ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಸಾಗರ: ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ.

ನರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ಕಟ್ಟಡ ಕಾಮಗಾರಿ ಶನಿವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನನ್ನ ಅವಧಿಯಲ್ಲಿ ಕಳಪೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದರು.

ಸರ್ಕಾರಿ ಪಪೂ ಕಾಲೇಜಿಗೆ ನಮ್ಮ ತಾಲೂಕು ಸೇರಿ ಅಕ್ಕಪಕ್ಕದ ತಾಲೂಕುಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ ಕೊಠಡಿ ಕೊರತೆ ಅನುಭವಿಸುವಂತಾಗಿದೆ. ಮೊದಲ ಹಂತದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ 3 ಅಂತಸ್ತಿನ ಆಧುನಿಕ ಶೈಲಿಯ ಕಟ್ಟಡ ನಿರ್ವಿುಸಲಾಗುತ್ತಿದೆ. ಭವಿಷ್ಯದ ದೃಷ್ಟಿಯಿಂದ ಇನ್ನೆರಡು ಅಂತಸ್ತು ಹಾಗೂ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಹ ಗಮನಹರಿಸಲಾಗುತ್ತಿದೆ ಎಂದು ತಿಳಿಸಿದರು.

ನೆರೆಯಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಹಾನಿ ಸಂಬಂಧ ಕೊಡುವ ಪರಿಹಾರ ತೀರಾ ಕಡಿಮೆಯಾಗುತ್ತಿದೆ. ಹೆಕ್ಟೇರ್ ಲೆಕ್ಕದಲ್ಲಿ ರೈತರ ಜಮೀನಿನಲ್ಲಿ ನೆರೆಯಿಂದ ಹೂಳು ತುಂಬಿದ್ದು ಅವರಿಗೆ ಮಾನದಂಡದ ಪ್ರಕಾರ ಕೊಡುವ ಪರಿಹಾರ ರೈತರ ಓಡಾಟದ ಖರ್ಚಿಗೂ ಸಾಕಾಗುತ್ತಿಲ್ಲ. ರೈತರಿಗೆ ಕನಿಷ್ಠ 5 ಸಾವಿರ ರೂ. ಪರಿಹಾರ ಸಿಗಬೇಕು. ಸಿಎಂ ಉದ್ದೇಶ ಸಹ ಅದೇ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು.

ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್, ಬಿ.ಟಿ.ರವೀಂದ್ರ, ವಿನಾಯಕ ಮನೆಘಟ್ಟ, ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತ ಹಾಲೇಶಪ್ಪ ಇತರರಿದ್ದರು.

Leave a Reply

Your email address will not be published. Required fields are marked *