ಗಂಗಾವತಿ: ಇತಿಹಾಸ ಓದುವುದರ ಜತೆಗೆ ಇತಿಹಾಸ ಸೃಷ್ಟಿಸುವ ಉನ್ನತ ಸಾಧನೆಯತ್ತ ವಿದ್ಯಾರ್ಥಿಗಳು ಗಮನಹರಿಸಬೇಕಿದೆ ಎಂದು ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶ ಮತ್ತು ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಮಲ್ಲನಗೌಡ ಮಾಲಿ ಪಾಟೀಲ್ ಹೇಳಿದರು.

ತಾಲೂಕಿನ ಮರಳಿಯ ರುದ್ರೇಶನಗರದ ಎಂಎಸ್‌ಎಂಎಸ್ ಸಮೂಹ ಶಿಕ್ಷಣ ಸಂಸ್ಥೆಯ ಬಿಇಡಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನಿರೀಕ್ಷಿತ ಗುರಿ ಮತ್ತು ಅಧ್ಯಯನದ ಮೂಲಕ ಉನ್ನತ ಸಾಧನೆ ಮಾಡಬೇಕಿದ್ದು, ಕಲಿಯುವ ವಯಸ್ಸಿನಲ್ಲಿ ಅನ್ಯ ಚಟುವಟಿಕೆಗಳತ್ತ ಗಮನಹರಿಸಬಾರದು. ಕಾನೂನಿನ ಅರಿವು ಪ್ರತಿಯೊಬ್ಬರಿಗೆ ಮುಖ್ಯವಾಗಿದೆ ಎಂದರು. ಕಾನೂನಿನ ಅರಿವು ಮತ್ತು ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿ, ಉನ್ನತ ಕಲಿಕೆ ಮತ್ತು ಸಾಧನೆ ಮೂಲಕ ತಾಲೂಕಿನ ಜೀರಾಳ ಕಲ್ಗುಡಿಯ ಮಲ್ಲನಗೌಡ ಮಾಲಿ ಪಾಟೀಲ್ ಅವರು, ನ್ಯಾಯಾಂಗ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಬೇಕಿದೆ ಎಂದರು.
ವಿವಿಧ ವಿಭಾಗದ ಪ್ರಾಚಾರ್ಯರಾದ ಹುಸೇನ್‌ಪೀರಾ, ಮಲ್ಲಿಕಾರ್ಜುನಸ್ವಾಮಿ, ವೀರೇಶ ಅಚಾರ್‌ನರಸಾಪುರ ಸೇರಿ ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳಿದ್ದರು.