ಕಾಟಾಚಾರಕ್ಕೆ ಸೀಮಿತವಾದ ಸಭೆ!

ರೋಣ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಸೋಮವಾರ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಗಾಗಿ ಮತಗಟ್ಟೆಯ ಅಧಿಕಾರಿಗಳಿಗೆ ಎಆರ್​ಒ (ಸಹಾಯಕ ಚುನಾವಣಾ ಅಧಿಕಾರಿ) ನೇತೃತ್ವದಲ್ಲಿ ನಡೆಸಿದ ಸಭೆಯು ಕಾಟಾಚಾರಕ್ಕಷ್ಟೇ ಸೀಮಿತವಾಯಿತು.

ಎಆರ್​ಒ ಪ್ರಾಣೇಶರಾವ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಮತಗಟ್ಟೆಯ ಅಧಿಕಾರಿಗಳ ಸಭೆಯ ಕರೆಯಲಾಗಿತ್ತು. ಬಹುತೇಕ ಮತಗಟ್ಟೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರಾಗಿದ್ದು ದೂರ ದೂರದ ಊರುಗಳಿಂದ ಸಭೆಗೆ ನಿಗದಿತ ಸಮಯಕ್ಕೆ ಆಗಮಿಸಿದ್ದರು. ಆದರೆ, ಸಂಜೆ 5 ಗಂಟೆಯಾದರೂ ಸಭೆ ಪ್ರಾರಂಭವಾಗದ್ದರಿಂದ ರೊಚ್ಚಿಗೆದ್ದ ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು. ‘ದೂರದೂರದ ಊರುಗಳಿಂದ ನಾವು ಆಗಮಿಸಿದ್ದು, ಮರಳಿ ಗ್ರಾಮಕ್ಕೆ ತೆರಳಲು ನಮಗೆ ಬಸ್​ಗಳ ವ್ಯವಸ್ಥೆಯಿಲ್ಲ. ನೀವು ಸಭೆ ಲೇಟಾಗಿ ಆರಂಭವಾಗುತ್ತದೆ ಎಂದು ತಿಳಿಸಿದ್ದರೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನಾದರೂ ಮಾಡಿಕೊಳ್ಳುತ್ತಿದ್ದೆವು. ಮೊದ್ಲೇ ನಮ್ಗೆ ಸರಿಯಾಗಿ ಸಂಬಳವಾಗುತ್ತಿಲ್ಲ. ಅದರಲ್ಲಿ ಈ ರೀತಿ ತೊಂದರೆಯಾದರೆ ನಮ್ಮ ಜೀವನ ನಡೆಸುವುದು ಹೇಗೆ’ ಎಂದು ತರಾಟೆಗೆ ತಗೆದುಕೊಂಡರು.

ಆಗ ಎಚ್ಚೆತ್ತುಗೊಂಡ ಎಆರ್​ಒ ಪ್ರಾಣೇಶರಾವ ತಹಸೀಲ್ದಾರ್ ಸೆಕ್ಟರ್ ಆಫೀಸರ್, ಫ್ಲಾಯಿಂಗ್ ಸ್ಕಾ್ವ್ಯಡ್ ಸಭೆಯನ್ನು ಮೊಟಕುಗೊಳಿಸಿ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಿದರು. ಆದರೆ, ಸಭೆಯಲ್ಲಿ ಮಹಿಳಾ ಮತಗಟ್ಟೆಯ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಸರಿಯಾಗಿ ಮಾಡದ ಕಾರಣ ಬಹುತೇಕ ಮಹಿಳೆಯರು ಎದ್ದು ನಿಂತಿದ್ದರು.

ದೂರದೂರದ ಊರುಗಳಿಂದ ಮಧ್ಯಾಹ್ನ 2 ಗಂಟೆಗೆ ಸಭೆಗೆ ಬಂದಿದ್ದೇವೆ. ಸಂಜೆ 5 ಗಂಟೆಯಾದರೂ ಸಭೆ ಆರಂಭವಾಗಲಿಲ್ಲ. ಸಭೆಯಲ್ಲಿ ಕುಳಿತುಕೊಳ್ಳುಲು ವ್ಯವಸ್ಥೆ ಮಾಡಿಲ್ಲ. ನಾವು ಸ್ವಲ್ಪ ತಡವಾಗಿ ಬಂದರೆ ನಮ್ಮನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಹಲವಾರು ಸೂಚನೆ ನೀಡಿದ್ದಾರೆ. ಆದರೆ, ಮೇಲಧಿಕಾರಿಗಳಿಗೆ ಇವು ಅನ್ವಯಿಸುವುದಿಲ್ಲವೇ ಎಂದು ಮತಗಟ್ಟೆ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡರು.

ಪತ್ರಕರ್ತರಿಗಿಲ್ಲ ಪ್ರವೇಶ: ಚುನಾವಣೆಯ ಸೆಕ್ಟರ್ ಆಫೀಸರ್, ಫ್ಲಾಯಿಂಗ್​ಸ್ಕಾ್ವ್ಯಡ್, ಮತಗಟ್ಟೆ ಅಧಿಕಾರಿ ಸೇರಿದಂತೆ ಯಾವುದೇ ಸಭೆಗಳಿಗೆ ಪತ್ರಕರ್ತರನ್ನು ಒಳಗೆ ಬಿಡಬೇಡಿ ಎಂದು ಎಆರ್​ಒ ಪ್ರಾಣೇಶರಾವ ಸೂಚಿಸಿದ್ದಾರೆ ಎಂದು ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿಯೊಬ್ಬರು ತಿಳಿಸಿದರು.