ಕಾಮಿಡಿ ಕಂಪನಿ ಕಲಾವಿದರಿಗೆ ನೆರವು

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹವು ‘ಕಲರ್ಸ್ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಕಂಪನಿ’ ಹಾಸ್ಯ ಕಾರ್ಯಕ್ರಮದ ಸ್ಪರ್ಧಿಗಳಾದ ವಿನೋದ್ ಚಾರ್ವಡಿ ಹಾಗೂ ಕುಮಾರ್ ಜೀವನವನ್ನೇ ಬುಡಮೇಲು ಮಾಡಿದೆ. ಅವರಿಬ್ಬರ ಮನೆಗಳೂ ಕೊಚ್ಚಿಕೊಂಡು ಹೋಗಿವೆ. ಕುಟುಂಬಕ್ಕೆ ಆಧಾರವಾಗಿದ್ದ ಹಸುಗಳೂ ಪ್ರವಾಹದಲ್ಲಿ ನಾಪತ್ತೆ ಆಗಿದೆ. ‘ಹೊಸದಾಗಿ ಆರಂಭವಾಗಿರುವ ಈ ಹಾಸ್ಯ ಕಾರ್ಯಕ್ರಮದ ಎಪಿಸೋಡ್​ಗಳು ಪ್ರಸಾರವಾಗುತ್ತಿವೆ, ನೋಡಿ..’ ಎಂದು ಹೇಳಲು ಕುಟುಂಬದವರಿಗೆ ಕರೆ ಮಾಡಿದಾಗ ಮನೆಯೇ ಪ್ರವಾಹಕ್ಕೆ ತುತ್ತಾಗಿರುವ ವಿಷಯ ಇವರಿಬ್ಬರಿಗೂ ಗೊತ್ತಾಗಿದೆ.

‘ನನ್ನ ಮನೆಯವರು ಇದೀಗ ದೊಡ್ಡಮ್ಮನ ಮನೆಯಲ್ಲಿದ್ದಾರೆ. ನನ್ನ ತಮ್ಮ ಮೂರ್ನಾಲ್ಕು ಜನರನ್ನು ಪ್ರವಾಹದಿಂದ ರಕ್ಷಿಸಿದ್ದಾನೆ. ಆದರೆ ನಮ್ಮ ಜೀವನಕ್ಕೆ ಆಧಾರವಾಗಿದ್ದ ದನ ಕರುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ ವಿನೋದ್. ಕುಮಾರನ ಕುಟುಂಬದ ಸದಸ್ಯರು ಪರಿಹಾರ ಕೇಂದ್ರಗಳಲ್ಲಿದ್ದಾರೆ. ಈ ವಿಷಯ ತಿಳಿದ ‘ಕಾಮಿಡಿ ಕಂಪನಿ’ ನಿರೂಪಕ ಅಕುಲ್ ಬಾಲಾಜಿ ಇಬ್ಬರ ಕುಟುಂಬಕ್ಕೂ ತಲಾ 50 ಸಾವಿರ ರೂ. ನೆರವು ಘೊಷಿಸಿದರು. ಜತೆಗೆ ರಾಜ್ಯದ ಎಲ್ಲರೂ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಮನವಿ ಮಾಡಿದರು.

ವೈಯಕ್ತಿಕ ನೋವಿನ ಹೊರತಾಗಿಯೂ ವಿನೋದ್ ಆ ಹಣ ತಮಗೆ ನೀಡುವ ಬದಲು ಚಾರ್ವಡಿಯಲ್ಲಿರುವ ಬಡ ಕುಟುಂಬವೊಂದಕ್ಕೆ ನೀಡುವಂತೆ ಅಕುಲ್ ಅವರಲ್ಲಿ ಕೋರಿದರು. ಅಲ್ಲದೆ ಭಾರತೀಯ ಸೇನೆ ಹಾಗೂ ಎನ್​ಡಿಆರ್​ಎಫ್ ತಂಡಗಳ ಕೆಲಸವನ್ನು ಕೊಂಡಾಡಿದರು. ‘ಕಾಮಿಡಿ ಕಂಪನಿ’ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ. ವಿನೋದ್ ಮತ್ತು ಕುಮಾರ್ ಅವರ ಕುಟುಂಬ ಪ್ರವಾಹಕ್ಕೆ ಸಿಲುಕಿರುವ ಬಗ್ಗೆ ಇನ್ನಷ್ಟು ವಿವರಗಳು ಈ ವಾರಾಂತ್ಯ ಪ್ರಸಾರವಾಗಲಿವೆ.

Leave a Reply

Your email address will not be published. Required fields are marked *