ಕಾಪೋರೇಟ್​ಗಳು ರಾಜಕಾರಣಿಗಳಿಂದ ಕಲಿಯಬೇಕಾದ್ದು

 ಕಾಪೋರೇಟ್ಗಳಂತೆ ರಾಜಕಾರಣಿಗಳೂ ಜನರನ್ನು, ಸಂಸ್ಥೆಗಳನ್ನು ನಿರ್ವಹಿಸುವುದು ಹೌದು. ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಪರಿಗಣಿಸದ ರಾಜಕಾರಣಿಗಳ ಚಾಣಾಕ್ಷತೆಯನ್ನು ಕಾಪೋರೇಟ್ಗಳು, ಶ್ರೀಸಾಮಾನ್ಯರು ರೂಢಿಸಿಕೊಂಡರೆ ಹತ್ತಾರು ಪ್ರಯೋಜನಗಳಿವೆ. ತಾವು ಮಾಡಿದ್ದು ಪ್ರತಿಯೊಬ್ಬರಿಗೂ ತಲುಪುವವರೆಗೂ ಅದನ್ನು ಒತ್ತಿಹೇಳುವ ಅಸಾಧಾರಣ ಸಾಮರ್ಥ್ಯ ರಾಜಕಾರಣಿಗಳದ್ದು.

ಕಾಪೋರೇಟ್ಗಳಿಂದ ರಾಜಕಾರಣಿಗಳು ಕಲಿಯಬಹುದಾದ ಪಾಠಗಳ ಬಗ್ಗೆ ಈ ಲೇಖನಮಾಲೆಯ ಮೊದಲ ಭಾಗದಲ್ಲಿ ಬರೆದಿದ್ದೆ. ಈ ಅಂಕಣದಲ್ಲಿ, ರಾಜಕಾರಣಿಗಳಿಂದ ಕಾಪೋರೇಟ್ಗಳು ಕಲಿಯಬಹುದಾದ ಪಾಠಗಳ ಬಗ್ಗೆ ಬರೆಯುತ್ತಿದ್ದೇನೆ. ರಾಜಕಾರಣಿಗಳೆಂದರೆ ಸ್ವಾರ್ಥಸಾಧಕರು, ಅಧಿಕಾರದಾಹಿಗಳು, ದುಷ್ಟರು, ಕಪಟಿಗಳು- ಇವೆಲ್ಲವೂ ಅವರ ಬಗೆಗೆ ಸುದ್ದಿಮಾಧ್ಯಮಗಳ ಮೂಲಕ ದೊರೆಯುವ ನೈಜಚಿತ್ರಣ ಮತ್ತು ವ್ಯಂಗ್ಯಚಿತ್ರ-ಸಟೈರ್ಗಳ ಮೂಲಕ ದೊರೆಯುವ ವಿಡಂಬನಾತ್ಮಕ ಚಿತ್ರಣಗಳೆರಡರಲ್ಲೂ ಲಭ್ಯವಾಗುವ ಪರಿಪ್ರೇಕ್ಷೆ. ಈ ಅವಗುಣಗಳ ನಡುವೆ ರಾಜಕಾರಣಿಗಳ ಬಗ್ಗೆ ಎಲ್ಲಿಯಾದರೂ ಸಣ್ಣದೊಂದು ಪ್ರಶಂಸೆ ದೊರಕುವುದಾದರೆ ಅದು ಲಭಿಸುವುದು ಅವರ ಚಾಣಾಕ್ಷತನಕ್ಕೆ! ಅದೂ ತೀರಾ ಸಕಾರಾತ್ಮಕವಾಗಿಯೇನಲ್ಲ; ಏಕೆಂದರೆ ಚಾಣಾಕ್ಷತನಕ್ಕೂ ಬುದ್ಧಿವಂತಿಕೆಗೂ ವ್ಯತ್ಯಾಸವಿದೆಯಲ್ಲ! ಆದರೆ, ರಾಜಕಾರಣಿಗಳಿಂದ ನಾವೆಲ್ಲರೂ ಕಲಿಯಬೇಕಾದ್ದು ಸಾಕಷ್ಟಿದೆ. ಕಾಪೋರೇಟ್ಗಳಂತೆ ರಾಜಕಾರಣಿಗಳೂ ಜನರನ್ನು ಮತ್ತು ಸಂಸ್ಥೆಗಳನ್ನು ನಿರ್ವಹಿಸುವುದರಿಂದ, ಪರಸ್ಪರರಿಂದ ಕಲಿಯಬೇಕಾದ್ದು ಯಥೇಚ್ಛ. ರಾಜಕಾರಣಿಗಳ ನಿರ್ವಹಣಾಶೈಲಿ ವಿಭಿನ್ನವೂ ವಿಶೇಷವೂ ಆಗಿರುವುದರಿಂದ, ಅದರಲ್ಲಿ ಲಭ್ಯವಿರುವ ಪಾಠಗಳು ಕಾಪೋರೇಟ್ಗಳ ಮಟ್ಟಿಗೆ ಅಷ್ಟೇ ವಿನೂತನ. ಅವುಗಳಲ್ಲಿ ಕೆಲವು ಇಂತಿವೆ.

