ಕಾಪೋರೇಟರ್ಸ್ ಮಾಜಿಗಳು!

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ಎಲ್ಲ 67 ಸದಸ್ಯರು ಇಂದಿನಿಂದ ಮಾಜಿಗಳಾಗಲಿದ್ದಾರೆ. ಸದಸ್ಯರ 5 ವರ್ಷಗಳ ಅವಧಿ ಬುಧವಾರ (ಮಾ. 6) ಕೊನೆಗೊಳ್ಳಲಿದೆ. ಇದರೊಂದಿಗೆ ಪಾಲಿಕೆಯಲ್ಲಿ ಬಿಜೆಪಿ ತನ್ನ ಆಡಳಿತದ ಸತತ 2ನೇ ಅವಧಿಯನ್ನು ಮುಗಿಸಿದಂತಾಗಿದೆ.

ಹಾಲಿ ಪಾಲಿಕೆ ಸದಸ್ಯರು ಮಾರ್ಚ್ 7, 2014ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಪೂರ್ಣ 5 ವರ್ಷಗಳ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಂಡು ಬುಧವಾರಕ್ಕೆ ಜನಪ್ರತಿನಿಧಿಗಳ ಆಡಳಿತ ಕೊನೆಗೊಳ್ಳುತ್ತಿದೆ. ಇನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹು-ಧಾ ಮಹಾನಗರ ಪಾಲಿಕೆಯ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಸರ್ಕಾರಿ ಆದೇಶ ಬುಧವಾರ ಸಂಜೆ ಪ್ರಕಟವಾಗುವ ಸಾಧ್ಯತೆ ಇದೆ. ಪ್ರಾದೇಶಿಕ ಆಯುಕ್ತರ ಕೇಂದ್ರ ಸ್ಥಾನ ಬೆಳಗಾವಿ ಆಗಿರುವುದರಿಂದ ಧಾರವಾಡ ಜಿಲ್ಲಾಧಿಕಾರಿ ಪಾಲಿಕೆಯ ಪ್ರಭಾರ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಶಿವು ಹಿರೇಮಠ, ಅಶ್ವಿನಿ ಮಜ್ಜಗಿ, ಮಂಜುಳಾ ಅಕ್ಕೂರ, ಡಿ.ಕೆ. ಚವ್ಹಾಣ ಹಾಗೂ ಸುಧೀರ ಸರಾಫ್ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಿವು ಹಿರೇಮಠ ಮೇಯರ್ ಆಗಿದ್ದಾಗ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಇತ್ತು. ಬಳಿಕ ಜೆಡಿಎಸ್ ಜತೆ ಮೈತ್ರಿ ಕಡಿದುಕೊಂಡ ಬಿಜೆಪಿ ಮುಂದಿನ 4 ವರ್ಷ ಸ್ವತಂತ್ರವಾಗಿ ಅಧಿಕಾರ ನಡೆಸಿತು. ಮೈತ್ರಿ ಒಪ್ಪಂದದಂತೆ ಪ್ರತಿ ವರ್ಷ ಉಪ ಮೇಯರ್ ಸ್ಥಾನ ಹಾಗೂ 1 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಜೆಡಿಎಸ್​ಗೆ ಸಿಗಬೇಕಿತ್ತು. ಆದರೆ, ಒಟ್ಟು 5 ವರ್ಷಗಳ ಕಾಲ ಮೇಯರ್, ಉಪ ಮೇಯರ್ ಹಾಗೂ ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಆನಂದಿಸಿದ್ದು ಈಗ ಇತಿಹಾಸ. ಬಿಜೆಪಿಯಿಂದ 33, ಕಾಂಗ್ರೆಸ್​ನಿಂದ 22, ಜೆಡಿಎಸ್​ನಿಂದ 9, ಪಕ್ಷೇತರರು ಇಬ್ಬರು ಹಾಗೂ ಕೆಜೆಪಿಯಿಂದ ಒಬ್ಬರು ಪಾಲಿಕೆಗೆ ಆಯ್ಕೆಯಾಗಿದ್ದರು. ತರುವಾಯ ಪಕ್ಷೇತರರಲ್ಲಿ ಒಬ್ಬರು ಬಿಜೆಪಿಗೆ, ಇನ್ನೊಬ್ಬರು ಕಾಂಗ್ರೆಸ್ಸಿಗೆ ಸೇರ್ಪಡೆಯಾದರು. 2018ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್​ನ ಐವರು ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡರು.

ಗೌಜು ಗದ್ದಲ: 5 ವರ್ಷದ ಅವಧಿಯಲ್ಲಿ ರಸ್ತೆಗಳ ದುರಸ್ತಿಗಿಂತ ಅಗೆದಿದ್ದೇ ಜಾಸ್ತಿ. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆಗಿಂತ ಗೌಜು ಗದ್ದಲಗಳೇ ಕೇಳಿಬಂದಿದ್ದೇ ಹೆಚ್ಚು. ಹಿಂದಿನ ಕಾಂಗ್ರೆಸ್ ಸರ್ಕಾರ 117 ಕೋಟಿ ರೂ. ಪಿಂಚಣಿ ಅನುದಾನ ಬಿಡುಗಡೆ ಮಾಡದೇ ಇರುವ ಮೂಲಕ ಪಾಲಿಕೆ ಚಟುವಟಿಕೆಗಳಿಗೆ (ಉದ್ದೇಶಪೂರ್ವಕ?) ಅಸಹಕಾರ ಉಂಟುಮಾಡಿತು. ಇದರಿಂದ ಎಲ್ಲ ಪಕ್ಷದ ಸದಸ್ಯರೂ ತಂತಮ್ಮ ವಾರ್ಡ್​ಗೆ ತಲಾ ಒಂದುವರೆ ಕೋಟಿ ರೂ.ಗಳಷ್ಟು ಅನುದಾನ ಕೊರತೆ ಅನುಭವಿಸಿದ್ದು ನಿಜ.

ಅಕ್ಟೋಬರ್​ನಲ್ಲಿ ಚುನಾವಣೆ?

ಅವಧಿ ಮುಗಿದ ಕೂಡಲೇ ಚುನಾವಣೆ ನಡೆಯಬೇಕಿತ್ತು. ಆದರೆ, ಈ ಬಾರಿಯೂ ಹಾಗೆ ಆಗುತ್ತಿಲ್ಲ. ಹು-ಧಾ ಸೇರಿದಂತೆ ರಾಜ್ಯದ ವಿವಿಧೆಡೆ ಕೆಲವರು ರಾಜ್ಯ ಸರ್ಕಾರ ಘೊಷಿಸಿರುವ ವಾರ್ಡ್​ವಾರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ ಹೋಗಿರುವುದರಿಂದ ಚುನಾವಣೆ ಮುಂದಕ್ಕೆ ಹೋಗಿದೆ. ಅಕ್ಟೋಬರ್​ನಲ್ಲಿ ನಡೆಯಬಹುದು. ಲೋಕಸಭಾ ಚುನಾವಣೆ ಪ್ರಕ್ರಿಯೆ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಇದರಿಂದ ಅಕ್ಟೋಬರ್​ನಲ್ಲಿ ಚುನಾವಣೆ ನಡೆಸಬಹುದೆಂಬ ಲೆಕ್ಕಚಾರವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಪ್ರಾತಿನಿಧ್ಯವನ್ನು ಖಾಲಿ ಇಡಬಾರದು ಎಂದು ಸಂವಿಧಾನ ಹಾಗೂ ಕಾನೂನು ಹೇಳುತ್ತದೆ. ಮುಂದಿನ ಅವಧಿಗೆ ಹು-ಧಾ ಮಹಾನಗರ ಪಾಲಿಕೆ 82 ಸದಸ್ಯ ಬಲವನ್ನು ಹೊಂದಲಿದೆ.