ಭಾಲ್ಕಿ: ಬಸವಾದಿ ಶರಣರು ಬೋಧಿಸಿದ ಕಾಯಕ-ದಾಸೋಹ ತತ್ವ ಪಾಲಿಸಿದರೆ ಪ್ರತಿಯೊಬ್ಬರ ಬದುಕು ಸಮೃದ್ಧವಾಗಲಿದೆ ಎಂದು ಭಾತಂಬ್ರಾ ಜಗದ್ಗುರು ನಿರಂಜನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.
ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕಾಯಕ ಹಾಗೂ ದಾಸೋಹ ಎರಡು ಅಮೂಲ್ಯ ತತ್ವಗಳು ಶತಾಯಿಷಿ ಮಾಜಿ ಸಚಿವ ಡಾ.ಭೀಮಣ್ಣ ಖಂಡ್ರೆ ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತ ಬಂದಿದ್ದಾರೆ. ಗಡಿ ಭಾಗದ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ನೆರವಾಗುವುದರ ಜತೆಗೆ ನೂರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿ ಅವರ ಬಾಳನ್ನು ಬೆಳಗಿಸಿದ್ದಾರೆ ಎಂದು ಹೇಳಿದರು.
ಕಳೆದ ಹತ್ತಾರೂ ವರ್ಷಗಳಿಂದ ಕಬ್ಬು ಸಾಗಿಸಿದ ರೈತರಿಗೆ ಸಕಾಲಕ್ಕೆ ಹಣ ಪಾವತಿಸಿ ಕಾರ್ಖಾನೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಶಿವಶಂಕರ ಪಾಟೀಲ್, ಲಿಯಾಕತ್ ಅಲಿ, ಸಂಗಾರಡ್ಡಿ, ಬಾಬುರಾವ ಪಾಟೀಲ್ ಹೊರಂಡಿ, ಬಾಬುರಾವ ಪಾಟೀಲ್ ತಾಳಮಾಡಗಿ, ಶಂಕರ್ ಚವ್ಹಾಣ್, ಸಂಗ್ರಾಮ ಮುದ್ನಾಳೆ, ಅಶೋಕ ಕೋಟೆ, ಸುರೇಖಾ ಶೆಟಕಾರ, ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಣ್ಣ, ಅಧಿಕಾರಿ ವಿನೋದ ಕೋಟೆ ಇತರರಿದ್ದರು. ಕಚೇರಿ ಅಧೀಕ್ಷಕ ರಮೇಶ ಚಿದ್ರಿ ನಿರೂಪಣೆ ಮಾಡಿ ವಂದಿಸಿದರು.
ಗಡಿ ಜಿಲ್ಲೆ ಬೀದರ್‌ನಲ್ಲಿ ಮಹಾತ್ಮ ಗಾಂಧಿ ಸಹಕಾರಿ ಕಾರ್ಖಾನೆ ರೈತರು ಹಾಗೂ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.
– ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಭಾತಂಬ್ರಾ