ಪ್ರತಿಸ್ಪರ್ಧಿಗಳ ಬಗೆಗಿನ ತೀಕ್ಷ್ಣಗ್ರಹಿಕೆ: ರಾಜಕಾರಣವಿರುವುದೇ ಪಕ್ಷ ವಿಪಕ್ಷಗಳ ಹಣಾಹಣಿಯಲ್ಲಿ. ಇದರಿಂದಾಗಿ ರಾಜಕಾರಣಿಗಳಲ್ಲಿ ‘ನಮ್ಮನ್ನು ಯಾರೋ ಬೆಂಬತ್ತಿದ್ದಾರೆ, ನಾವು ಅವರಿಂದ ತಪ್ಪಿಸಿಕೊಳ್ಳಬೇಕು’ ಎನ್ನುವ ಭಾವ ಇರುವಷ್ಟೇ ‘ನಾವು ಪ್ರತಿಸ್ಪರ್ಧಿಗಳನ್ನೂ ಹಿಡಿದು ಮಟ್ಟಹಾಕಬೇಕು’ ಎನ್ನುವ ತೀವ್ರವಾದ ಸ್ಪರ್ಧಾತ್ಮಕ ಮನೋಭಾವವೂ ಎದ್ದುಕಾಣುತ್ತಿರುತ್ತದೆ. ಅವರ ನಡೆಯಲ್ಲಿ ಒಂದು ಸ್ಪಷ್ಟ ನಿಲುವಿರುತ್ತದೆ- ‘ಪ್ರತಿಸ್ಪರ್ಧಿಯ ಸೋಲೆಂದರೆ ನನ್ನ ಗೆಲುವು. ಆದ್ದರಿಂದ, ಆತನ ಪ್ರತಿಯೊಂದು ನಡೆಯನ್ನೂ ನಾನು ಗಮನಿಸಬೇಕು. ಅವಕಾಶ ಸಿಕ್ಕಾಗ ಮುಗಿಬಿದ್ದು ಅಡ್ವಾಂಟೇಜ್ ತೆಗೆದುಕೊಳ್ಳಬೇಕು. ಮಾತ್ರವಲ್ಲ, ನನ್ನ ಪ್ರತಿಯೊಂದು ನಡೆಗೂ ಪ್ರತಿಸ್ಪರ್ಧಿ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದನ್ನು ಆಧರಿಸಿಯೇ ನಿರ್ಧರಿಸಬೇಕು’. ಒಟ್ಟಿನಲ್ಲಿ, ರಾಜಕಾರಣಿಗಳಿಗೆ ತಮ್ಮ ವಿರೋಧಿಗಳು ಯಾರು ಎನ್ನುವುದರ ಬಗ್ಗೆಯಾಗಲೀ, ಅವರನ್ನು ಹೇಗೆ ಕಾಣಬೇಕು ಎನ್ನುವುದರ ಬಗ್ಗೆಯಾಗಲೀ ಸ್ವಲ್ಪವೂ ದ್ವಂದ್ವವಿರುವುದಿಲ್ಲ.

ಇದಕ್ಕೆ ವೈದೃಶ್ಯವೆಂಬಂತೆ ಕಾಪೋರೇಟ್ಗಳು ತಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಆಗಾಗ್ಗೆ ಸ್ವಲ್ಪವಾದರೂ ಸಹಾನುಭೂತಿಯ ಧೋರಣೆ ತಳೆಯುತ್ತಾರೆ. ಉದಾಹರಣೆಗೆ ‘ಸ್ಪರ್ಧೆ ಒಳ್ಳೆಯದು, ಅದರಿಂದ ನಮ್ಮ ಸೇವೆ/ಉತ್ಪನ್ನಕ್ಕಿರುವ ಒಟ್ಟು ಮಾರುಕಟ್ಟೆ ವಿಸ್ತರಿಸುತ್ತದೆ’ ಅಥವಾ ‘ನೇರ ಸ್ಪರ್ಧೆಗಿಂತ ಸಹಕಾರಾತ್ಮಕವಾದ ಸ್ಪರ್ಧೆ ಒಳಿತು’ ಅಥವಾ ‘ಸ್ಪರ್ಧಿಸುತ್ತಿರುವ ನಾವೆಲ್ಲರೂ ಸೇರಿ ಗುಪ್ತ-ಒಕ್ಕೂಟ ಮಾಡಿಕೊಂಡರೆ ಎಲ್ಲರೂ ಗೆಲ್ಲಬಹುದು’ ಅಥವಾ ‘ನಮ್ಮ ಉತ್ಪನ್ನ/ಸೇವೆಯ ಗುಣಮಟ್ಟ ಉತ್ತಮವಾಗಿರುವುದರಿಂದ, ನಾವು ಸ್ಪರ್ಧೆಗೆ ಅವಕಾಶ ಕೊಟ್ಟು ಅವರು ಇತರ ಉತ್ಪನ್ನ/ಸೇವೆಯ ರುಚಿಯನ್ನು ನೋಡಿದರೆ, ಕೊನೆಗೆ ನಮ್ಮದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ…’ ಎಂಬಿತ್ಯಾದಿಯಾಗಿ ಯೋಚಿಸಿ, ತಮ್ಮ ಯೋಜನೆಗಳಲ್ಲಿ ಪ್ರತಿಸ್ಪರ್ಧಿಗಳನ್ನೂ ತೊಡಗಿಸಲು ಯತ್ನಿಸುತ್ತಾರೆ! ಆದರ್ಶ ಪರಿಸ್ಥಿತಿಯಲ್ಲಿ ಇದು ಒಳ್ಳೆಯ ಧೋರಣೆಯಂತೆ ಕಂಡರೂ ವಾಸ್ತವದಲ್ಲಿ ಬೇರೆಯದೇ ನಡೆಯುತ್ತದೆ. ಪ್ರತಿಸ್ಪರ್ಧಿಗಳಲ್ಲಿ ಯಾರಾದರೊಬ್ಬರು ಒಡಂಬಡಿಕೆ ಮುರಿಯುತ್ತಾರೆ ಅಥವಾ ಅಂಡರ್ಕಟ್ (ನಿಗದಿತ ಬೆಲೆಗಿಂತ ಕಡಿಮೆಗೆ ಮಾರುವುದು, ನಿಗದಿತ ಭೌಗೋಳಿಕ ಚೌಕಟ್ಟಿನ ಹೊರಗೆ ಮಾರುವುದು, ಇತ್ಯಾದಿ) ಮಾಡುತ್ತಾರೆ. ಇದರಿಂದ, ಪ್ರತಿಸ್ಪರ್ಧಿಗಳನ್ನು ಪ್ರತಿಸ್ಪರ್ಧಿಗಳ ಹಾಗೆಯೇ ಕಂಡಿದ್ದರೆ ಎಷ್ಟಾಗುತ್ತಿತ್ತೋ, ಅದಕ್ಕಿಂತಲೂ ದೊಡ್ಡ ಪ್ರಮಾಣದ ನಷ್ಟವಾಗುತ್ತದೆ. ಗ್ರಾಹಕರ ನೇರ ಸಂಪರ್ಕವಿರುವ ‘ಬಿ-ಟು-ಸಿ’ ಉದ್ಯಮಗಳಲ್ಲಿ, ಪ್ರತಿಸ್ಪರ್ಧಿಯನ್ನು ನಂಬಿ ಏಟುತಿಂದ ಇಂತಹ ಪ್ರಸಂಗಗಳನ್ನು ಆಗಾಗ್ಗೆ ಗಮನಿಸಬಹುದು.

ಪ್ರತಿಸ್ಪರ್ಧಿಗಳನ್ನು ಎಂದಿಗೂ ಲಘುವಾಗಿ ಪರಿಗಣಿಸದ ರಾಜಕಾರಣಿಗಳಂತೆ ಕಾಪೋರೇಟ್ಗಳೂ ನಡೆದುಕೊಂಡರೆ ಅದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ, ‘ಇರುಳು ಕಂಡ ಬಾವಿಗೆ ಹಗಲು ಬೀಳುವ’ ಅಪಾಯವಿರುವುದಿಲ್ಲ. ಎರಡನೆಯದು, ಗ್ರಾಹಕ ಏನು ಬಯಸುತ್ತಾನೆ ಮತ್ತು ಮಾರುಕಟ್ಟೆ ಹೇಗೆ ವರ್ತಿಸುತ್ತದೆ ಎನ್ನುವುದನ್ನು ಪ್ರತಿಸ್ಪರ್ಧಿಗಳ ನಡೆಗಳಿಂದ ಗ್ರಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಎಲ್ಲಕ್ಕೂ ಮಿಗಿಲಾಗಿ, ಗೆಲುವೆಂದರೆ ಪ್ರತಿಸ್ಪರ್ಧಿಯನ್ನು ಹಿಂದಿಕ್ಕುವುದು ಎನ್ನುವುದು ನಿಶ್ಚಿತವಾಗಿರುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚುತ್ತದೆ. ಇದರರ್ಥ, ಕಾಪೋರೇಟ್ಗಳು ಕೆಟ್ಟದ್ದೇನನ್ನೋ ಮಾಡಬೇಕು ಎಂದಲ್ಲ; ರಾಜಕಾರಣಿಗಳಂತೆ ಪ್ರತಿಸ್ಪರ್ಧಿಗಳ ಮೇಲೆ ಸದಾ ಒಂದು ಕಣ್ಣು ಇಟ್ಟೇ ಇರಬೇಕು, ಎಂಬುದು.

