ಕಾಮಗಾರಿ ಕಳಪೆಯಾದರೆ ಶಿಸ್ತು ಕ್ರಮ

ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರ್ನಾಟಕ ಸರ್ಕಾರದ ಉದ್ದಿಮೆ ಸಮಿತಿ ಸದಸ್ಯ, ಶಾಸಕ ಉಮೇಶ ಕತ್ತಿ ಅಧ್ಯಕ್ಷತೆಯಲ್ಲಿ ಗುಡ್ಡದಮಲ್ಲಾಪುರ, ಅಸುಂಡಿ, ಮಡ್ಲೂರು ಏತ ನೀರಾವರಿ ಯೋಜನೆ ಕುರಿತು ಸಭೆ ಜರುಗಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಉಮೇಶ ಕತ್ತಿ, ಈ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಶಾಸಕ ಬಿ.ಸಿ. ಪಾಟಿಲ ಸಮಿತಿ ಸಭೆಯಲ್ಲಿ ದೂರು ನೀಡಿದ್ದರು. ಹೀಗಾಗಿ ಪರಿಶೀಲಿಸಿ ರ್ಚಚಿಸಲು ಸಭೆ ನಡೆಸಲಾಗಿದೆ ಎಂದರು.

ಕಾಮಗಾರಿ ಕಳಪೆ ಕುರಿತು ವೀಕ್ಷಿಸಲು ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ನೀರು ಸಂಗ್ರಹವಿಲ್ಲ. ಜುಲೈ, ಆಗಸ್ಟ್​ನಲ್ಲಿ ನೀರು ಹರಿಸಿ ವೀಕ್ಷಿಸಲಾಗುವುದು. ಕಾಮಗಾರಿ ಕಳಪೆಯಾದಲ್ಲಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು. ಶೀಘ್ರ ಕಾಮಗಾರಿ ಮುಗಿಸಿ, ಜಾಕ್​ವೆಲ್ ನಿರ್ವಿುಸಿ, ನದಿಯಿಂದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.

ಕರ್ನಾಟಕ ನೀರಾವರಿ ನಿಗಮ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಯತೀಶಚಂದ್ರನ್ ಮಾತನಾಡಿ, ಕಾಮಗಾರಿಯ ಶೇ. 75ರಷ್ಟು ಹಣ ನಮ್ಮ ಇಲಾಖೆಯಲ್ಲಿದ್ದು, ಗುಣಮಟ್ಟದ ಕಾಮಗಾರಿ ನಡೆದರೆ ಮಾತ್ರ ಸಂಪೂರ್ಣ ಹಣ ಪಾವತಿಸಲಾಗುವುದು. ಇಲ್ಲವಾದರೆ ಬೇರೆಯವರಿಂದ ಕಾಮಗಾರಿ ಮಾಡಿಸಲಾಗುವುದು. ಕೆರೆಗಳಲ್ಲಿ ಹೂಳು ತುಂಬಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವುದಿಲ್ಲ. ಕೆರೆ ಹೂಳು ತೆಗೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆ ಸಮಿತಿ ಸದಸ್ಯರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಬಿ.ಸಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ವಿನಿಶಾ ನಿರೋ, ಮಾಜಿ ಶಾಸಕ ಯು.ಬಿ. ಬಣಕಾರ, ಪ.ಪಂ. ಸದಸ್ಯರು, ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಅಧೀಕ್ಷಕ ಇಂಜಿನಿಯರ್ ಫಣಿರಾಜ್, ಅಧೀನ ಕಾರ್ಯದರ್ಶಿ ಸುರೇಶಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.