ಕಾಯಿಲೆ ವೇಳೆ ಕೈಹಿಡಿವ ಹೆಲ್ತ್​ಟಿಪ್ಸ್

ನಿತ್ಯವೂ ಆರೋಗ್ಯಕ್ಕೆ ಸಂಬಂಧಪಟ್ಟ ಏನಾದರೊಂದು ಕಿರಿಕಿರಿ ಇದ್ದೇ ಇರುತ್ತದೆ, ಎಲ್ಲವನ್ನೂ ಡಾಕ್ಟರ್ ಬಳಿಯೇ ಹೋಗಿ ಕೇಳಲು ಆಗುವುದಿಲ್ಲ. ಕೆಲವು ಸಮಸ್ಯೆಗಳಿಗೆ ಡಾಕ್ಟರ್ ಕೊಟ್ಟ ಔಷಧ ತೆಗೆದುಕೊಂಡಷ್ಟೇ ದಿನ ಸರಿ ಹೋಗಿರುತ್ತದೆ. ಬಳಿಕ ಪುನಃ ಅದರ ಬಾಧೆ ಶುರು. ‘ಏನು ಮಾಡುವುದೋ ತಿಳಿಯದು’ ಎಂದು ಅನೇಕರು ಅಲವತ್ತುಕೊಳ್ಳುವುದನ್ನು ನೀವು ಕೇಳಿರಬಹುದು. ಅವರ ಬಹುತೇಕ ಸಮಸ್ಯೆಗಳು ಜೀವನಶೈಲಿಗೆ ಸಂಬಂಧಿಸಿದಂತೆ ಇರುತ್ತವೆ. ಅವುಗಳ ಬಗ್ಗೆ ಹೆಚ್ಚಾಗಿ ಗಮನ ವಹಿಸದೆ ಇರುವುದರಿಂದಲೋ ಅಥವಾ ತಪ್ಪು ಮಾಹಿತಿಯಿಂದಲೋ ಅನೇಕ ಬಾರಿ ಸಣ್ಣಪುಟ್ಟ ದೈಹಿಕ ಕಿರಿಕಿರಿಗಳು ಕಾಡುತ್ತಲೇ ಇರುತ್ತವೆ. ಅಂಥವುಗಳ ಬಗ್ಗೆ ಯಾರ ಬಳಿ ಕೇಳಬೇಕು ಎಂದು ಸಾಕಷ್ಟು ಜನರಿಗೆ ತಿಳಿಯುವುದಿಲ್ಲ. ಅಂತರ್ಜಾಲದಲ್ಲಿ ಮಾಹಿತಿ ಸಿಕ್ಕರೂ ಅದನ್ನು ಹೇಗೆ ನಂಬುವುದು? ಇಂಥದ್ದೊಂದು ಕೊರತೆಯನ್ನು ನೀಗಲೆಂದೇ ವಿಜಯವಾಣಿ ಪತ್ರಿಕೆಯ ಲಲಿತಾ ಪುರವಣಿಯಲ್ಲಿ ಆರಂಭವಾಗಿದ್ದು ‘ಆಪ್ತ’ ಅಂಕಣ. ಪತ್ರಿಕೆ ಆರಂಭವಾದಾಗಿನಿಂದಲೂ ಖ್ಯಾತ ಆಯುರ್ವೆದ ವೈದ್ಯೆ ಡಾ. ವಸುಂಧರಾ ಭೂಪತಿ ಅವರು ಓದುಗರಿಂದ ಬಂದ ಸಾವಿರಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ, ಈಗಲೂ ನೀಡುತ್ತಿದ್ದಾರೆ. ಈ ಅಂಕಣ ಎಷ್ಟೋ ಜನರಿಗೆ ಆರೋಗ್ಯಭಾಗ್ಯ ಕರುಣಿಸಿದೆ. ಉತ್ತಮ ಜೀವನಶೈಲಿಯನ್ನು ರೂಢಿಸಿಕೊಟ್ಟಿದೆ. ಆದರೆ, ಪತ್ರಿಕೆಯಲ್ಲಿರುವ ಮಾಹಿತಿಯನ್ನು ಎಷ್ಟೆಂದು, ಹೇಗೆಂದು ಸಂಗ್ರಹಿಸಿಕೊಳ್ಳುವುದು? ಹೀಗಾಗಿ ಅಂಕಣ ಬರಹಗಳು ಸಂಗ್ರಹ ರೂಪದಲ್ಲಿದ್ದರೆ ಹೆಚ್ಚು ಅನುಕೂಲ ಎನ್ನುವ ಚಿಂತನೆಯ ಹಿನ್ನೆಲೆಯಲ್ಲಿ ಅವುಗಳಿಗೆ ಈಗ ಪುಸ್ತಕ ರೂಪ ನೀಡಲಾಗಿದೆ.