ಒಳಗಿನ ಸ್ಪರ್ಧೆಯೇ ಹೆಚ್ಚು ಅಪಾಯಕಾರಿಯೆಂಬ ಅರಿವು: ಪಕ್ಷದ ಹೊರಗಿರುವವರು ಮಾತ್ರವೇ ತಮ್ಮ ಪ್ರತಿಸ್ಪರ್ಧಿಗಳಲ್ಲ ಎಂಬುದು ಎಲ್ಲ ರಾಜಕಾರಣಿಗಳಿಗೂ ಗೊತ್ತಿರುವ ಸತ್ಯ. ಅವರು ಹೊರಗಿನವರಿಗೆ ಕೊಡುವ ‘ಪ್ರತಿಸ್ಪರ್ಧಿ’ ಸ್ಥಾನವನ್ನು ಕೆಲ ಒಳಗಿನವರಿಗೂ ಕೊಟ್ಟುಕೊಂಡಿರುತ್ತಾರೆ. ಸ್ವಪಕ್ಷದೊಳಗಿನ ಯಾರು ತಮ್ಮ ಸ್ಥಾನಪಲ್ಲಟಗೊಳಿಸುವ ಶಕ್ತಿಯುಳ್ಳವರು ಎಂಬುದರ ಸೂಕ್ಷ್ಮಗ್ರಹಿಕೆ ಹೊಂದಿರುತ್ತಾರೆ. ಅಂಥವರನ್ನು ಎಲ್ಲಿಟ್ಟಿರಬೇಕೋ ಅಲ್ಲಿಟ್ಟಿರುತ್ತಾರೆ. ಉದಾಹರಣೆಗೆ- ತಮ್ಮ ಪಕ್ಷದವರೇ ಆದರೂ ವೇದಿಕೆ ಹಂಚಿಕೊಂಡಾಗ ಯಾರನ್ನು ಎಷ್ಟು ಹೊಗಳಬೇಕು ಎನ್ನುವುದನ್ನು ಅಳೆದು-ಸುರಿದೇ ಮಾಡುತ್ತಾರೆ. ತಮ್ಮ ಅನುಯಾಯಿಗಳ್ಯಾರು ಮತ್ತು ಪಕ್ಷದೊಳಗಿನ ಪ್ರತಿಸ್ಪರ್ಧಿಯ ಅನುಯಾಯಿಗಳ್ಯಾರು ಎನ್ನುವುದರ ಲೆಕ್ಕ ಇಟ್ಟಿರುತ್ತಾರೆ. ಪಕ್ಷದೊಳಗಿನವರನ್ನೂ ‘ಟೇಕನ್ ಫಾರ್ ಗ್ರಾಂಟೆಡ್’ ಎಂಬಂತೆ ಪರಿಗಣಿಸುವುದಿಲ್ಲ.

ಕಾಪೋರೇಟ್ ಕಾರಿಡಾರ್ಗಳಲ್ಲಿ ಈ ರೀತಿಯ ವಿವೇಚನೆ ಕಡಿಮೆಯೆಂದೇ ಹೇಳಬೇಕು! ದೊಡ್ಡದೊಡ್ಡವರೂ ಆಂತರಿಕ ರಾಜಕಾರಣಕ್ಕೆ ಬಲಿಯಾಗುವುದನ್ನು ನೋಡಿದ್ದೇವೆ. ‘ಛೆ, ಆತನನ್ನು ನಮ್ಮವನೆಂದು ಬಗೆದಿದ್ದೆ…’ ಅಥವಾ ‘ಅವರು ನನ್ನ ಬಳಿ ಹೇಳಿದ್ದೇ ಬೇರೆ, ಬೋರ್ಡ್ ಎದುರು ಉಲಿದದ್ದೇ ಬೇರೆ’ ಅಥವಾ ‘ನಿನ್ನೆಯವರೆಗೂ ನಮ್ಮ ಪಾಳಯದಲ್ಲಿದ್ದವ ಇಂದು ನನಗೆ ಸೆಡ್ಡು ಹೊಡೆದು ನಿಂತಿದ್ದಾನೆ’ ಅಥವಾ ‘ನಮ್ಮ ಕಂಪನಿಯ ಒಳಗುಟ್ಟುಗಳು ಗೊತ್ತಿರುವುದು ಈ ಐವರಿಗೆ ಮಾತ್ರ. ಹಾಗಾದರೆ, ಅದು ಮಾಧ್ಯಮಗಳ ಬಳಿ ಹೋದದ್ದು ಹೇಗೆ?’- ಇತ್ಯಾದಿ ಪ್ರಸಂಗಗಳನ್ನು ನೋಡುತ್ತೇವೆ. ರಾಜಕಾರಣಿಗಳಲ್ಲಿ ಈ ರೀತಿಯ ಗೊಂದಲವಿರುವುದು ವಿರಳ; ನಮ್ಮವರು ಯಾರು, ಯಾರಲ್ಲ ಎನ್ನುವುದು ಹಗಲಿನಷ್ಟು ದಿಟ.

