ಸಿನಿಮಾ

ಕಾಡಾನೆ ಹಾವಳಿ ಪ್ರದೇಶದಲ್ಲಿ ಭಯಮುಕ್ತ ಮತದಾನಕ್ಕೆ ಅವಕಾಶ

ಹಾಸನ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಡಾನೆ ಹಾವಳಿ ಇರುವ ಪ್ರದೇಶಗಳಾದ ಆಲೂರು, ಸಕಲೇಶಪುರ ಮತ್ತು ಬೇಲೂರಿನಲ್ಲಿ ಕ್ಷೇತ್ರದಲ್ಲಿ 60 ಮತಗಟ್ಟೆ ಕೇಂದ್ರಗಳನ್ನು ಗುರುತಿಸಲಾಗಿದೆ. ಭಾರಿ ಕಟ್ಟೆಚ್ಚರ ವಹಿಸಿ ಜನರು ಭಯಮುಕ್ತರಾಗಿ ಮತ ಚಲಾಯಿಸಲು ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಈಗಾಗಲೇ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟುಕೊಂಡು ಆನೆಗಳ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಟ್ಟಿದೆ. ಮತದಾನಕ್ಕೆ ತೆರಳುವ ಯಾವುದೇ ವ್ಯಕ್ತಿಗೂ ಕೂಡ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಮಂಗಳವಾರ ಬೆಳಗ್ಗೆಯಿಂದಲೇ ಆಲೂರು -ಸಕಲೇಶಪುರ, ಬೇಲೂರು ಭಾಗದಲ್ಲಿರುವ ಕಾಡಾನೆಗಳನ್ನು ಗುರುತು ಮಾಡಿ ಅವುಗಳು ಗ್ರಾಮಕ್ಕೆ ಬರದಂತೆ ಈಗಾಗಲೇ ತಡೆಯೊಡ್ಡುವ ಕೆಲಸಗಳು ನಡೆಯುತ್ತಿವೆ. ಅಧಿಕಾರಿಗಳ ತಂಡ ಆ ಭಾಗದಲ್ಲಿ ಬೀಡು ಬಿಟ್ಟಿದ್ದು, ಆನೆ ಗುಂಪುಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಈ ಮೂರು ತಾಲ್ಲೂಕುಗಳಲ್ಲಿ ಹೆಚ್ಚು ಆನೆ ದಾಳಿಗೆ ಒಳಪಟ್ಟಿರುವ ಮತಗಟ್ಟೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ಒದಗಿಸಲಾಗಿದೆ. ಇದರ ಜತೆಗೆ ಮಂಗಳವಾರ ಮತ್ತು ಬುಧವಾರ ಆನೆಗಳ ಇರುವಿಕೆ ಮತ್ತು ಸಂಚಾರದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ದಿನವೂ ಕೂಡ ಆ ಭಾಗದ ಹಲವರ ಮೊಬೈಲ್‌ಗಳಿಗೆ ವಾಟ್ಸಾಪ್ ಮೂಲಕವೂ ಸಂದೇಶ ರವಾನಿಸಲಾಗುತ್ತಿದೆ.
ಸಕಲೇಶಪುರ ಭಾಗದಲ್ಲಿ 15 ಕಡೆ, ಆಲೂರಿನಲ್ಲಿ 5 ಕಡೆ, ಬೇಲೂರಿನಲ್ಲಿ 4 ಕಡೆಗಳಲ್ಲಿ ಕಾಡಾನೆಗಳ ಇರುವಿಕೆಯ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದೆ. ಹೆಚ್ಚಾಗಿ ಆನೆಗಳು ಬೆಳಗ್ಗಿನ ಜಾವ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರ ಮಾಡುತ್ತವೆ. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ.
ಈ ಮೂರು ತಾಲ್ಲೂಕಿನ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ಕಾರ್ಯೋನ್ಮುಖರಾಗಿದ್ದು, ಒಂದು ವೇಳೆ ಕಾಡಾನೆಗಳು ಮತಗಟ್ಟೆ ಕೇಂದ್ರದ ವ್ಯಾಪ್ತಿಗೆ ಅಥವಾ ಗ್ರಾಮಗಳ ಸಮೀಪಕ್ಕೆ ಏನಾದರೂ ಬಂದರೆ ಅವುಗಳನ್ನು ಓಡಿಸಲು ಅರಣ್ಯ ಇಲಾಖೆ ಸನ್ನದ್ಧವಾಗಿದೆ. ಪ್ರತಿ ಅರಣ್ಯ ವಲಯದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳೊಂದಿಗೆ ಆ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ.

ವಿಶೇಷ ತಂಡ ರಚನೆ
ಮತದಾನ ಸಂದರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಪ್ರತಿ ತಂಡವು ಮೂರು ತಾಲೂಕುಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.
ಸರ್ಕಾರ ರಚನೆ ಮಾಡಿರುವಂತಹ ಟಾಸ್ಕ್ ಫೋರ್ಸ್ ಸಮಿತಿಯು ಈಗಾಗಲೇ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ. ಇದರಲ್ಲಿ 32 ಜನ ಸಿಬ್ಬಂದಿ ಇದ್ದು, ಇದರ ಜತೆಗೆ ಕ್ಷೀಪುರ ಕಾರ್ಯಾಚರಣೆ ಪಡೆ ರಚಿಸಲಾಗಿದೆ. ಅದರಲ್ಲಿ ಕೂಡ 108 ಸಿಬ್ಬಂದಿ, 20 ಉಪ ವಲಯಾಧಿಕಾರಿಗಳು, 6 ಜನ ವಲಯ ಅರಣ್ಯ ಅಧಿಕಾರಿಗಳು, 32 ಜನ ಗಸ್ತು ವನಪಾಲಕರು ಸೇರಿದಂತೆ ಅರಣ್ಯ ಇಲಾಖೆಯ ವಾಹನದಲ್ಲಿ ಪ್ರತಿ ಹಳ್ಳಿಗಳಲ್ಲಿ ಕೂಡ ಆನೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಮತ್ತು ಜನರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಡಿಎಫ್‌ಒ ಹರೀಶ್ ಅವರು ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್