡಿಯುತ್ತಿದೆ.

ರಸ್ತೆ ಅವ್ಯವಸ್ಥೆ ಕುರಿತು ಜನಪ್ರತಿನಿಧಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟೇ ಏಕೆ ಸಾಮಾಜಿಕ ಜಾಲತಾಣಗಳ ಮೂಲಕ ಛೀಮಾರಿ ಹಾಕುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಮಾತ್ರ ಮೌನ ವಹಿಸಿದ್ದಾರೆ.

ಅತಿವೃಷ್ಟಿಯಿಂದ ಜಿಲ್ಲೆಯ ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು, ಸಂಚಾರ ಸಂಕಟ ಎದುರಾಗಿದೆ. ಇದು ಒಂದು ಭಾಗದಲ್ಲಿ ಮಾತ್ರವಲ್ಲ , ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಎಂಬ ಭೇದವಿಲ್ಲದೆ, ಇಡೀ ಜಿಲ್ಲೆಯ ಪರಿಸ್ಥಿತಿ ಇದೇ ಆಗಿದೆ. ರಸ್ತೆ ರಿಪೇರಿಗೆ ಇನ್ನೂ ಮಳೆ ಕಡಿಮೆಯಾಗಿಲ್ಲ. ಇದರಿಂದ ಜನರ ಸಂಕಷ್ಟ ತಪ್ಪುತ್ತಿಲ್ಲ.

ತಾಲೂಕಿನ ಕದ್ರಾದಲ್ಲಿ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಹೊಂಡದಲ್ಲಿ ಗ್ರಾಮಸ್ಥರು ಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ವಿಶೇಷ ಪ್ಯಾಕೇಜ್​ಗೆ ಒತ್ತಾಯ: ಜಿಲ್ಲೆಯಲ್ಲಿ ವ್ಯಾಪಕವಾಗಿ ರಸ್ತೆಗಳು ಹಾಳಾಗಿವೆ. ಆದರೆ, ರಿಪೇರಿಗೆ ಇದುವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅಲ್ಪ ಸ್ವಲ್ಪ ಹಣ ಬಂದಿದೆ. ಇದರಿಂದ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಹಳೆಯ ಲೆಕ್ಕಾಚಾರದಲ್ಲಿ ಅನುದಾನ: ಜಿಲ್ಲೆಯಲ್ಲಿ 22 ಸಾವಿರ ಕಿಮೀ ಗ್ರಾಮೀಣ ರಸ್ತೆಗಳಿವೆ. ಆದರೆ, 3 ವರ್ಷದಿಂದ ಪಂಚಾಯತ್ ರಾಜ್ ಇಲಾಖೆಯ ಲೆಕ್ಕಾಚಾರದಲ್ಲಿ (ಡಿಆರ್​ಆರ್​ಪಿ)ಇನ್ನೂ 10 ಸಾವಿರ ಕಿಮೀ ಇದೆ. ಇದರಿಂದ ರಸ್ತೆ ಅಭಿವೃದ್ಧಿಗೆ ಬರುವ ಅನುದಾನ 3054 ಅಡಿ ಹಳೆಯ ಲೆಕ್ಕಾಚಾರದಲ್ಲೇ ಇರುವುದರಿಂದ ಜಿಲ್ಲೆಗೆ ಹಾನಿಯಾಗುತ್ತಿದೆ.

  • ಎಷ್ಟು ರಸ್ತೆ ಹಾಳು..?
  • ರಾಷ್ಟ್ರೀಯ ಹೆದ್ದಾರಿ -150 ಕಿಮೀ
  • ರಾಜ್ಯ ಹೆದ್ದಾರಿ 158 ಕಿಮೀ
  • ಜಿಲ್ಲಾ ಮುಖ್ಯ ರಸ್ತೆಗಳು 215 ಕಿಮೀ
  • ಗ್ರಾಮೀಣ ರಸ್ತೆಗಳು 1005 ಕಿಮೀ
  • ನಗರ ರಸ್ತೆಗಳು 28 ಕಿಮೀ

ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು

ಕುಮಟಾ ತಾಲೂಕಿನ ದೀವಗಿ ಗ್ರಾಪಂ ವ್ಯಾಪ್ತಿಯ ಬರಗದ್ದೆ ನಾಗರಿಕರು ಶ್ರಮದಾನದ ಮೂಲಕ ರಸ್ತೆ ರಿಪೇರಿ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಎರಡು ಭಾನುವಾರ ಗ್ರಾಮದ 1.5 ಕಿಮೀ ವ್ಯಾಪ್ತಿಯಲ್ಲಿ ಹೊಂಡ ತುಂಬುವ, ರಸ್ತೆ ತುಂಬೆಲ್ಲ ಹರಡಿದ ಬೇಬಿ ಜೆಲ್ಲಿಗಳನ್ನು ಗುಡಿಸಿ ಒಟ್ಟು ಮಾಡುವ ಕಾರ್ಯವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.

ಕಾರವಾರ-ಕುಮಟಾ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಶಿರಸಿ-ಕುಮಟಾ ರಾಜ್ಯ ಹೆದ್ದಾರಿ 69 ಸೇರಿಸುವ ಜಿಲ್ಲಾ ಮುಖ್ಯರಸ್ತೆ ಇದಾಗಿದೆ. ಅಂದಾಜು 4.5 ಕಿಮೀ ರಸ್ತೆಯಲ್ಲಿ 3 ಕಿಮೀ ನವೀಕರಿಸಲಾಗಿದೆ. ಇನ್ನೂ 1.5 ಕಿಮೀ ರಸ್ತೆಯನ್ನು ಹಾಗೇ ಬಿಡಲಾಗಿದ್ದು, ಅದರ ಸ್ಥಿತಿ ಯಾರಿಗೂ ಬೇಡವಾಗಿದೆ. ಶಿರಸಿ-ಕಾರವಾರಕ್ಕೆ ಪ್ರಮುಖ ರಸ್ತೆಯಾಗಿರುವ ಇಲ್ಲಿ ನಿತ್ಯ ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಎರಡು ವಾರದಿಂದ ನಿರಂತರ ರಿಪೇರಿ ಕಾರ್ಯ ನಡೆಸಿ ಮಾದರಿಯಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಮಾಡಿದ 1.5 ಕಿಮೀ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ. ಅಲ್ಲದೆ, ಇನ್ನೂ 1.5 ಕಿಮೀ ರಸ್ತೆ ಕಾಮಗಾರಿ ಬಹು ವರ್ಷಗಳಿಂದ ಮರು ಡಾಂಬರೀಕರಣಕ್ಕೆ ಬಾಕಿ ಇದೆ. ಸಂಸದರಿಂದ ಹಿಡಿದು ಗ್ರಾಪಂ ವರೆಗೆ ಹಲವು ಜನಪ್ರತಿನಿಧಿಗಳು ಓಡಾಡುವ ರಸ್ತೆ ಇದಾಗಿದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಇದರಿಂದ ಊರಿನವರೇ ಶ್ರಮದಾನ ಮಾಡುತ್ತಿದ್ದೇವೆ.

ರವಿಕಿರಣ ಭಟ್, ಬರಗದ್ದೆ ಗ್ರಾಮಸ್ಥ

Leave a Reply

Your email address will not be published. Required fields are marked *