ಯಾರೂ ಶಾಶ್ವತ ವೈರಿಗಳಲ್ಲ: ಇದು, ಮೇಲಿನ ಎರಡು ಅಂಶಗಳಿಗೆ ತದ್ವಿರುದ್ಧವಾಗಿ ಕಂಡರೂ, ಮತ್ತೊಂದು ದೃಷ್ಟಿಯಿಂದ ನೋಡಿದರೆ ಪೂರಕವಾದ ಸತ್ಯ. ಹೇಗೆಂದು ವಿವರಿಸುತ್ತೇನೆ. ತನ್ನ ಸುತ್ತಲಿನ ರಾಜಕೀಯದಲ್ಲಿ ಇರುವ ಎಲ್ಲರೂ ತನ್ನ ಪ್ರತಿಸ್ಪರ್ಧಿಗಳಾಗಿರುವುದರಿಂದ, ತಾನು ಗೆಲ್ಲಲು ಇತರರನ್ನು ಮಣಿಸಬೇಕು. ಈ ಸ್ಥಿತಿಯಲ್ಲಿ ತಾನೊಬ್ಬನೇ ಆ ಕೆಲಸ ಮಾಡಬಲ್ಲೆನೇ ಅಥವಾ ತನಗೆ ಬೆಂಬಲದ ಅವಶ್ಯಕತೆ ಇದೆಯೇ ಎನ್ನುವ ಅಂದಾಜಿರುವುದು ಮುಖ್ಯ. ಹಾಗಾಗಿ ರಾಜಕಾರಣಿಗಳು ಆಗಿಂದಾಗ್ಗೆ ತಮ್ಮ ಅವಶ್ಯಕತೆಗಳ ಅನುಸಾರವಾಗಿ ತಮ್ಮ ಜತೆಗಾರರನ್ನು ಗುರುತಿಸಿಕೊಳ್ಳುತ್ತಿರುತ್ತಾರೆ. ಈ ಮೈತ್ರಿ ನಿಯಮಬದ್ಧವಾಗಿರುತ್ತದೆ ಹಾಗೂ ಯಾವುದೋ ಉದ್ದೇಶ ಈಡೇರುವವರೆಗೆ ಮಾತ್ರ ಅನುಷ್ಠಾನದಲ್ಲಿರುತ್ತದೆ. ಉದಾಹರಣೆಗೆ- ಒಂದು ಚುನಾವಣೆಯಲ್ಲಿ ಈ ಪಕ್ಷದೊಂದಿಗೂ ಮತ್ತೊಂದರಲ್ಲಿ ಆ ಪಕ್ಷದೊಂದಿಗೂ ಮಾಡಿಕೊಳ್ಳುವ ಮೈತ್ರಿ ಅಥವಾ ಸರ್ಕಾರವೊಂದಕ್ಕೆ ಹೊರಗಿನಿಂದ ಕೊಡುವ ಬೆಂಬಲ. ಇದರರ್ಥ ಇಷ್ಟೆ. ರಾಜಕಾರಣಿಗಳಿಗೆ ತಮ್ಮ ಗುರಿಯ ಬಗೆಗಿನ ಸ್ಪಷ್ಟತೆ ಮತ್ತು ಬದ್ಧತೆಯೇ ಎಲ್ಲ. ಇದನ್ನು ಸಮಯಸಾಧಕತನ ಎಂದು ಕರೆದರೂ ಅವರಿಗದು ಅಡ್ಡಿಯಿಲ್ಲ. ಆದರೆ, ಕಾಪೋರೇಟ್ಗಳಿಗೆ ಇದರಲ್ಲಿರುವ ಪಾಠ ಅಮೂಲ್ಯವಾದುದು. ಏಕೆಂದರೆ, ಕಾಪೋರೇಟ್ಗಳು ಪ್ರತಿಸ್ಪರ್ಧಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿಡುತ್ತಾರೆ- ಸ್ನೇಹಪರ ಮತ್ತು ವಿರೋಧಿ ಬಣ. ಈ ವಿರೋಧಿ ಬಣದೊಂದಿಗೆ ಕಾಪೋರೇಟ್ಗಳು ಯಾವ ವ್ಯವಹಾರವನ್ನೂ ಇಟ್ಟುಕೊಳ್ಳುವುದಿಲ್ಲ. ಇದರಿಂದ, ಅವರ ಕಲಿಕೆಗೂ, ದೀರ್ಘಕಾಲದಲ್ಲಿ ಯಶಸ್ಸಿಗೂ ಕುಂದು ಬರುತ್ತದೆ. ಇಂದಿನ ‘ಷೇರ್ಡ್ ಇಕಾನಮಿ’ ಅಥವಾ ‘ಹಂಚಿದ ಆರ್ಥಿಕತೆ’ಯಲ್ಲಿ ಅದು ಬದಲಾಗುತ್ತಿದೆಯಾದರೂ, ಕಾಪೋರೇಟ್ಗಳು ಈ ನಿಟ್ಟಿನಲ್ಲಿ ಕ್ರಮಿಸಬೇಕಾದ ದಾರಿ ಬಹಳಷ್ಟಿದೆ. ಈ ವಿಷಯದಲ್ಲಿ ರಾಜಕಾರಣಿಗಳು ಸಾಕಷ್ಟು ಮುಂದಿದ್ದಾರೆ.

