ವಿಜಯಪುರ: ಡಿಸಿಎಂ ಗೋವಿಂದ ಕಾರಜೋಳರಿಗೆ ಅದೃಷ್ಟ ಚೆನ್ನಾಗಿದೆ. ಅವರು ಮುಖ್ಯಮಂತ್ರಿಯಾಗಿದರೆ ನಮ್ಮದೇನೂ ಅಭ್ಯಂತರವಿಲ್ಲ….ಅದರಲ್ಲೂ ಇದೇ ಅವಧಿಯಲ್ಲಿ ಆದರೂ ಅಭ್ಯಂತರವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಶಾಸಕರಿಬ್ಬರು ಕಾರಜೋಳರ ಕಾಲೆಳೆದರು.
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಕೆರೆಗೆ ಬಾಗಿನ ಸಮರ್ಪಣೆ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶಿವಾನಂದ ಪಾಟೀಲ ಮತ್ತು ಎಂ.ಬಿ. ಪಾಟೀಲ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.
ಮಾಜಿ ಸಚಿವ ಶಾಸಕ ಶಿವಾನಂದ ಪಾಟೀಲ ಮಾತನಾಡುತ್ತಾ, ರೈತರಿಗೆ ವೈಜ್ಞಾನಿಕ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯಿಸಿ, ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಎಂದು ಡಿಸಿಎಂ ಕಾರಜೋಳರಿಗೆ ತಿಳಿಸುತ್ತಾ, ‘ಕಾರಜೋಳ ಸಾಹೇಬ್ರೇ ನೀವೇ ಮುಖ್ಯಮಂತ್ರಿಯಾದರೂ ಅಭ್ಯಂತರವಿಲ್ಲ, ನನ್ನ ಹಾಗೂ ಎಂ.ಬಿ. ಪಾಟೀಲರಿಗಿಂತ ನಿಮಗೆ ಅದೃಷ್ಟ ಚೆನ್ನಾಗಿದೆ ಎಂದರು. ಕೂಡಲೇ ದನಿಗೂಡಿಸಿದ ಎಂ.ಬಿ.ಪಾಟೀಲರು ‘ಇದೇ ಅವಧಿಯಲ್ಲಿ ಆದರೂ ನಮ್ಮ ಅಭ್ಯಂತರವಿಲ್ಲ’ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಇದಕ್ಕೆ ಮತ್ತೆ ನಗುತ್ತಲೇ ಮಾಜಿ ಸಚಿವ ಶಿವಾನಂದ ಪಾಟೀಲರು, ‘ನೋಡಿ ಎಂ.ಬಿ. ಪಾಟೀಲರು ಇದೇ ಅವಧಿಯಲ್ಲಿ ಕಾರಜೋಳರು ಮುಖ್ಯಮಂತ್ರಿಯಾಗಲಿ ಎಂದು ಹೇಳುವ ಮೂಲಕ ಅವರಿಗೂ ಹಾಗೂ ಯಡಿಯೂರಪ್ಪನವರಿಗೆ ಜಗಳ ಹಚ್ಚುತ್ತಿದ್ದಾರೆ’ ಎಂದು ಹಾಸ್ಯಭರಿತವಾಗಿ ನುಡಿದರು.
ಡಿಸಿಎಂ ಗೋವಿಂದ ಕಾರಜೋಳ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಡಿಸಿಸಿ ಬ್ಯಾಂಕ್ ಹಿರಿಯ ಅಧಿಕಾರಿ ಸತೀಶ ಪಾಟೀಲ, ಡಾ.ಎಂ.ಎಚ್. ಹತ್ತೂರಕರ, ಆರ್.ಎಸ್. ಕಸಬೇಗೌಡರ, ವೀಣಾ ನಾಯಕ ಮತ್ತಿತರರಿದ್ದರು.