ಕಾಯಿಲೆಗಳ ನಿವಾರಣೆಯ ದಿವ್ಯ ಔಷಧ ‘ಗೋ ಮೂತ್ರ’

ಹುಬ್ಬಳ್ಳಿ: ದೇಶಿ ತಳಿಯ ಗೋ ಮೂತ್ರವು ಮನುಷ್ಯನ ಕಾಯಿಲೆಗಳನ್ನು ನಿವಾರಿಸುವ ದಿವ್ಯ ಔಷಧವಾಗಿದೆ ಎಂದು ಹಳೇ ಹುಬ್ಬಳ್ಳಿ ಹೆಗ್ಗೇರಿ ಆಯುರ್ವೆದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್. ಹೇಳಿದರು.

ಭಾರತೀಯ ಗೋ ಪರಿವಾರ ಮತ್ತು ಆರೋಗ್ಯ ಭಾರತಿ ಕರ್ನಾಟಕ ಉತ್ತರ ಪ್ರಾಂತ ಆಶ್ರಯದಲ್ಲಿ ಮೂರುಸಾವಿರ ಮಠದಲ್ಲಿ ಗುರುವಾರ ಆಯೋಜಿಸಿದ್ದ ಗೋ ಮೂತ್ರ ಪುಡಿಯ ಕ್ಯಾಪ್ಸೂಲ್ ‘ಸುರಭಿಸಾರ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು. ಯಕೃತ್ ಕಾಯಿಲೆ, ಮೂತ್ರಪಿಂಡ ಸಮಸ್ಯೆ, ರಕ್ತದ ಕೊಬ್ಬಿನಾಂಶ ನಿವಾರಿಸುವ ಶಕ್ತಿ ಗೋ ಮೂತ್ರಕ್ಕಿದೆ. ಗೋ ಮೂತ್ರ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದರು.

ಯಕೃತ್ ಕೊಬ್ಬಿನಾಂಶದಿಂದ ಹಸಿವು ಕಟ್ಟುವುದು ಮತ್ತು ಇತರೆ ಸಮಸ್ಯೆಗಳ ನಿವಾರಣೆಗೆ ಗೋ ಮೂತ್ರ ಉತ್ತಮ ಔಷಧ ಎನ್ನುವುದು ಸಂಶೋಧನೆಯಿಂದ ಗೊತ್ತಾಗಿದೆ. ಗೋ ಮೂತ್ರ ಸೇವನೆಯಿಂದ ಮೂತ್ರಪಿಂಡದ ಕಲ್ಲುಗಳೂ ಕರಗಿರುವುದು ಪ್ರಯೋಗಗಳಿಂದ ಸಾಬೀತಾಗಿದೆ. ಚರ್ಮ ಹಾಗೂ ತೊನ್ನು ರೋಗ ನಿವಾರಣೆಗೆ ಉತ್ತಮ ಔಷಧವಾಗಿದೆ ಎಂದರು.

ಸುರಭಿಸಾರ ತಯಾರಕ ರಾಘವೇಂದ್ರ ಹೇಮಣ್ಣವರ ಮಾತನಾಡಿ, ದೇಶಿ ತಳಿಯ ಗೋ ಮೂತ್ರ ಅಮೃತ ಸಮಾನ. ರೋಗಗಳ ನಿವಾರಣೆಯ ಒಳ್ಳೆಯ ಸಂಜೀವಿನಿಯಾಗಿದೆ ಎಂದರು. ನೇರವಾಗಿ ಗೋ ಮೂತ್ರ ಸ್ವೀಕರಿಸುವುದಕ್ಕೆ ಜನರು ಹಿಂದೇಟು ಹಾಕುತ್ತಾರೆ. ರಾಮ ಚಂದ್ರಾಪುರ ಮಠದ ದೇಶಿ ತಳಿ ಗೋವುಗಳ ಮೂತ್ರದಿಂದ ಔಷಧ ತಯಾರಿಸಲಾಗಿದೆ. ಎರಡು ಮಾತ್ರೆ ಸೇವಿಸಿದರೂ ಅಡ್ಡ ಪರಿಣಾಮವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

ಆಯುರ್ವೆದ ಕ್ಯಾನ್ಸರ್ ತಜ್ಞ ಡಾ. ಡಿ.ಪಿ. ರಮೇಶ ಮಾತನಾಡಿದರು.

ಭಾರತೀಯ ಗೋ ಪರಿವಾರ ಅಧ್ಯಕ್ಷ ಭೇರುಲಾಲ ಜೈನ್, ಭವರಲಾಲ ಆರ್ಯ, ಮಹಾಪೋಷಕಿ ಭಾರತಿ ಪಾಟೀಲ ಉಪಸ್ಥಿತರಿದ್ದರು. ದೇಶಪಾಂಡೆ ನಿರೂಪಿಸಿದರು. ಡಾ. ಸಿದ್ದನಗೌಡ ಆ. ಪಾಟೀಲ ವಂದಿಸಿದರು. ದತ್ತಾತ್ರೇಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿಜ್ಞಾನಿಗಳು ಹಾಗೂ ವೈದ್ಯರ ಸಲಹೆಯಿಂದ ತಯಾರಿಸಿದ ‘ಸುರಭಿಸಾರ’ವನ್ನು ಸ್ವಾಗತಿಸಬೇಕು. ಔಷಧ ಉಪಯೋಗಿಸಿ ರೋಗಮುಕ್ತರಾಗಬೇಕು.

| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮೂರುಸಾವಿರ ಮಠ ಹುಬ್ಬಳ್ಳಿ