ಸಂವಹನ: ತಾವು ಮಾಡಿದ್ದು ಕಟ್ಟಕಡೆಯ ಮನುಷ್ಯನನ್ನು ತಲುಪುವವರೆಗೂ ಅದನ್ನು ಒತ್ತಿಹೇಳುವುದು ರಾಜಕಾರಣಿಗಳ ಅಸಾಧಾರಣ ಸಾಮರ್ಥ್ಯಗಳಲ್ಲೊಂದು. ಅತಿಯಾಗಿ ಆಡಿದರೆ ಅಥವಾ ಹೇಳಿದ್ದನ್ನೇ ಪದೇಪದೆ ಹೇಳಿದರೆ ಯಾರಾದರೂ ಏನೆಂದುಕೊಂಡಾರೆಂದು ಅಳುಕುವ ರಾಜಕಾರಣಿಗಳು ಅಪರೂಪ. ರಾಜಕಾರಣಿಗಳು ಮಾಡುವ ಉತ್ಪ್ರೇಕ್ಷೆ ಹಾಸ್ಯದ ವಸ್ತುವಾಗುತ್ತದೆಯಾದರೂ ಅದು ಅವರನ್ನು ಹಿಮ್ಮೆಟ್ಟಿಸುವುದಿಲ್ಲ. ಕಾಪೋರೇಟ್ಗಳು ಹಿತಮಿತದಲ್ಲಿ ನಂಬಿಕೆಯುಳ್ಳವರು. ಎಲ್ಲವನ್ನೂ ಅಂಕಿ-ಅಂಶಗಳ ದೃಷ್ಟಿಯಿಂದ ನೋಡಿ ಪ್ರಬುದ್ಧ ನಿಲುವನ್ನು ತಳೆಯುವಂಥವರು. ಇವೆರಡೂ ಧೋರಣೆಗಳಿಗೆ ತನ್ನದೇ ಆದ ಬಲಾಬಲಗಳಿವೆಯಾದರೂ, ಸಂದರ್ಭಕ್ಕನುಗುಣವಾಗಿ ಕಾಪೋರೇಟ್ಗಳು ಮೈಚಳಿ ಬಿಟ್ಟು ಸಂವಹನ ಕ್ರಿಯೆಯಲ್ಲಿ ತೊಡಗಿದರೆ ಲಾಭವಾದೀತು. ಉದಾಹರಣೆಗೆ- ವಿನೂತನವಾದ ಉತ್ಪನ್ನ/ಸೇವೆಯನ್ನು ಮಾರುಕಟ್ಟೆಗೆ ಬಿಟ್ಟಾಗ ಅಥವಾ ಸಮಾಜಕ್ಕೆ ಒಳಿತಾಗುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ.

ಚುನಾವಣೆ/ಪಟ್ಟದ ಬಗ್ಗೆ ಸದಾ ಯೋಚಿಸುವುದು: ರಾಜಕಾರಣಿಗಳಿಗೆ ತಮ್ಮ ಇರುವಿನ ಉದ್ದಿಶ್ಯ ಸ್ಪಷ್ಟವಾಗಿ ಗೊತ್ತು. ಅವರು ಅಭಿನವ ಅರ್ಜುನರಿದ್ದಂತೆ. ಮೇಲೆ ಕಟ್ಟಿರುವ ಮೀನಿನ ಕಣ್ಣು ಕೆಳಗಿಟ್ಟಿರುವ ದ್ರವದ ಪ್ರತಿಬಿಂಬದಲ್ಲಿಯೂ ಸ್ಪಷ್ಟ. ಅದರ ಹೊರತು ಬೇರೇನೂ ಗೋಚರಿಸದ ತಾದಾತ್ಮ್ಯ ಹಾಗಾಗಿಯೇ, ಅವರ ಪ್ರತಿ ನಡೆಯನ್ನೂ ಮುಂದಿನ ಚುನಾವಣೆಯ ಜಯಾಪಜಯಗಳಿಗೆ ತಳಕುಹಾಕುವುದು ಸುಲಭ. ಹೊರನೋಟಕ್ಕೆ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ನಾಚಿಕೆ ಬಿಟ್ಟು ವೋಟು ಕೇಳುವುದು ಮಾತ್ರ ಕಾಣುತ್ತದಾದರೂ, ಅವರ ಚುನಾವಣಾ ಅಭಿಯಾನ ಮತ್ತು ಮತಾಗ್ರಹ ಸದಾಕಾಲ ಜಾರಿಯಲ್ಲಿ ಇದ್ದೇ ಇರುತ್ತದೆ. ‘ಗ್ರಾಹಕನೇ ಪ್ರಭು’ ಎನ್ನುವ ಕಾಪೋರೇಟ್ಗಳು ಆ ಭಾವವನ್ನು ರಾಜಕಾರಣಿಗಳಷ್ಟು ನಿರ್ಭಿಡೆಯಿಂದ ವ್ಯಕ್ತಪಡಿಸುವುದಿಲ್ಲ. ಆದುದರಿಂದಲೇ ಕೆಲವೊಮ್ಮೆ ಅನುಮಾನಕ್ಕೀಡಾಗುತ್ತಾರೆ.