‘ಸಮಸ್ಯೆ-ಸಮಾಲೋಚನೆ’ ಎನ್ನುವ ಹೆಸರಿನ ಕೃತಿಯನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿದೆ. ಮಹಿಳೆಯರಿಗೆ ಸಂಬಂಧಿಸಿದ ಬಹುತೇಕ ಎಲ್ಲ ಸಮಸ್ಯೆಗಳು ಪ್ರಶ್ನೆಯ ರೂಪದಲ್ಲಿ ಬಂದಿದ್ದರೆ ಅವುಗಳಿಗೆ ವಸುಂಧರಾ ಭೂಪತಿ ಅವರು ಉತ್ತರ ನೀಡಿದ್ದಾರೆ. ಇಲ್ಲಿ ಪ್ರಕಟವಾಗಿರುವ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು (ಉದಾಹರಣೆಗೆ, ಆಸಿಡಿಟಿ, ಗ್ಯಾಸ್ಟ್ರಿಕ್, ಮುಟ್ಟಿನ ಸಮಸ್ಯೆ, ಮಕ್ಕಳ ಏಕಾಗ್ರತೆಯ ಸಮಸ್ಯೆ ಇಂಥವು) ಎಲ್ಲ ಕಾಲಕ್ಕೂ ಸಲ್ಲುವಂಥವು. ಅವುಗಳ ಬಗ್ಗೆ ತಿಳಿದುಕೊಂಡರೆ ಸ್ವತಃ ಬದಲಾವಣೆ ತಂದುಕೊಂಡು ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಈ ಮೂಲಕ, ಡಾ. ವಸುಂಧರಾ ಭೂಪತಿ ಪತ್ರಿಕೆ ಮತ್ತು ಓದುಗರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಇಲ್ಲಿ ವೈದ್ಯರು ನೀಡಿರುವ ಪ್ರತಿಯೊಂದು ಸಲಹೆಯೂ ಅಮೂಲ್ಯವಾಗಿದೆ. ಕೂದಲು ಉದುರುವುದು, ಹೊಟ್ಟೆಯುಬ್ಬರ, ಮಧುಮೇಹ, ಋತುಸ್ರಾವ, ನಿದ್ದೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಅಕಾಲದಲ್ಲಿ ಬಿಳಿ ಕೂದಲು, ಥೈರಾಯ್್ಡ ಧೂಮಪಾನದ ಸಮಸ್ಯೆ, ಲೈಂಗಿಕ ಕ್ರಿಯೆ, ಮೂಲವ್ಯಾಧಿ, ಅನಿಯಮಿತ ಋತುಚಕ್ರ, ದೇಹ ಉಷ್ಣವಾಗುವುದು, ಮಂಡಿ ನೋವು, ಹಾಮೋನ್ ಏರಿಳಿತ, ವೆರಿಕೋಸ್ ವೇನ್ಸ್, ಸೀನು, ಗಂಟಲು ಅಲರ್ಜಿ, ಕಿಡ್ನಿಯಲ್ಲಿ ಕಲ್ಲು, ಅಲರ್ಜಿ, ಮೈ ತುರಿಕೆ, ಬಂಜೆತನ, ಫಿಸ್ತುಲಾ, ಸುಸ್ತು, ತಲೆಸುತ್ತು, ಹೃದಯ ತೊಂದರೆ, ಅಸ್ತಮಾ, ಬಿಳಿಸೆರಗು ಇತ್ಯಾದಿ ಎಲ್ಲ ಆರೋಗ್ಯ ಸಮಸ್ಯೆಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿ ದೊರೆಯುತ್ತದೆ. ಅಷ್ಟೇ ಅಲ್ಲ, ಜೀವನಶೈಲಿಗೆ ಸಂಬಂಧಿಸಿದ ಪರಿಹಾರಗಳೂ ಲಭ್ಯ. ಕೆಲವು ಸಮಸ್ಯೆಗಳ ನಿವಾರಣೆಗೆ ನಿರಂತರವಾಗಿ ಆಹಾರ, ವಿಹಾರಗಳಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಮಾರ್ಗದರ್ಶನವೂ ಇದೆ. ಆಯುರ್ವೆದದಲ್ಲಿ ಆಸಕ್ತಿ ಇರುವ ಎಲ್ಲರೂ ಓದಬೇಕಾದ ಕೃತಿ ಅಷ್ಟೇ ಅಲ್ಲ, ಸಂಗ್ರಹಯೋಗ್ಯ ಕೃತಿಯೂ ಹೌದು.

Leave a Reply

Your email address will not be published. Required fields are marked *