ತಮ್ಮ ಬೆಂಬಲಿಗರನ್ನು ನಿರ್ವಹಿಸುವುದು: ಹೀಗೆ ನಿರ್ವಹಿಸುವ ಶೈಲಿಯಲ್ಲಿ ಕಾಪೋರೇಟ್ಗಳಿಗೂ ರಾಜಕಾರಣಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ದಿನ ನಾನೂ ನನ್ನ ನಾಯಕನಂತಾಗಬಲ್ಲೆ ಅಥವಾ ಆತನನ್ನೂ ಮೀರಿ ಮುನ್ನಡೆಯಬಲ್ಲೆ ಎಂದು ನಿಜವಾದ ಬೆಂಬಲಿಗ ನಂಬಿರುತ್ತಾನೆ. ನಾಯಕ ಮತ್ತು ಬೆಂಬಲಿಗನ ನಡುವಿನ ಈ ಬಂಧ, ಹಲವೊಮ್ಮೆ ಪಕ್ಷದ ಸಿದ್ಧಾಂತಕ್ಕೂ ಮೀರಿದ್ದಾಗಿರುತ್ತದೆ. ಹಾಗಾಗಿಯೇ, ರಾಜಕಾರಣಿಯೊಬ್ಬ ಪಕ್ಷ ತೊರೆದಾಗ ಆವರೆಗೂ ಆತನ ಪಕ್ಷಕ್ಕಾಗಿ ಬೆವರು ಸುರಿಸಿದ ಆತನ ಬೆಂಬಲಿಗರ ದಂಡು ತಮ್ಮ ಶ್ರಮವನ್ನೆಲ್ಲ ಹಿಂದೆಯೇ ಬಿಟ್ಟು ಆತನ ನಿಲುವನ್ನು ಮರುಮಾತಿಲ್ಲದೆ ಅನುಮೋದಿಸುತ್ತದೆ. ಒಂದರ್ಥದಲ್ಲಿ ರಾಜಕಾರಣಿಗಳು ತಮ್ಮ ಬೆಂಬಲಿಗರೊಂದಿಗೆ ಮಾಡುವುದು ಕನಸಿನ ವ್ಯಾಪಾರ.

ದುಡ್ಡು, ಪದವಿಗಳ ನಿಧಾನಗತಿಯ ಅಭಿವೃದ್ಧಿಯ ಬಗ್ಗೆ ಮಾತ್ರ ಮಾತನಾಡುವ ಕಾಪೋರೇಟ್ಗಳು ಹೀಗೆ ಕನಸನ್ನು ಮಾರುವಲ್ಲಿ ಸೋಲುತ್ತಾರೆ. ಸಂಸ್ಥೆ ಎಲ್ಲರಿಗಿಂತ ದೊಡ್ಡದು ಮತ್ತು ‘ಯಾರನ್ನು ಬೇಕಾದರೂ ಕೈಬಿಡಬಹುದು’ ಎನ್ನುವ ನಂಬಿಕೆ ಮೂಡಿಸುತ್ತಾರೆ. ಇದಕ್ಕೆ ಅನುಗುಣವಾಗಿ ಉದ್ಯೋಗಿಗಳು ಸಹ ತಮ್ಮ ಅಯ್ಕೆಗಳನ್ನು ಮುಕ್ತವಾಗಿಟ್ಟುಕೊಂಡಿರುತ್ತಾರೆ! ಒಂದರ್ಥದಲ್ಲಿ ರಾಜಕಾರಣಿ ತನ್ನ ಅನುಯಾಯಿಗಳನ್ನು ಸಾಕಿ ಸಲಹುತ್ತಾನೆ. ಕಾಪೋರೇಟ್ಗಳು ಹಾಗಲ್ಲ; ಪಾತ್ರವನ್ನು ಮಾತ್ರ ಪೋಷಿಸುತ್ತವೆ, ಪಾತ್ರಧಾರಿಯನ್ನಲ್ಲ!

ಆಶ್ವಾಸನೆ ನೀಡುವುದು: ಬದ್ಧತೆ ಇರಲಿ ಬಿಡಲಿ, ಬಾಯಿಮಾತಿನಲ್ಲಂತೂ ಕಮಿಟ್ ಆಗುವುದು ರಾಜಕಾರಣಿಗಳಿಗೆ ಸರಾಗದ ವಿಷಯ! ಮಾಡುವವರನ್ನು ನಂಬುವಷ್ಟೇ ಜನರು ಮಾತನಾಡುವವರನ್ನೂ ನಂಬುತ್ತಾರೆಂಬುದು ರಾಜಕಾರಣಿಗಳಿಗೆ ಗೊತ್ತು. ಹಾಗಾಗಿಯೇ, ಎಗ್ಗಿಲ್ಲದೆ ಆಶ್ವಾಸನೆಗಳನ್ನು ನೀಡುತ್ತಾರೆ. ಕಾಪೋರೇಟ್ಗಳು ಅದಕ್ಕೆ ತದ್ವಿರುದ್ಧ! ಅವರು ಆಶ್ವಾಸನೆ ನೀಡಲು ಹಿಂಜರಿಯುತ್ತಾರೆ. ಸಂವಹನದ ವಿಷಯದಲ್ಲಿ ರಕ್ಷಣಾತ್ಮಕ ಧೋರಣೆ ತಳೆಯುತ್ತಾರೆ. ನಾವು ಹೇಳಿದ್ದನ್ನು ಮಾಡಲಾಗದಿದ್ದರೆ ಗತಿಯೇನು ಎಂದು ಅಂಜುತ್ತಾರೆ. ಬಲವಂತ ಮಾಡಿದರೆ, ‘ನಮ್ಮ ಉತ್ಪನ್ನವೇ ಜನರೊಂದಿಗೆ ಮಾತನಾಡುತ್ತದೆ’ ಎಂದು ನುಣುಚಿಕೊಳ್ಳುತ್ತಾರೆ. ಕಾಪೋರೇಟ್ಗಳು ಮಾಡುವಲ್ಲಿ ತೋರಿಸುವ ಬದ್ಧತೆಯಲ್ಲಿ ಸ್ವಲ್ಪವಾದರೂ ಮಾತನಾಡಿ ಆಶ್ವಾಸನೆ ನೀಡುವಲ್ಲಿಯೂ ತೋರಿಸಿದರೆ, ತಮ್ಮ ಗ್ರಾಹಕ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು/ಕುರ್ಚಿಗಳನ್ನು ರಕ್ಷಿಸಿಕೊಳ್ಳಬಹುದು.

ಮತ್ತೊಮ್ಮೆ ಹೇಳುತ್ತಿದ್ದೇನೆ. ಇದ್ಯಾವುದೂ ರಾಜಕಾರಣಿಗಳ ನಕಾರಾತ್ಮಕ ಚಾಣಾಕ್ಷತನದ ಅಥವಾ ಕೃತ್ರಿಮದ ಅನುಮೋದನೆಯಲ್ಲ. ಆದರೆ, ಗಾಳಿಯಿಂದ ಪರಾಗಸ್ಪರ್ಶವಾಗಬಹುದಾದರೆ, ಎಲ್ಲಿಂದಲಾದರೂ ಒಳ್ಳೆಯದು ಆಗಬಹುದೆಂಬ ಆಶಯದಿಂದ ಬಂದ ಆಗ್ರಹ. ರಾಜಕಾರಣಿಗಳ ಕ್ರಿಯೆಗಳ ಪರಿಣಾಮವನ್ನು ವಿಶ್ಲೇಷಿಸುವ ಮಟ್ಟಕ್ಕಿಳಿಯದೆ, ಕೇವಲ ಮೇಲ್ಪದರದ ಅವರ ನಡೆಗಳನ್ನು ಮಾತ್ರ ಗಮನಿಸಿ, ಅದರಲ್ಲಿರುವ ಪಾಠಗಳನ್ನಷ್ಟೇ ದಕ್ಕಿಸಿಕೊಳ್ಳುವ ಸರಳ ಪ್ರಯತ್ನವಿದು. ಅದು ಈ ಲೇಖನದ ಮಿತಿಯೂ ಹೌದು. ಆದರೆ, ಒಂದಂತೂ ಸತ್ಯ. ಮೇಲಿನ ಅಂಶಗಳಲ್ಲಿ ವಿವರಿಸಲಾಗಿರುವ, ರಾಜಕಾರಣಿಗಳಿಗೆ ತಮ್ಮ ಗುರಿಯ ಬಗ್ಗೆ ಇರುವಷ್ಟು ಹಂಬಲ ಮತ್ತು ಸ್ಪಷ್ಟತೆ, ಕಾಪೋರೇಟ್ಗಳಿಗೂ, ನಮ್ಮ-ನಿಮ್ಮಂಥ ಸಾಮಾನ್ಯರಿಗೂ ಇದ್ದರೆ ಎಷ್ಟೋ ಒಳಿತು.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *